-ಮಲ್ಲೇಶಯ್ಯನವರ ಛತ್ರದಲ್ಲಿ ಗುರುನಮನ
ಕನ್ನಡಪ್ರಭ ವಾರ್ತೆ ಕೊಪ್ಪ
ಹರಿಹರಪುರದ ನುಗ್ಗಿಮಕ್ಕಿ ಶ್ರೀ ಮಲ್ಲೇಶಯ್ಯನವರ ಛತ್ರದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಗುರುನಮನ ಹಾಗೂ ಶಿಕ್ಷಣ ಮತ್ತು ಶಿಕ್ಷಕರ ಪಾತ್ರ ವಿಷಯದ ಕುರಿತು ಭಾಷಣ ಸ್ಪರ್ಧೆ ಸೋಮವಾರ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ದಿವ್ಯ ಕ್ಷೇತ್ರ ಶ್ರೀಮಠದ ವ್ಯವಸ್ಥಾಪಕ ಕೃಷ್ಣಮೂರ್ತಿ ಭಟ್ ಮಾತನಾಡಿ, ಪ್ರಕೃತಿಯಲ್ಲಿರುವ ಪ್ರತಿಯೊಂದು ಚರಾಚರ ವಸ್ತುವೂ ನಮಗೆ ಒಂದೊಂದು ಪಾಠ ಕಲಿಸುತ್ತದೆ. ಕಲಿಕೆ ನಿರಂತರವಾಗಿದ್ದಾಗ ಮಾತ್ರ ಯಶಸ್ಸು ಸಾಧ್ಯ. ಉತ್ತಮ ಪ್ರಜೆಗಳಾಗಿ ರೂಪಿಸುವ ಶಿಕ್ಷಕರನ್ನು ಗೌರವಿಸುವುದು ಉತ್ತಮ ಸಂಸ್ಕೃತಿ ಎಂದರು.
ನಿವೃತ್ತ ಪ್ರಾಚಾರ್ಯ ರಾಮಪ್ರಸಾದ್ ಮಾತನಾಡಿ, ನಕ್ಸಲ್ ನಿರ್ಮೂಲನೆ ಸಹಿತ ವಿವಿಧ ಸಂದರ್ಭ ಬಿಎಸ್‌ಎಫ್ ಯೋಧರು ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಕಸಾಪ ಹೋಬಳಿ ಘಟಕದ ಅಧ್ಯಕ್ಷ ವೈದ್ಯ ಬಿ.ಆರ್. ಅಂಬರೀಶ ಭಂಡಿಗಡಿ ಅಧ್ಯಕ್ಷತೆ ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಶಿಕ್ಷಣದಿಂದ ಸಕಲವನ್ನೂ ಸಾಧಿಸಲು ಸಾಧ್ಯ. ಕಸಾಪ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ವಿವಿಧ ಸ್ಪರ್ಧೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.