ಶಿರಸಿ: ಬಡವರಿಗೆ ಯಾವುದೇ ರೀತಿ ತೊಂದರೆ ಕೊಡದಂತೆ ಮತ್ತು ಮತ್ತು ಸ್ಥಳೀಯವಾಗಿ ಬಗೆಹರಿಯುವ ಕೆಲಸಗಳಿಗೆ ಗ್ರಾಮ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಶಿರಸಿ ಉಪ ವಿಭಾಗ ಮಟ್ಟದ ಅಧಿಕಾರಿಗಳು ಸ್ಥಳೀಯವಾಗಿಯೇ ತಕ್ಷಣ ಸ್ಪಂದಿಸಿ, ಪರಿಹಾರ ಸೂಚಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಭೀಮಣ್ಣ ನಾಯ್ಕ್ ಸೂಚಿಸಿದರು.
ಇದರ ಉದ್ದೇಶ ಸಾರ್ವಜನಿಕರಿಗೆ ಇನ್ನಷ್ಟು ಹತ್ತಿರವಾಗುವುದು ಮತ್ತು ಅವರ ಕಷ್ಟ-ಕಾರ್ಪಣ್ಯಗಳಿಗೆ ತಕ್ಷಣ ಸ್ಪಂದಿಸಿ, ನಾವು ನೀವೆಲ್ಲ ಸೇರಿ ಜನರ ಸೇವೆ ಮಾಡಬೇಕಾಗಿದೆ ಎಂದರು.
ಪ್ರಜಾಸೇವೆ ಆಂದೋಲನದ ಮೊದಲ ದಿನದ ಸಭೆಯಲ್ಲಿ 300ಕ್ಕೂ ಹೆಚ್ಚು ಸಾರ್ವಜನಿಕರ ಅರ್ಜಿಗಳು ಬಂದಿದ್ದವು.ಅದರಲ್ಲಿ ಕೆಲವು ಅರ್ಜಿಗಳನ್ನು ಶಾಸಕರು ಪರಿಶೀಲಿಸಿ, ಪಿಡಿಒಗಳು, ಹೆಸ್ಕಾಂ, ಪಿಆರ್‌ಇಡಿ ಅಧಿಕಾರಿಗಳು ಮತ್ತು ಪಿಡಬ್ಲ್ಯುಡಿ ಹಾಗೂ ಅರಣ್ಯ ಅಧಿಕಾರಿಗಳಿಗೆ ಪರಿಹಾರ ಒದಗಿಸಲು ಸೂಚಿಸಿದರು.
ರೈತರು, ವಿದ್ಯಾರ್ಥಿಗಳ ಸಂಚಾರ, ಕೆಲಸಕ್ಕೆ ಯಾವುದೇ ರೀತಿಯಿಂದ ಅಡ್ಡಿ ಮಾಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು.
ಸಾರ್ವಜನಿಕರಿಗೆ ಸುಕನ್ಯಾ ಸಮೃದ್ಧಿ ಯೋಜನೆ ಬ್ಯಾಂಕ್ ಪಾಸ್‌ಬುಕ್ ವಿತರಿಸಲಾಯಿತು. ತಹಸೀಲ್ದಾರ್ ಪಟ್ಟರಾಜಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪವಿಭಾಗಾಧಿಕಾರಿ ಚಂದ್ರಶೇಖರ ಆರ್.ಜಿ., ತಾಪಂ ಇಒ ಚನ್ನಬಸಪ್ಪ ಹಾವಣಗಿ, ಸುಮಾ ಉಗ್ರಾಣಕರ, ಜಗದೀಶ್ ಗೌಡ, ಎಸ್.ಕೆ. ಭಗವತ್ ಉಪಸ್ಥಿತರಿದ್ದರು.