ಧಾರವಾಡ:
ಸರಿಯಾದ ನಿರ್ಧಾರ ಮತ್ತು ಪರಿಶ್ರಮದಿಂದ ವೈದ್ಯರು ಸಮಾಜದಲ್ಲಿ ಉತ್ತುಂಗಕ್ಕೆ ಏರಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ಇಲ್ಲಿಯ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಬುಧವಾರ ನಡೆದ ಎಸ್‌ಡಿಎಂ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದ ಅವರು, ಉತ್ತಮ ಆರೋಗ್ಯ ಮತ್ತು ನೆಮ್ಮದಿಗೆ ಸರಿಯಾದ ಜೀವನ ಶೈಲಿಯು ಕಾರಣ. ವಿದ್ಯಾರ್ಥಿಗಳು ಹೆತ್ತವರ ತ್ಯಾಗ ಮತ್ತು ಕನಸನ್ನು ನನಸಾಗಿಸುವಲ್ಲಿ ಕಾರ್ಯನಿರತರಾಗಬೇಕು. ಮಾನವೀಯತೆ ಮತ್ತು ವಿನಂಮೃತೆಯಿಂದ ವೈದ್ಯರು ರೋಗಿಯ ಸೇವೆ ಮಾಡಬೇಕು. ರೋಗಿಗಳಿಗೆ ವೈದ್ಯರ ಮೇಲೆ ವಿಶ್ವಾಸ ಮತ್ತು ಸಂತೋಷವಾಗಲು ಸದಾ ಅವರನ್ನು ವಿಚಾರಿಸುತ್ತಿರಬೇಕು ಎಂದರು.ಅಗ್ನಿ ಸುರಕ್ಷಾ ಸ್ಥಾಪಕ ನಿರ್ದೇಶಕ ಡಾ. ಪ್ರೇಮಾ ಧನರಾಜ್ ಘಟಿಕೋತ್ಸವ ಭಾಷಣ ಮಾಡಿ, ವಿದ್ಯಾರ್ಥಿಗಳು ಅಧ್ಯಯನದ ಕಡೆ ಗಮನ ಹರಿಸುತ್ತಾ ಸಮಸ್ಯೆ ನಿಭಾಯಿಸಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ನೈತಿಕತೆಯ ಪ್ರಾಮುಖ್ಯತೆಯನ್ನು ಹೆತ್ತವರು ತಿಳಿಸಬೇಕು. ಮತ್ತೊಬ್ಬರನ್ನು ತುಲನೆ ಮಾಡಿಕೊಳ್ಳದೇ ನಾವು ಸದಾ ಖುಷಿ-ಸಂತೋಷದಿಂದಿರಬೇಕು. ಕಠಿಣ ಪರಿಶ್ರಮ, ನೈತಿಕತೆ, ಮಾನವೀಯತೆಯಿಂದ ಒಬ್ಬ ಪರಿಪೂರ್ಣ ವ್ಯಕ್ತಿ ಎನಿಸಬಹುದು. ಪ್ರತಿಯೊಬ್ಬರೂ ನಿಖರವಾದ ಗುರಿ ಹೊಂದುವುದರೊಂದಿಗೆ ಗುರಿ ಮುಟ್ಟುವಂತೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಈ ವೇಳೆ 115 ಪದವೀಧರರು ಮತ್ತು 180 ಸ್ನಾತ್ತಕೋತ್ತರ ಪದವೀಧರರು ತಮ್ಮ ಪದವಿಗಳನ್ನು ಮುಖ್ಯ ಅತಿಥಿಗಳಿಂದ ಪಡೆದರು. ಒಂಭತ್ತು ಪ್ರತಿಭಾವಂತ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಚಿನ್ನದ ಪದಕ ಪಡೆದರು. ಉಪ ಕುಲಪತಿ ಡಾ. ನಿರಂಜನ್ ಕುಮಾರ ಸ್ವಾಗತಿಸಿದರು. ಕುಲಸಚಿವ ಡಾ. ಚಿದೇಂದ್ರ ಶೆಟ್ಟರ ವಿಶ್ವವಿದ್ಯಾಲಯದ ವಾರ್ಷಿಕ ವರದಿ ಮಂಡಿಸಿದರು. ಸಹ ಉಪ ಕುಲಪತಿ ಡಾ. ಎಸ್.ಕೆ. ಜೋಶಿ ಪ್ರತಿಜ್ಞಾ ವಿಧಿ ಬೋಧಿಸಿದರು. ಪರೀಕ್ಷಾ ನಿಯಂತ್ರಕ ಡಾ. ಸತ್ಯಬೋಧ ಗುತ್ತಲ ಪದವೀಧರರ ಅಂಕಿ-ಅಂಶ ವಿವರಿಸಿದರು. ಘಟಿಕೋತ್ಸವದಲ್ಲಿ ಎಸ್.ಡಿ.ಎಂ. ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ, ಆಡಳಿತ ನಿರ್ದೇಶಕ ಸಾಕೇತ್ ಶೆಟ್ಟಿ, ಡಾ. ನೈದಿಲ ಶೆಟ್ಟಿ, ವಿ. ಜೀವಂಧರ ಕುಮಾರ, ಹಣಕಾಸು ಅಧಿಕಾರಿ ವಿ.ಜಿ. ಪ್ರಭು ಇದ್ದರು.ಡಿ. ವೀರೇಂದ್ರ ಹೆಗ್ಗಡೆ ಅವರು, ಡಾ. ಪ್ರೇಮಾ ಧನರಾಜ್ ಮತ್ತು ಡಾ. ನಿರಂಜನ್ ಕುಮಾರ, ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಉಪ ಪ್ರಾಂಶುಪಾಲ ಡಾ. ದೀಪಕ ಕನಬೂರ ಚಿನ್ನದ ಪದಕ ವಿಜೇತರ ಪಟ್ಟಿ ಮಂಡಿಸಿದರು. ಡಾ. ಸುರೇಶ ಮನಗುತ್ತಿ ಮತ್ತು ಡಾ. ಅಂಕಿತಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪ ಕುಲಸಚಿವ ಡಾ. ಅಜಂತಾ ಜಿ.ಎಸ್. ವಂದಿಸಿದರು.