ಹೊಳಲ್ಕೆರೆ: ತಂದೆ, ತಾಯಿ ಸೇರಿದಂತೆ ಮನೆಯಲ್ಲಿರುವ ಹಿರಿಯರನ್ನು ಗೌರವಿಸುವುದೇ ನಿಜವಾದ ಭಗವಂತನ ಸೇವೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ರಾಮಘಟ್ಟ ಗ್ರಾಮದಲ್ಲಿ ಆಯೋಜಿಸಿದ್ದ ಸರ್ವ ಶರಣರ ಸಮ್ಮೇಳನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಹಿರಿಯರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಬೇಕು. ಆಗ ಮಾತ್ರ ಮನುಷ್ಯರಾಗುತ್ತೇವೆ. ಇಲ್ಲದಿದ್ದಲ್ಲಿ ರಾಕ್ಷಸರಾಗುತ್ತೇವೆ. ತಂದೆ ತಾಯಿಯೇ ನಿಜವಾದ ದೇವರಾಗಿದ್ದು, ವೃದ್ಧಾಪ್ಯದಲ್ಲಿ ಅವರನ್ನು ಚಿಕ್ಕ ಮಕ್ಕಳಂತೆ ಪ್ರೀತಿ, ವಿಶ್ವಾಸದಿಂದ ನೋಡಿಕೊಳ್ಳಬೇಕು ಎಂದು ತಿಳಿಸಿದರು.ನಮ್ಮ ಪರಂಪರೆಯಲ್ಲಿ ಮಾತೃ ದೇವೋಭವ, ಪಿತೃ ದೇವೋಭವ, ಅತಿಥಿ ದೇವೋಭವ, ಆಚಾರ್ಯ ದೇವೋಭವ, ಗುರು ದೇವೋಭವ ಎಂಬ 5 ಜನರನ್ನು ದೇವರು ಎಂದು ಹಿರಿಯರು ಗುರುತಿಸಿಕೊಂಡಿದ್ದಾರೆ. ಇಂದು ಶಿಕ್ಷಣ ಬಂದಿದೆ. ಸಂಸ್ಕೃತಿ ಮರೆಯಾಗಿದೆ. ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕೃತಿ ಕಲಿಸಬೇಕು. ಸಂಸ್ಕೃತಿಯಿಲ್ಲದ ಶಿಕ್ಷಣ ಪರಿಪೂರ್ಣವಾಗುವುದಿಲ್ಲ ಎಂದು ತಿಳಿಸಿದರು.
ಉಪನ್ಯಾಸ ನೀಡಿದ ದಾವಣಗೆರೆ ಎವಿಕೆ ಮಹಿಳಾ ಕಾಲೇಜಿನ ಉಪನ್ಯಾಸಕಿ ಡಾ.ಗೀತಾ ಬಸವರಾಜು ಮಾತನಾಡಿ, ಕುಟುಂಬದಲ್ಲಿ ಹೆಣ್ಣು ಮತ್ತು ಗಂಡು ಎರಡು ಕಣ್ಣುಗಳಿದ್ದಂತೆ. ರಥದ 2 ಗಾಲಿಗಳ ರೀತಿ ಕುಟುಂಬ ನಿರ್ವಹಣೆ ಮಾಡುತ್ತಾರೆ. ಇಬ್ಬರೂ ಸಮಾನ ಮನಸ್ಥಿತಿಯಿಂದ ಸಾಮರಸ್ಯಭಾವದಿಂದ ಬದುಕಿದಾಗ ಕುಟುಂಬ ಪ್ರಗತಿಯಾಗುತ್ತದೆ. ನಾವು ಪ್ರಕೃತಿಯಲ್ಲಿ ಅನೇಕ ಹೂವುಗಳನ್ನು ನೋಡುತ್ತೇವೆ. ಕೆಲವು ಹೂವು ಬೆಳಗ್ಗೆ ಹುಟ್ಟಿ ಸಂಜೆ ಅಂತ್ಯವನ್ನು ಕಾಣುತ್ತವೆ. ಇರುವ ಅಲ್ಪಾವಧಿಯಲ್ಲಿಯೇ ನಮಗೆಲ್ಲರಿಗೂ ಪರಿಮಳವನ್ನು ಹರಡಿ ಸಾರ್ಥಕತೆಯನ್ನು ಪಡೆಯುತ್ತವೆ. ಹಾಗೆಯೇ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಹೂವಿನ ತರಹ ಸಾರ್ಥಕ ಬದುಕು ನಡೆಸಬೇಕು ಎಂದರು.ಒಂದು ದಿನದ ಅಂತರದಲ್ಲಿ ಲಿಂಗೈಕ್ಯರಾದ ಓಂಕಾರಪ್ಪ ಗಂಗಮ್ಮ ದಂಪತಿಗಳು ಜೇನಿನ ತರ ಸಿಹಿಯನ್ನು ತನ್ನ ಕುಟುಂಬದವರಿಗೆ, ಸ್ನೇಹಿತರು ಮತ್ತು ಬಂಧುಗಳಿಗೆ ಹಂಚುವುದರ ಮೂಲಕ ಮಕ್ಕಳಿಗೆ ಸಂಸ್ಕಾರವನ್ನು ನೀಡಿ ಸಾರ್ಥಕ ಜೀವನವನ್ನು ನಡೆಸಿದ್ದಾರೆ ಎಂದರು.
ಮಾಜಿ ಶಾಸಕ ಪಿ. ರಮೇಶ್, ಭೀಮಸಮುದ್ರದ ಅಡಿಕೆ ವರ್ತಕ ಜಿ.ಎಸ್.ಮಂಜುನಾಥ್, ನಿವೃತ್ತ ಪ್ರಾಚಾರ್ಯ ಐ.ಜಿ.ಚಂದ್ರಶೇಖರಯ್ಯ, ರತ್ನಮ್ಮ, ಲತಾ ಶಂಕರ್, ಶಕುಂತಲಾ ಕುಬೇರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೇಖಾ ನಾಗರಾಜು ಮತ್ತು ಮಲ್ಲಿಕಾರ್ಜುನ ಇದ್ದರು.