ಮೊಳಕಾಲ್ಮುರು: ದೇಶದ ಕಾನೂನನ್ನು ಅತ್ಯಂತ ಘನತೆ ಮತ್ತು ಗೌರವದಿಂದ ಪಾಲಿಸುವ ಮೂಲಕ ಪ್ರತಿಯೊಬ್ಬರೂ ಸ್ನೇಹ ಸೌಹರ್ದತೆಯಿಂದ ಕೂಡಿಬಾಳಬೇಕು ಎಂದು ಸಿವಿಲ್ ನ್ಯಾಯಾಧೀಶರಾದ ಟಿ.ಕೆ.ಪ್ರಿಯಾಂಕ ಹೇಳಿದರು.ತಾಲೂಕಿನ ನೇರ್ಲಹಳ್ಳಿ ಗ್ರಾಮ ಪಂಚಾಯತ್ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಮದರ್ ಡ್ರೀಮ್ಸ್ ಸಂಸ್ಥೆ (ರಿ) ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾನೂನು ಜಾಗೃತಿ ಶಿಬಿರ ಹಾಗೂ ಹಿರಿಯರ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾನೂನನ್ನು ನಾವು ಗೌರವಿಸಿದರೆ, ಕಾನೂನು ನಮ್ಮನ್ನು ಗೌರವಿಸುತ್ತದೆ. ಭಾರತ ದೇಶವು ಅತ್ಯಂತ ಪವಿತ್ರವಾದ ದೇಶ. ಇಂತಹ ದೇಶದಲ್ಲಿ ಹುಟ್ಟಿದ ನಾವೇ ಧನ್ಯರು. ಹಾಗಾಗಿ ಕಾನೂನಿನ ಭಯದಿಂದಾಗಿ ಇಂದು ನಾವೆಲ್ಲರೂ ನೆಮ್ಮದಿಯಿಂದ ಜೀವಿಸುತ್ತಿದ್ದೇವೆ. ಕಾನೂನಿನ ಮೇಲೆ ದೇಶದ ಪ್ರಗತಿ ಮತ್ತು ಭವಿಷ್ಯ ನಿಂತಿರುತ್ತದೆ ಎಂದರು.ಕಾನೂನುಗಳು ಒಂದು ದೇಶದ ಆಧಾರಸ್ತಂಭವಿದ್ದಂತೆ. ಆದ್ದರಿಂದ ಕಾನೂನುಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಹಿರಿಯರು ನಮಗೆ ಮಾರ್ಗದರ್ಶಕರಾಗಿ, ಪೋಷಕರಾಗಿ ನಮ್ಮೆಲ್ಲರ ಬಾಳಿಗೆ ದಾರಿದೀಪವಿದ್ದಂತೆ. ಅವರನ್ನು ಘನತೆ, ಗೌರವದಿಂದ ಕಾಣಬೇಕು ಎಂದು ಹೇಳಿದರು.
ಹಿರಿಯ ವಕೀಲ ರಾಜಶೇಖರ ನಾಯಕ ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರದಿಂದ ಸಾರ್ವಜನಿಕರಿಗೆ ಅನೇಕ ಸೌಲಭ್ಯಗಳಿವೆ. ಅವುಗಳನ್ನು ಪಡೆದುಕೊಳ್ಳಬೇಕು. ಕಾನೂನು ಸೇವಾ ಸಮಿತಿಯು 12 ಜನ ಸದಸ್ಯರನ್ನು ಒಳಗೊಂಡಿದ್ದು, ಯಾವುದೇ ಪ್ರಕರಣಗಳನ್ನು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಪರಿಹರಿಸಿಕೊಳ್ಳುವ ವ್ಯವಸ್ಥೆ ಇದೆ. ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ಇದರ ಜೊತೆಗೆ ಕಾನೂನಿನ ಬಗ್ಗೆ ಅಪಾರವಾದ ಕಾಳಜಿ ಮತ್ತು ಜ್ಞಾನ ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.ವೃತ್ತಿ ನಿರೀಕ್ಷಕ ವಸಂತ್.ವಿ ಅಸೋದೆ ಮಾತನಾಡಿ, ವಾಹನ ಚಾಲಕರು ನಿಯಮಗಳನ್ನು ಮೀರಬಾರದು. ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು. ನಮ್ಮ ಸ್ವಯಂಕೃತ ಅಪರಾಧಗಳಿಂದ, ಇತ್ತೀಚಿನ ದಿನಗಳಲ್ಲಿ ವಾಹನದ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ. ಹಾಗಾಗಿ ವಾಹನ ಚಲಾಯಿಸುವಾಗ ಅತ್ಯಂತ ಎಚ್ಚರಿಕೆಯಿಂದ, ನಿಯಮಗಳನ್ನು ಮೀರಿದಂತೆ ಚಲಾಯಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ತಾಲೂಕ ಅಧ್ಯಕ್ಷ ಮರಿಸ್ವಾಮಿ, ಆಯೋಜಕ ಎಸ್.ಪರಮೇಶ್, ಮದರ್ ಡ್ರೀಮ್ ಸಂಸ್ಥೆ (ರಿ) ಕಾರ್ಯದರ್ಶಿಡಿ ಮಹಾಂತೇಶ್, ಉಪ ತಹಸೀಲ್ದಾರ್ ಮಹಾಂತೇಶ್, ಪಶು ಸಹಾಯಕ ನಿರ್ದೇಶಕ ರಂಗಪ್ಪ, ಸಿಡಿಪಿಓ ನವೀನ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಯ್ಯದ್ ನಾಸಿರ್ ಉದ್ದೀನ್, ವಕೀಲರ ಸಂಘದ ಅಧ್ಯಕ್ಷ ಆರ್.ಆನಂದ್, ಉಪಾಧ್ಯಕ್ಷ ಜಿ.ಮಂಜುನಾಥ್, ಕುಮಾರಪ್ಪ.ಎಲ್ ಪಾಪಯ್ಯ, ಗ್ರಾಮ ಪಂಚಾಯತಿ ಅಧ್ಯಕ್ಷ ಪಾಪಣ್ಣ, ಪಿಡಿಓ ಅಬ್ದುಲ್ ಮಾಲಿಕ್, ಹಿರಿಯರಾದ ಜಗಲೂರಯ್ಯ ಗಂಗಮ್ಮ, ಮೋನಿಕಾ, ಪದ್ಮಾವತಿ ಇದ್ದರು.