ಪ್ರತಿಯೊಬ್ಬ ಪೌರಕಾರ್ಮಿಕರ ಶ್ರಮ ಗೌರವಿಸಿ

KannadaprabhaNewsNetwork |  
Published : Sep 24, 2026, 02:00 AM IST
ಹೊಸಪೇಟೆ ನಗರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಗರಸಭೆಯಿಂದ ಬುಧವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪೌರಕಾರ್ಮಿಕರೊಂದಿಗೆ ಜಿಲ್ಲಾಡಳಿತ ಸದಾ ಇರುತ್ತದೆ

ಹೊಸಪೇಟೆ: ಪೌರ ಕಾರ್ಮಿಕರ ನಿತ್ಯ ಕಾಯಕದ ಫಲದಿಂದ ನಗರ, ಪಟ್ಟಣ, ಪ್ರತಿಯೊಂದು ಪ್ರದೇಶವೂ ಸ್ವಚ್ಛತೆಯಿಂದ ಕೂಡಿರುತ್ತದೆ. ಪೌರಕಾರ್ಮಿಕರು ಇಲ್ಲದೇ ಹೋದರೆ ಸಮಾಜ ಆರೋಗ್ಯ ಪೂರ್ಣವಾಗಿರಲು ಸಾಧ್ಯವಿಲ್ಲ, ಪ್ರತಿಯೊಬ್ಬರೂ ಪೌರಕಾರ್ಮಿಕರ ಶ್ರಮ ಗೌರವಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.

ನಗರದ ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಗರಸಭೆಯಿಂದ ಬುಧವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪೌರಕಾರ್ಮಿಕರೊಂದಿಗೆ ಜಿಲ್ಲಾಡಳಿತ ಸದಾ ಇರುತ್ತದೆ ಎಂದರು.

ಪೌರಕಾರ್ಮಿಕರು ಮತ್ತು ಅವರ ಮಕ್ಕಳಿಗಾಗಿ ಸರ್ಕಾರ ನಾನಾ ಯೋಜನೆ ಜಾರಿಗೆ ತಂದಿದೆ. ಅದರಲ್ಲಿಯೂ ಮುಖ್ಯವಾಗಿ ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಅವಕಾಶ ಇರುತ್ತದೆ. ಯೋಜನೆಗಳ ಕುರಿತು ಪೌರಕಾರ್ಮಿಕರಿಗೆ ತರಬೇತಿ ಕಾರ್ಯಾಗಾರ ಆಯೋಜಿಸಲು ಪೌರಾಯುಕ್ತ ಶಿವುಕುಮಾರ್ ಅವರಿಗೆ ಸೂಚಿಸಿದರು.

ಎಸ್ಪಿ ಜಾಹ್ನವಿ ಎಸ್.ಮಾತನಾಡಿ, ಪ್ರತಿನಿತ್ಯ ಪೌರಕಾರ್ಮಿಕರು, ಸ್ವಚ್ಛತೆ ಕೈಗೊಳ್ಳುವುದು ಒಂದಡೆಯಾದರೆ, ಹಬ್ಬ-ಹರಿದಿನಗಳಲ್ಲಿ ಅವರ ಪರಿಶ್ರಮ ಹೆಚ್ಚಾಗಿರುತ್ತದೆ. ನಮ್ಮ ನಮ್ಮ ಮನೆ ಸ್ವಚ್ಚತೆ ಮಾಡಿಕೊಳ್ಳುವುದು ಪ್ರಯಾಸದ ಕೆಲಸವಾಗಿದರೆ ಇಡೀ ಊರನ್ನೇ ಸ್ವಚ್ಛ ಮಾಡುವ ಕೆಲಸ ಸಾಮಾನ್ಯ ಮಾತಲ್ಲ, ಇತಂಹ ಕಾಯಕ ಮಾಡುವ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡುತ್ತಿರುವ ಪೌರಕಾರ್ಮಿಕರನ್ನು ನಾವೆಲ್ಲರೂ ಗೌರವಿಸಬೇಕು ಎಂದರು.

