ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಅರಣ್ಯ ಇಲಾಖೆ ಸಂಬಂಧ ಸಾರ್ವಜನಿಕರಿಂದ ಹೆಚ್ಚು ದೂರುಗಳು ಬರುತ್ತಿವೆ. ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡ ಬಗ್ಗೆ ಗ್ರಾಮಸ್ಥರಿಂದ ಅರಣ್ಯ ಇಲಾಖೆಗೆ ಮಾಹಿತಿ ಬರುತ್ತಿದೆ. ಇಂತಹ ಸಂದರ್ಭಗಳಲ್ಲಿ ನಿರ್ಲಕ್ಷ್ಯ ವಹಿಸದೇ ಅರಣ್ಯ ಅಧಿಕಾರಿಗಳು ಕೂಡಲೇ ಧಾವಿಸಬೇಕು. ಕಾಡು ಪ್ರಾಣಿಗಳಿಂದ ನಾಶವಾಗುವ ಬೆಳೆಗೆ ಪರಿಹಾರ ನೀಡಲು ಶೀಘ್ರ ಕ್ರಮ ವಹಿಸಬೇಕು ಎಂದರು.
ರೈತ ಸಂಘಟನೆಗಳು ವಿವಿಧ ಬೇಡಿಕೆಗಳನ್ನು ಈಡೇರಿಸಲು ಹಾಗೂ ಸಮಸ್ಯೆ ಪರಿಹರಿಸುವ ಸಂಬಂಧ ಸಲ್ಲಿಸಲಾಗಿರುವ ಮನವಿ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು, ಬಾಳೆ ಬೆಳೆಗಾರರಿಗೆ ಯಾವುದೇ ತಾರತಮ್ಯವಾಗದಂತೆ ಉತ್ತಮ ದರ ಸಿಗಬೇಕು. ಈ ನಿಟ್ಟಿನಲ್ಲಿ ಎಪಿಎಂಸಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಭೆ ಕರೆದು ಸಮಸ್ಯೆ ಇತ್ಯರ್ಥ ಮಾಡಬೇಕೆಂದು ನಿರ್ದೇಶನ ನೀಡಿದರು.ಹೋಟೆಲ್, ಬೇಕರಿ, ರೆಸ್ಟೋರೆಂಟ್ ಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳದೆ ಇರುವ ಬಗ್ಗೆ ದೂರು ಬಂದಿದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ವ್ಯಾಪಕ ಭೇಟಿ ನೀಡಿ ಪರಿಶೀಲಿಸಬೇಕು. ಶುದ್ದತೆ, ನೈರ್ಮಲ್ಯ ಇಲ್ಲದಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಂ.ವಿ. ವೆಂಕಟೇಶ್ ಮಾತನಾಡಿ, ಆಸ್ಪತ್ರೆಗಳಲ್ಲೇ ಸುರಕ್ಷಿತವಾಗಿ ಹೆರಿಗೆ ಆದರೆ ತಾಯಿ ಮಗು ಆರೋಗ್ಯವಾಗಿರುತ್ತಾರೆ. ಮನೆಗಳಲ್ಲಿ ಹೆರಿಗೆ ಪ್ರಕರಣಗಳು ಆಗದಂತೆ ಮನವೊಲಿಸಬೇಕು. ತಾಯಿ ಮಕ್ಕಳ ಶಿಶು ಮರಣ ಸಂಖ್ಯೆ ತಗ್ಗಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಕೆ. ವಿವೇಕಾನಂದ ಅವರು ಮಾತನಾಡಿ, ಶಿಕ್ಷಕರ ಕೊರತೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪೂರ್ಣ ಮಾಹಿತಿ ಒದಗಿಸಬೇಕು. ಈ ಸಂಬಂಧ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸಹಾಯಕವಾಗುತ್ತದೆ. ಶಾಲಾ ನಿರ್ಮಾಣಕ್ಕೆ ದಾನ ನೀಡಿರುವ ನಿವೇಶನ, ಕಟ್ಟಡ, ಇನ್ನಿತರ ವಿವರಗಳನ್ನು ಒದಗಿಸಬೇಕು ಎಂದರು.
ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕು. ಅರಣ್ಯ ಇಲಾಖೆ ವನ್ಯಜೀವಿಗಳಿಗೆ ನೀರು ಲಭ್ಯವಾಗುವಂತಹ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನರೇಗಾ ಅಡಿ ನೀರು ಪೂರೈಸುವ ಸಂಬಂಧ ಕೆಲಸಗಳನ್ನು ಕೈಗೊಂಡು ಉಪಯುಕ್ತವಾಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಶಾಸಕರಾದ ಎಂ.ಆರ್. ಮಂಜುನಾಥ್ ಮಾತನಾಡಿ, ಜೆ.ಜೆ.ಎಂ ಕುಡಿಯುವ ನೀರಿನ ಕಾಮಗಾರಿಗಳು ತಡವಾಗಿ ಆಗುತ್ತಿದೆ. ಕೆಲವೆಡೆ ಇನ್ನೂ ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ. ಯಾವ ವೇಳೆಗೆ ನೀರಿನ ಕಾಮಗಾರಿ ಪೂರ್ಣಗೊಳ್ಳುತ್ತವೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದರು.
ಗ್ರಾಮಾಂತರ ಪ್ರದೇಶಕ್ಕೆ ಬಸ್ ಸೇವೆ ಸಮರ್ಪಕವಾಗಿ ಇರಲಿಕೆ.ಎಸ್.ಆರ್.ಟಿ.ಸಿ ಬಸ್‌ಗಳ ಸೇವೆ ಗ್ರಾಮಾಂತರ ಪ್ರದೇಶಗಳಲ್ಲಿ ಸಮರ್ಪಕವಾಗಿ ಇರಬೇಕು. ಶಾಲಾ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಬಸ್ಸುಗಳ ನಿಯೋಜನೆಯಾಗಬೇಕು. ಈ ಸಂಬಂಧ ಸಭೆ ಕರೆದು ಅನುಕೂಲ ಮಾಡಿಕೊಡುವ ದಿಸೆಯಲ್ಲಿ ಮುಂದಾಗುವಂತೆ ಸಚಿವರು ತಿಳಿಸಿದರು.
ಕೊಳ್ಳೇಗಾಲದಲ್ಲಿನ ಅಬ್ದುಲ್ ಕಲಾಂ ಸಂಸ್ಥೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ತಪ್ಪು ತಪ್ಪೇ. ಈ ವಿಷಯದಲ್ಲಿ ಸ್ಪಷ್ಟನೆ ನೀಡಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.