ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಸರ್ಕಾರಿ ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಬರುವ ಇಲಾಖೆಗಳ ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸಿ ಕಾಲಮಿತಿಯೊಳಗೆ ಕೆಲಸ ಮಾಡಿಕೊಡಿ ಎಂದು ತಾಲೂಕು ಉಸ್ತುವಾರಿ ಕಾರ್ಯದರ್ಶಿ, ಆಲಮಟ್ಟಿ ಯುಕೆಪಿ ಅಧಿಕಾರಿ ಶಿವಾನಂದ ಸಾಗರ ಹೇಳಿದರು.ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಲಯದಲ್ಲಿ ನಡೆದ ತಾಲೂಕು ಮಟ್ಟದ ಎಲ್ಲ ಇಲಾಖಾ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಏನಾದರೂ ಕುಂದುಕೊರತೆಗಳಿದ್ದರೆ ಅವುಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಅವುಗಳನ್ನು ನನಗೆ ಮಾಹಿತಿ ನೀಡಿದರೆ, ನಾನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ನೀಡುತ್ತೇನೆ. ನಂತರ ಆ ಎಲ್ಲ ಸಮಸ್ಯೆಗಳನ್ನು ಅವರು ಸರ್ಕಾರಕ್ಕೆ ಕಳಿಸುತ್ತಾರೆ. ಅಂತಹ ಸಮಸ್ಯೆಗಳನ್ನು ಪ್ರತಿ ಇಲಾಖಾ ಅಧಿಕಾರಿಗಳು ನಿರಂತರ ಗಮನಹರಿಸುತ್ತಿರಬೇಕು. ನಾನು ಇದೇ ಮೊದಲ ಬಾರಿ ತೆಗೆದುಕೊಂಡ ಸಭೆ ಇದು. ಇನ್ನೂ ತಿಂಗಳಲ್ಲಿ ಪ್ರತಿ 15 ದಿನಕ್ಕೊಮ್ಮೆ ಸಭೆ ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಸಭೆಯಲ್ಲಿ ಇಲಾಖಾವಾರು ಪ್ರಗತಿ ಚರ್ಚೆ ನಡೆಯಿತು. ಆ ಸಂದರ್ಭದಲ್ಲಿ ತಾಲೂಕು ಉಸ್ತುವಾರಿ ಕಾರ್ಯದರ್ಶಿ ಸಲಹೆ ಸೂಚನೆ ನೀಡಿದರು. ನಂತರ ಪಟ್ಟಣದ ಸರ್ಕಾರಿ ಆಸ್ಪತ್ರೆ, ಅಂಗನವಾಡಿ, ಬಾಲಕರ ಸರ್ಕಾರಿ ಪಪೂ ಕಾಲೇಜು ಮತ್ತು ಹೈಸ್ಕೂಲ್‌ಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಿ, ಕೆಲವು ಸಲಹೆ ಸೂಚನೆ ನೀಡಿದರು.ವಿಶೇಷ ತಹಸೀಲ್ದಾರ್ ಮಹೇಶ ಗಸ್ತೆ, ತಾಪಂ ಇಲಾಖೆ ಸಹಾಯಕ ಅಧಿಕಾರಿಗಳು, ಶಿಕ್ಷಣ ಇಲಾಖೆ ಇಸಿಒ ಎಂ.ಸಿ.ನಾಲತವಾಡ, ಸಮಾಜ ಕಲ್ಯಾಣ ಇಲಾಖೆ ತಾಲೂಕಾಧಿಕಾರಿ ಎಂ.ಎಂ.ಮಳಿಮಠ, ಅಕ್ಷರದಾಸೋಹ ಅಧಿಕಾರಿ ಎಂ.ಎಂ.ನಾರಗಾಲ, ಕೃಷಿ ಅಧಿಕಾರಿ ಎ.ವಿ. ತಿರಕನ್ನವರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಆರ್.ಎಸ್.ಬಂಡಿ, ಆರೋಗ್ಯ ಇಲಾಖೆ ಎಂ.ಬಿ.ಪಾಟೀಲ, ಪಶು ಸಂಗೋಪನಾ ಇಲಾಖೆ ಡಾ.ಸುರೇಶ ಜಾಧವ, ಹೆಸ್ಕಾಂ ಸಹಾಯಕ ಅಭಿಯಂತರ ಪ್ರಕಾಶ ಪೂಚಗುಂಡಿ, ಪಿಡಬ್ಲ್ಯೂಡಿ ಇಲಾಖೆ ಸಾಹಾಯಕ ಅಭಿಯಂತರ ವೈ.ಎಫ್.ಆಡಿನ, ಸಾಮಾಜಿಕ ಅರಣ್ಯ ಇಲಾಖೆ ವಲಯಾಧಿಕಾರಿ ಎಸ್.ಎಫ್.ಪೂಜಾರ, ಅರಣ್ಯ ಇಲಾಖೆ ಬೀಟ್ ಪ್ರಶಾಂತ ತುಂಗಳ, ತೋಟಗಾರಿಕೆ ಇಲಾಖೆ ಮಹಾಂತೇಶ ಕಾಂಬಳೆ, ಪುರಸಭೆ ಮುಖ್ಯಾಧಿಕಾರಿ ಎ.ಎಚ್.ಮುಜಾವರ್, ಪಿಆರ್‌ಇಡಿ ಸಹಾಯಕ ಅಭಿಯಂತರ ಎ.ಎಸ್.ತೋಪಲಕಟ್ಟಿ, ರೇಷ್ಮೇ ಇಲಾಖೆ ಅಧಿಕಾರಿ ಎಂ.ಎನ್.ಗೌಡರ್, ಹಿಂದುಳಿದ ವರ್ಗ ಇಲಾಖೆ ಅಧಿಕಾರಿ ಹೇಮಲತಾ ಶಿಂಧೆ ಇದ್ದರು.