ಪೌರಾಯುಕ್ತ ಎರಗುಡಿ ಶಿವುಕುಮಾರ್ ಮಾತನಾಡಿ, ಪೌರಕಾರ್ಮಿಕರ ಬಹುದಿನದ ಬೇಡಿಕೆ ವಸತಿ ಸೌಲಭ್ಯ ಒದಗಿಸಲು ಸಿದ್ದತೆ ನಡೆದಿದೆ. ಅವರಿಗಾಗಿ ಈಗಾಗಲೇ ಅಗತ್ಯ ನಿವೇಶನ ಸಹ ಗುರುತಿಸಲಾಗಿದೆ. ಜಾಗ ಉಪವಿಭಾಗಾಧಿಕಾರಿಗಳ ಹೆಸರಿನಲ್ಲಿದ್ದು, ಅದನ್ನು ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಗೆ ಶೀಘ್ರ ಹಸ್ತಾಂತರ ಮಾಡಿದಲ್ಲಿ 170 ಜನ ಪೌರಕಾರ್ಮಿಕರಿಗೆ ಸೂರು ನಿರ್ಮಾಣ ಮಾಡಿಕೊಡಬಹುದಾಗಿದೆ. ಅವರು ಮನೆ ನಿರ್ಮಾಣ ಮಾಡಿಕೊಳ್ಳಲು ಪೌರಾಡಳಿತ ಇಲಾಖೆ ಪ್ರತಿಯೊಬ್ಬರಿಗೂ ₹7.50 ಲಕ್ಷ ಧನಸಹಾಯ ಮಾಡಲಿದೆ ಎಂದರು.

ಡಿವೈಎಸ್ಪಿ ಮುರುಳಿಧರ್, ತಾಪಂ ಇಓ ಅಲಂಭಾಷಾ, ಪರಿಸರ ಅಭಿಯಂತರೆ ಆರತಿ, ಕಚೇರಿ ವ್ಯವಸ್ಥಾಪಕ ಕೃಷ್ಣಮೂರ್ತಿ, ಆರೋಗ್ಯ ನಿರೀಕ್ಷಕ ವಿರೂಪಾಕ್ಷಪ್ಪ, ಕಂದಾಯ ಅಧಿಕಾರಿ ನಾಗರಾಜ, ಸಮುದಾಯ ಸಂಘಟಕ ರವಿಕುಮಾರ್, ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಓಬಣ್ಣ, ತಾಲೂಧ್ಯಕ್ಷ ನಾಗೇಂದ್ರ ವರ್ಮಾ, ಸಂಘದ ರಾಜ್ಯ ಪರಿಷತ್ ಸದಸ್ಯ ಸುಂಕಪ್ಪ, ಪೌರಸೇವಾ ನೌಕರರ ಸಂಘದ ಉಪಾಧ್ಯಕ್ಷ ನೀಲಕಂಠ ಸ್ವಾಮಿ ಸಭೆಯಲ್ಲಿ ಉಪಸ್ಥಿತರಿದ್ದರು.

ಉತ್ತಮವಾಗಿ ಕಾರ್ಯ ನಿರ್ವಹಿಸಿದ ಪೌರಕಾರ್ಮಿಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ರೀನಾ ನಂದನ್ ಪ್ರಾರ್ಥಿಸಿದರು. ಶಿಕ್ಷಕ ಬಸವರಾಜ ನಿರೂಪಿಸಿದರು.

ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಎಸ್ಪಿ ಜಾಹ್ವನಿ ಎಸ್, ಪೌರಾಯುಕ್ತ ಶಿವುಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಪೌರಕಾರ್ಮಿಕರಿಗೆ ಪ್ರೀತಿಯಿಂದ ಊಟ ಬಡಿಸಿದರು.

ನಗರಸಭೆ ಕಚೇರಿ ಆವರಣದಿಂದ ವೆಂಕಟೇಶ್ವರ ಕಲ್ಯಾಣ ಮಂಟಪದವರೆಗೂ ಪೌರಕಾರ್ಮಿಕರ ಮೆರವಣಿಗೆ ನಡೆಯಿತು.

ಹಲಿಗೆ, ಡೊಳ್ಳುವಾದ್ಯಗಳು ಮೆರವಣಿಗೆಗೆ ಮೆರುಗು ನೀಡಿದವು. ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಜ್ಜೆ ಹಾಕಿ ಶೋಭೆ ತಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸುರಕ್ಷತೆ ಶಿಕ್ಷಕರ ಮೂಲ ಕರ್ತವ್ಯ: ಸಿದ್ರಾಮೇಶ್ವರ
ಕೊಪ್ಪಳದಲ್ಲಿ ಆಧಾರ್ ತಿದ್ದುಪಡಿಗೆ ಬೆಳಗಿನ ಜಾವವೇ ಕ್ಯೂ