- ಮೂಲಸೌಕರ್ಯ, ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿ ಅಡ್ಡಿಪಡಿಸದಿರಿ । ತಾಪಂ ಸಭೆಯಲ್ಲಿ ಅಧಿಕಾರಿಗಳಿಗೆ ಸಲಹೆ
---ಶೃಂಗೇರಿ ಬಸ್ ನಿಲ್ದಾಣ ಮೇಲ್ದರ್ಜೆಗೆ ಏರಿಸುವ ಬಗ್ಗೆ ಚಿಂತನೆ
- ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿ ಮೂಲ ನಿವಾಸಿಗಳಿಗೆ ತೊಂದರೆ ನೀಡಬಾರದು- ಮಳಿಗೆಗಳು, ಚರಂಡಿ, ವಿದ್ಯುತ್, ಆಟೋ ನಿಲ್ದಾಣ, ಸೇರಿ ಎಲ್ಲಾ ರೀತಿ ಮೂಲಭೂತ ಸೌಕರ್ಯ
ಕನ್ನಡಪ್ರಭ ವಾರ್ತೆ, ಶೃಂಗೇರಿಜನರ ಬದುಕು ಮುಖ್ಯ. ಅವರ ಮೂಲಸೌಕರ್ಯ, ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿ ಅಡ್ಡಿ ಮಾಡಬಾರದು. ಮಾನವೀಯತೆಯಿಂದ ಸಣ್ಣ ಪುಟ್ಟ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಅಧಿಕಾರಿಗಳಿಗೆ ಸಲಹೆ ನೀಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಶಾಸಕರ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರಸ್ತೆ ಅಬಿವೃದ್ಧಿ, ನಿವೇಶನ ಮಂಜೂರಾತಿ ಇತರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಡ್ಡಿ ಪಡಿಸುತ್ತಿದೆ ಎಂದು ತಾಪಂ ನಾಮನಿರ್ದೇಶನ ಸದಸ್ಯರು ಆಕ್ಷೇಪಿಸಿದ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾನೂನು ಕಾಯ್ದೆಗಳನ್ನು ನಾವು ತಿಳಿದುಕೊಂಡಿದ್ದೇವೆ. ಎಲ್ಲವನ್ನು ಕಾನೂನು ಕಾಯ್ದೆಯಿಂದ ಕಾಣುತ್ತಾ ಹೋದರೆ ಜನ ಬದುಕಲು ಸಾಧ್ಯವಿಲ್ಲ. ರಸ್ತೆ ಅಭಿವೃದ್ಧಿಗೆ ಅಡ್ಡಿಯಾಗುವ ಮರ ತೆರವುಗೊಳಿಸುವ ಅಗತ್ಯ ಕಾಮ ಗಾರಿಗೆ ಅಡ್ಡಿ ಮಾಡಬಾರದು. ಎಲ್ಲರಿಗೂ ರಸ್ತೆ ಓಡಾಡಲು ಬೇಕು. ಅಧಿಕಾರದ ಜೊತೆ ಮಾನವೀಯತೆಯೂ ಬೇಕು.ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲಲೂ ಅಲ್ಲಿನ ಮೂಲ ನಿವಾಸಿಗಳಿಗೆ ತೊಂದರೆ ನೀಡಬಾರದು. ಸ್ವ ಇಚ್ಚೆಯಿಂದ ಹೊರ ಹೋಗುವವರಿಗೆ ಪರಿಹಾರ, ಅಲ್ಲಿಯೇ ಇರುವವರಿಗೆ ಮೂಲ ಸೌಕರ್ಯಗಳಿಗೆ ತೊಂದರೆ ನೀಡಬಾರದು. ಆ ಭಾಗದಲ್ಲಿ ಫಾರಂ 53 ಅರ್ಜಿ ವಿಲೇವಾರಿ ಸಂಬಂಧಿಸಿದಂತೆ ಸರ್ವೇ ನಡೆಸಿ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿ ಹೊರಗಿನ ಪ್ರದೇಶ ಮಂಜೂರಿಗೆ ಸಹಕರಿಸಬೇಕು. ಪಾರಂಪರಿಕ ಅರಣ್ಯ ವಾಸಿಗಳನ್ನು ತೊಂದರೆಗೊಳಪಡಿಸುವುದು ಸರಿಯಲ್ಲ.
