ಕನ್ನಡಪ್ರಭ ವಾರ್ತೆ ಕಲಬುರಗಿದೇಶಕ್ಕೆ ಅನ್ನ ನೀಡುವ ರೈತ ಕೃಷಿ ಸಾಲ ಕೋರಿ ಬ್ಯಾಂಕಿಗೆ ಬಂದಲ್ಲಿ ಸರಿಯಾಗಿ ಸ್ಪಂದಿಸಿ ತ್ವರಿತಗತಿಯಲ್ಲಿ ಸಾಲ ಮಂಜೂರು ಮಾಡುವಂತೆ ಜಿಲ್ಲೆಯ ಎಲ್ಲಾ ಬ್ಯಾಂಕರ್ಸ್ ಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ಭಂವರ್ ಸಿಂಗ್ ಮೀನಾ ಸೂಚನೆ ನೀಡಿದರು.
ಕೃಷಿ ಸೇರಿದಂತೆ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ವಿಸ್ತೀರ್ಣ ಹೆಚ್ಚಳಕ್ಕೆ ಉತ್ತೇಜಿಸುವ ನಿಟ್ಟಿನಲ್ಲಿ ತೋಟಗಾರಿಕೆ ಸಾಲವನ್ನು ಆದ್ಯತೆ ಮೇಲೆ ಮಂಜೂರು ಮಾಡಬೇಕು. ಬೆಳೆ ಸಾಲ ಬೆಂಬಲಿಸುವ ನಿಟ್ಟಿನಲ್ಲಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಅಡಿಯಲ್ಲಿ ಬಾಕಿ ಇರುವ ಕೆಸಿಸಿ ಸಾಲಗಳನ್ನು ಕೂಡಲೆ ರೈತರಿಗೆ ಮಂಜೂರು ಮಾಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯ ಸರ್ಕಾರವು ವಿವಿಧ ಜನಪರ ಯೋಜನೆಗಳನ್ನು ವಿವಿಧ ನಿಗಮಗಳಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಆಯಾ ನಿಗಮ ಮತ್ತು ಇಲಾಖೆಗಳಿಂದ ಫಲಾನುಭವಿಗಳಿಗೆ ಸಾಲ, ಸಬ್ಸಿಡಿ ಸಾಲ ಮಂಜೂರು ಮಾಡಲು ಪ್ರಸ್ತಾವನೆ ಬಂದಲ್ಲಿ ಅದನ್ನು ಪ್ರಥಾಮದ್ಯತೆ ಮೇರೆಗೆ ಕಾಲಮಿತಿಯಲ್ಲಿ ಸಾಲ ಮಂಜೂರು ಮಾಡುವ ಮೂಲಕ ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಬ್ಯಾಂಕರ್ಸ್ ಗಳು ಕೈಜೋಡಿಸಬೇಕು ಎಂದರು.ಮಹಿಳಾ ಆರ್ಥಿಕ ಸಬಲೀಕರಣ ನಿಟ್ಟಿನಲ್ಲಿ ಸ್ವ-ಸಹಾಯ ಗುಂಪು (SHG) ಕ್ರೆಡಿಟ್ ಲಿಂಕ್ ಯೋಜನೆ ಸಾಕಾರ ಕುರಿತು ಸಭೆಯಲ್ಲಿ ಒತ್ತಿ ಹೇಳಿದ ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರು, ಬ್ಯಾಂಕುಗಳಲ್ಲಿ ಬಾಕಿ ಉಳಿದಿರುವ ಮಹಿಳಾ ಸ್ವಸಹಾಯ ಗುಂಪು ಸಾಲ ಕೂಡಲೆ ಮಂಜೂರು ಮಾಡಬೇಕಲ್ಲದೆ ಎಸ್.ಎಚ್.ಜಿ. ಯೋಜನೆಗಳನ್ನು ಎಲ್ಲಾ ಬ್ಯಾಂಕ್‌ಗಳು ಜಾರಿಗೊಳಿಸುವಂತೆ ನಿರ್ದೇಶನ ನೀಡಿದರು.