ಮರಾಠಿ ಸಂಘದಿಂದ ಛತ್ರಪತಿ ಶಿವಾಜಿ ಜಯಂತಿ, ಮರಾಠಿ ಕ್ರೀಡಾ ಸಂಭ್ರಮ
ಸಮಾಜದಲ್ಲಿರುವ ದುರ್ಬಲರು, ತೀರ ಕಷ್ಟದಲ್ಲಿರುವ ಜನರ ಬದುಕಿಗೆ ಸ್ಪಂದಿಸಿ ಆಸರೆಯಾಗಿ, ಅವರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಲ್ಲಿ ಅದರಲ್ಲಿ ಜೀವನದ ಸಾರ್ಥಕ್ಯ ಇದೆ. ಪರರ ಕಷ್ಟಕ್ಕೆ ಸ್ಪಂದಿಸುವುದೇ ನಿಜವಾದ ಸಮಾಜಸೇವೆ. ಸಾಧನೆ ಮಾಡಲು ಬಹಳಷ್ಟು ಅವಕಾಶಗಳು ಇವೆ. ಆದ್ದರಿಂದ ಪ್ರತಿಯೊಬ್ಬರೂ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಸ್ಥಾನಕ್ಕೆ ಏರಲು ಪ್ರಯತ್ನಿಸಬೇಕು ಎಂದು ಅಂತಾರಾಷ್ಟ್ರೀಯ ಈಜು ತರಬೇತುದಾರ ಬಿ.ಕೆ. ನಾಯ್ಕ್ ಮಂಗಳೂರು ಹೇಳಿದರು.
ಅವರು ಕಾರ್ಕಳ, ಹೆಬ್ರಿ ತಾಲೂಕು ಮರಾಠಿ ಸಮಾಜ ಸೇವಾ ಸಂಘ ವತಿಯಿಂದ ಕಾರ್ಕಳ ಸ್ವರಾಜ್ ಮೈದಾನದಲ್ಲಿ ಆಯೋಜಿಸಲಾದ ಛತ್ರಪತಿ ಶಿವಾಜಿ ಜಯಂತಿ ಹಾಗೂ ಮರಾಠಿ ಕ್ರೀಡಾ ಸಂಭ್ರಮ 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಂಘ ಅಧ್ಯಕ್ಷ ಶೇಖರ ಕಡ್ತಲ ಅಧ್ಯಕ್ಷತೆ ವಹಿಸಿ, ಮುಂದೆ ಹೋಗುವರ ಕಾಲನ್ನು ಎಳೆಯದೆ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು. ಎಲ್ಲರ ಪಾಲ್ಗೊಳ್ಳುವಿಕೆಯಿಂದ ಬಲಿಷ್ಠ ಸಮಾಜ ನಿರ್ಮಾಣ ಆಗಬೇಕೆಂದು ತಿಳಿಸಿದರು.ಕರ್ನಾಟಕ ಬ್ಯಾಂಕ್‌ನ ಪ್ರವೀಣ್ ನಾಯ್ಕ್ ಸಂಪಿಗೆ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ದ.ಕ.ಜಿಲ್ಲಾ ಮಾಜಿ ಅಧ್ಯಕ್ಷ ಶ್ರೀನಿವಾಸ ನಾಯ್ಕ್ ಧ್ವಜಾರೋಹಣಗೈದರು.
ಈ ಸಂದರ್ಭ ಇತ್ತೀಚೆಗೆ ನಿಧನರಾದ ಪ್ರವೀಣ್ ನಾಯ್ಕ್ ಕುಕ್ಕುಜೆ ಅವರ ಕುಟುಂಬಕ್ಕೆ ಆರ್ಥಿಕ ನೆರವು ಹಸ್ತಾಂತರಿಸಲಾಯಿತು.ಪದ್ಮಾಕರ ನಾಯ್ಕ್ ಮಿಯಾರು ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಪವನ್ ದುರ್ಗ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹರೀಶ್ ಇರ್ವತ್ತೂರು ವಂದಿಸಿದರು.