ಶೃಂಗೇರಿ ಬಸ್ ನಿಲ್ದಾಣ ಮೇಲ್ದರ್ಜೆಗೆ ಏರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈಗಾಗಲೇ ಮೀಸಲಿಟ್ಟಿ ₹38 ಲಕ್ಷ ಸಾಲದಿದ್ದರೆ ನವೀಕರಿಸಬಹುದಾದ ಇಂದನ ಅಭಿವೃದ್ಧಿ ನಿಗಮದ ಅನುದಾನದಡಿ ಹೆಚ್ಚುವರಿ ಅನುದಾನ ಬಿಡುಗಡೆ ಗೊಳಿಸಿ ಎಲ್ಲಾ ರೀತಿ ಅಭಿವೃದ್ಧಿ ಮಾಡಲಾಗುವುದು. ಮಳಿಗೆಗಳು, ಚರಂಡಿ, ವಿದ್ಯುತ್, ಆಟೋ ನಿಲ್ದಾಣ, ಕಾಂಪೌಂಡ್ ಸೇರಿದಂತೆ ಎಲ್ಲಾ ರೀತಿ ಮೂಲಭೂತ ಸೌಕರ್ಯ ಅಭಿವೃದ್ಧಿ ಮಾಡಿ ಬಸ್ ನಿಲ್ದಾಣ ಮೇಲ್ದರ್ಜೆಗೆ ಏರಿಸಲಾಗುವುದು.ಶೃಂಗೇರಿ ಎಸ್ ಕೆ ಬಾರ್ಡರ್ ತನಿಕೋಡು ರಸ್ತೆಯನ್ನು ಅರಣ್ಯ ಇಲಾಖೆ ಅಡ್ಡಿ ಸರಿಪಡಿಸಿ ರಸ್ತೆ ಕಾಮಗಾರಿ ಮುಂದುವರಿಸ ಬೇಕು. ಹೊಂಡಗುಂಡಿ ತುಂಬಬೇಕು. ರಸ್ತೆ ಅಂಚಿನ ಅಪಾಯಕಾರಿ ಮರಗಳನ್ನು ತೆರವು ಗೊಳಿಸಬೇಕು. ರಸ್ತೆ ಕಾಮಗಾರಿಗೆ ಮನೆ, ನಿವೇಶನ ನೀಡಿದ ಸಂತ್ರಸ್ತರಿಗೆ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಪಪಂ ವ್ಯಾಪ್ತಿಯ ಗಾಂಧಿ ಮೈದಾನದಲ್ಲಿ ಅನಧಿಕೃತ ವಾಹನ ಶುಲ್ಕ ವಸೂಲಾತಿ, ಸ್ಥಳೀಯರೊಡನೆ ವಾಹನ ಹೋಗುವಾಗ ಶುಲ್ಕ ವಸೂಲಿ ನಿಲ್ಲಿಸಬೇಕು. ವಾಹನ ನಿಲುಗಡೆ ನಂತರವೇ ಶುಲ್ಕ ವಸೂಲಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಸರಿಯಾದ ಮಾಹಿತಿ, ವರದಿ ನೀಡದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ಕರ್ತವ್ಯ ಲೋಪವೆಸಗುತ್ತಿರುವ ಬಗ್ಗೆ ಕೃಷಿ ಸಚಿವರಿಗೆ ದೂರು ನೀಡವಂತೆ ಸಭೆಯಲ್ಲಿ ಸೂಚನೆ ನೀಡಿದರು.ನಾಮನಿರ್ದೇಶನ ಸದಸ್ಯ ಡಿ.ಸಿ.ಶಂಕರಪ್ಪ ಮಾತನಾಡಿ ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ, ಗೂಳಿ ಹಾಗೂ ಬೀದಿ ನಾಯಿಗಳ ಉಪಟಳ ಹೆಚ್ಚುತ್ತಿವೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ ವಾಗುತ್ತಿದೆ ಇದರಿಂದಲೂ ತೊಂದರೆಯಾಗುತ್ತಿದೆ. ಶಾಸಕರು ಕೂಡಲೇ ಬಿಡಾಡಿ ದನ, ಗೂಳಿ, ನಾಯಿಗಳನ್ನು ಹಿಡಿಯುವ ಕೆಲಸಕ್ಕೆ ಮ ವಹಿಸಬೇಕು ಎಂದು ತಾಪಂ ಇಒ ಗೆ ಸೂಚಿಸಿದರು.
ಎ.ಎಸ್.ನಯನಾ ಮಾತನಾಡಿ ಪಟ್ಟಣದಲ್ಲಿ ಚರಂಡಿ ಸ್ವಚ್ಛಗೊಳಿಸದೇ ದುರ್ನಾತ ಬೀರುತ್ತಿದೆ. ಬಿಸಿಲು ಹೆಚ್ಚಿದಂತೆ ಗಬ್ಬು ನಾಥ ಹೆಚ್ಚಾಗುತ್ತಿದೆ. ಇದರಿಂದ ಪಟ್ಟಣದ ಬಸ್ ನಿಲ್ದಾಣ, ಪ್ರಮುಖ ಬೀದಿಗಳಲ್ಲಿ ಓಡಾಡುವಂತಿಲ್ಲ. ಗಾಂಧಿ ಮೈದಾನದಲ್ಲಿ ಪ್ರವಾಸಕ್ಕೆ ಬಂದ ಪ್ರವಾಸಿಗರು ನದಿಗಿಳಿದು ಸಾಯುತ್ತಿದ್ದಾರೆ. ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ತಿಳಿಸಿದಾಗ ಶಾಸಕರು ಪ್ರತಿಕ್ರಿಯಿಸಿ ಚರಂಡಿ ಸ್ವಚ್ಛತೆಗೆ ಹಾಗೂ ಗಾಂಧಿ ಮೈದಾನ ತುಂಗಾ ನದಿ ತೀರದಲ್ಲಿ ತಡೆ ಬೇಲಿ ರಚಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ನೆಮ್ಮಾರ್ ಪುಟ್ಟಪ್ಪ ಹೆಗ್ಡೆ ಮಾತನಾಡಿ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆ ಖಾಲಿಯಿದ್ದು, ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕಾಕಷ್ಟು ತೊಂದರೆಯಾಗುತ್ತಿದೆ. ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ನಿಗಾ ವಹಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಂದಾಯ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಆರೋಗ್ಯ, ಮೆಸ್ಕಾಂ, ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಿತು. ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
22 ಶ್ರೀ ಚಿತ್ರ 1-ಶೃಂಗೇರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷತೆಯಲ್ಲಿ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು.