ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ಕಳೆದ 4 ದಶಕಗಳಿಂದ ನೆಲಮಂಗಲ ವಿಧಾನಸಭೆ ಕ್ಷೇತ್ರದಲ್ಲಿ ಮತದಾನ ಮಾಡುತ್ತಿದ್ದರೂ, ಮಾಗಡಿ ತಾಲೂಕಿನಲ್ಲಿರುವ ಸೋಲೂರನ್ನು ನೆಲಮಂಗಲಕ್ಕೆ ಸೇರಿಸುವ ಮೂಲಕ ಅಭಿವೃದ್ಧಿಗೆ ನೆರವಾಗಬೇಕೆಂದು ನೆಲಮಂಗಲ ಶಾಸಕ ಎನ್. ಶ್ರೀನಿವಾಸ್ ಸಲ್ಲಿಸಿದ್ದ ಮನವಿಗೆ ಕೊನೆಗೂ ಸ್ಪಂದನೆ ದೊರೆತಿದೆ.ನೆಲಮಂಗಲ ವಿಧಾನಸಭೆ ಕ್ಷೇತ್ರವ್ಯಾಪ್ತಿಯ ಮಾಗಡಿ ತಾಲೂಕಿನ ಸೋಲೂರು ಜನರು ಕಳೆದ 46 ವರ್ಷಗಳಿಂದ ನೆಲಮಂಗಲ ಕ್ಷೇತ್ರದಲ್ಲೇ ಮತದಾನ ಮಾಡುತ್ತಿದ್ದಾರೆ. ಗ್ರಾಮಾಂತರ ಜಿಲ್ಲೆಯಲ್ಲಿದ್ದ ಮಾಗಡಿ ತಾಲೂಕು 2007ರಲ್ಲಿ ರಾಮನಗರ ಜಿಲ್ಲೆ ರಚನೆಯಾದ ಬಳಿಕೆ ರಾಮನಗರ ಸೇರಿತ್ತು.
ಇದರಿಂದ ಜನರ ಕೆಲಸಗಳಿಗೆ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಕಳೆದ 20 ವರ್ಷಗಳಿಂದ ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸುವ ಪ್ರಯತ್ನ ಜನಪ್ರತಿನಿಧಿಗಳಿಂದ ಆಗಿರಲಿಲ್ಲ. ಇದೀಗ ಶಾಸಕ ಎನ್.ಶ್ರೀನಿವಾಸ್ ಮಾಗಡಿ ಕಾರ್ಯಾಂಗ ವ್ಯಾಪ್ತಿಯ ಸೋಲೂರು ಹೋಬಳಿಯನ್ನು ನೆಲಮಂಗಲ ವ್ಯಾಪ್ತಿಗೆ ಸೇರಿಸುವ ಮನವಿ ಪತ್ರಕ್ಕೆ ಸಿಎಂ, ಡಿಸಿಎಂ ಮತ್ತು ಕಂದಾಯ ಸಚಿವರು ಸ್ಪಂದಿಸಿದ್ದಾರೆ. ಸಚಿವ ಸಂಪುಟಕ್ಕೆ ತರಲು ದಾಖಲಾತಿ ನೀಡುವಂತೆ ಜಿಲ್ಲಾಧಿಕಾರಿಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ.ಜನರ ಒತ್ತಾಯವೇಕೆ?:
ಸೋಲೂರು ಜನರು ನೆಲಮಂಗಲ ವಿಧಾನಸಭೆ ಕ್ಷೇತ್ರ ಹಾಗೂ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರಗಳಿಗೆ ಮತದಾನ ಮಾಡುತ್ತಾರೆ. ಆದರೆ ಕಂದಾಯ, ಕೃಷಿ, ಸಾರಿಗೆ, ಗೃಹ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ೪೦ಕ್ಕೂ ಹೆಚ್ಚು ಆಡಳಿತಾತ್ಮಕ ಇಲಾಖೆಗಳು ಮಾಗಡಿ ತಾಲೂಕಿಗೆ ಬರುತ್ತವೆ. ಆದರೆ ಶಾಸಕರು, ಸಂಸದರ ಮಾತನ್ನು ಕಾರ್ಯಾಂಗದ ಅಧಿಕಾರಿಗಳು ಕೇಳದೆ, ಸ್ಪಂದಿಸದೆ, ನಿರ್ಲಕ್ಷ್ಯ ಮಾಡಿರುವ ಪರಿಣಾಮ ಕಳೆದ 20 ವರ್ಷಗಳಿಂದ ಜನರಿಗೆ ಸರ್ಕಾರದ ಸೌಲಭ್ಯಗಳು ಮರೀಚಿಕೆಯಾಗಿವೆ.ಸಂಸದರ ಪತ್ರ, ಸ್ಥಳೀಯರ ಟೀಕೆ:
ನೆಲಮಂಗಲ ಶಾಸಕ ಎನ್. ಶ್ರೀನಿವಾಸ್ 2024ರ ಆಗಸ್ಟ್ 28ರಂದು ಮುಖ್ಯಮಂತ್ರಿಗೆ ಪತ್ರ ಬರೆದು ಸೋಲೂರು ನೆಲಮಂಗಲಕ್ಕೆ ಸೇರಿಸಲು ಮನವಿ ಮಾಡಿದ್ದರು. ಸಿಎಂ ಕಚೇರಿಯು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಲುವಾಗಿ 2024 ಸೆ.೧೨ರಂದು ರಾಮನಗರ ಜಿಲ್ಲಾಧಿಕಾರಿಗೆ ಆದೇಶಿಸಿ ಅತಿ ಜರೂರಾಗಿ ದಾಖಲಾತಿ ಸಲ್ಲಿಸುವಂತೆ ಸೂಚಿಸಿತ್ತು. ಆದರೆ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ 2024 ಸೆ.24ರಂದು ಕಂದಾಯ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದು ವ್ಯಾಪಕ ರಾಜಕೀಯಕ್, ಟೀಕೆಗೆ ಕಾರಣವಾಗಿದೆ.ಸಮಸ್ಯೆಗಳೇನು?:
1. ಸರ್ಕಾರಿ ಸೌಲಭ್ಯಕ್ಕೆ ಮಾಗಡಿ, ರಾಮನಗರ, ನೆಲಮಂಗಲ ವ್ಯಾಪ್ತಿಗೆ ಓಡಾಡುವ ಅನಿವಾರ್ಯತೆ2. ಸೋಲೂರು ವ್ಯಾಪ್ತಿಯ ಕೆಲವು ಗ್ರಾಮಗಳು ಕುದೂರು ಪೊಲೀಸ್ ಠಾಣೆ, ಮತ್ತೆ ಕೆಲವು ಗ್ರಾಮಗಳು ತಾವರೆಕೆರೆ ಠಾಣೆಗೆ ಬರುತ್ತವೆ. ಮಾಗಡಿಯು ಡಿವೈಎಸ್ಪಿ ಹಾಗೂ ಎಸ್ಪಿ ವ್ಯಾಪ್ತಿಗೆ ರಾಮನಗರಕ್ಕೆ ಸೇರುತ್ತದೆ.
3. ಸೋಲೂರಿನ ಅನೇಕ ಹಳ್ಳಿಗಳಿಗೆ ರಸ್ತೆ, ಸಾರಿಗೆ ಸೇರಿದಂತೆ ಮೂಲಸೌಕರ್ಯ ಸಿಗುತ್ತಿಲ್ಲ.4. ವೃದ್ಧಾಪ್ಯ ವೇತನಕ್ಕೆ, ವಿಕಲಚೇತನರ ಸಹಾಯಧನಕ್ಕೆ, ಕಂದಾಯ ಹಾಗೂ ಕೃಷಿ ಸೌಲಭ್ಯ
ಪಡೆಯಲು ರೈತರ ಪರದಾಟ‘ಸೋಲೂರನ್ನು ನೆಲಮಂಗಲಕ್ಕೆ ಸೇರಿಸಲು ಶಾಸಕ ಎನ್.ಶ್ರೀನಿವಾಸ್ ಸಾಕಷ್ಟು ಶ್ರಮವಹಿಸಿದ್ದಾರೆ. ಅದನ್ನು ಮಾಡುವ ಬದ್ಧತೆ ನಮಗಿದೆ. ಶಾಸಕರ ಪ್ರಯತ್ನ ಸಂಸದ( ಡಾ.ಕೆ.ಸುಧಾಕರ್)ರಿಗೆ ಗೊತ್ತಾಗಿ, ಅವರ ಹೆಸರೂ ಇರಲಿ ಎಂದು ಪ್ರಯತ್ನ ಮಾಡುತ್ತಿದ್ದಾರೆ.’
- ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ‘ಚುನಾವಣೆ ಸಮಯದಲ್ಲಿ ಜನರಿಗೆ ಮಾತು ನೀಡಿದ್ದೆ. ಅದರಂತೆ ಸಿಎಂ, ಡಿಸಿಎಂ, ಕಂದಾಯ ಸಚಿವರಿಗೆ ಮನವಿ ಮಾಡಿ ನಿರಂತರವಾಗಿ ಓಡಾಡಿ ಸೋಲೂರನ್ನು ನೆಲಮಂಗಲಕ್ಕೆ ಸೇರಿಸುವ ಪ್ರಯತ್ನ ಮಾಡುತ್ತಿದ್ದೇನೆ. ಸೋಲೂರು ಜನರ ಸಂಕಷ್ಟಕ್ಕೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸ್ಪಂದಿಸಿದೆ.’
- ಎನ್.ಶ್ರೀನಿವಾಸ್, ಶಾಸಕ, ನೆಲಮಂಗಲ
-------ಪೋಟೋ 1 : ಸೋಲೂರು ಹೋಬಳಿಯನ್ನು ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೆಲಮಂಗಲ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಶ್ರೀನಿವಾಸ್ ಭೇಟಿಯಾಗಿರುವುದು.
-------ಪೋಟೋ 2 : ಸಚಿವ ಸಂಪುಟಕ್ಕೆ ತರಲು ದಾಖಲಾತಿ ನೀಡುವಂತೆ ಜಿಲ್ಲಾಧಿಕಾರಿಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪತ್ರ ಬರೆದಿರುವ ಪ್ರತಿ.