ನಬಾರ್ಡ್ ಸಹಾಯದಲ್ಲಿ ಪುರಾತನ ಪೆರ್ನಾಳೆ ಕೆರೆಗೆ ಕಾಯಕಲ್ಪ

KannadaprabhaNewsNetwork | Published : Apr 7, 2024 1:45 AM

ಸಾರಾಂಶ

ಕೆರೆ ಅಭಿವೃದ್ಧಿಗೊಂಡರೆ ಪೆರ್ನಾಳೆ, ನೆಲ್ಲಿಗುಡ್ಡೆ, ಕಂಚಾರಿ ಕಂಡ, ಬೆಂದ್ರಾಳ, ಪಾದೆ ಮೊದಲಾದ ಪರಿಸರಗಳ ವ್ಯಾಪ್ತಿಗೆ 5 ಕಿ‌‌ಮೀ.ಗಿಂತ ಹೆಚ್ಚಿನ ದೂರಕ್ಕೆ ನೀರು ಹರಿದು ಬಂದು 350 ಹೆಕ್ಟೇರ್ ಪ್ರದೇಶಕ್ಕೆ ನೀರಿನ ಅನುಕೂಲವಾಗಲಿದೆ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟತ್ತಾಡಿ ಗ್ರಾಮದಲ್ಲಿರುವ ಪುರಾತನ ಪೆರ್ನಾಳೆ ಕೆರೆ ನಬಾರ್ಡ್‌ನ ಸಹಾಯದಲ್ಲಿ ಅಭಿವೃದ್ಧಿ ಹೊಂದಲಿದೆ. ಇದಕ್ಕೆ ಅಗತ್ಯ ಸಮೀಕ್ಷೆಗಳು ಪೂರ್ಣಗೊಂಡು ಪ್ರಾಥಮಿಕ ಹಂತದ ಕಾಮಗಾರಿಗಳನ್ನು ಆರಂಭಿಸಲಾಗಿದೆ.

ತೋಟತ್ತಾಡಿ ಗ್ರಾಮದ 27.47 ಎಕರೆ ಪ್ರದೇಶದಲ್ಲಿ ಇರುವ ಪೆರ್ನಾಳೆ ಕೆರೆ ಇಲ್ಲಿನ 300ಕ್ಕಿಂತ ಅಧಿಕ ಕುಟುಂಬಗಳ ಕೃಷಿಗೆ ಜೀವಾಳವಾಗಿದೆ. ಪ್ರಸ್ತುತ ಜನವರಿ ತಿಂಗಳವರೆಗೆ ಇಲ್ಲಿಂದ ಹರಿಯುವ ನೀರು, ಕೃಷಿ ತೋಟಗಳಿಗೆ ಹರಿದು ಬರುತ್ತದೆ. ಕೆರೆಯಲ್ಲಿ ಭಾರಿ ಪ್ರಮಾಣದ ಹೂಳು ತುಂಬಿದ್ದು ಸರಿಯಾದ ಕಾಲುವೆ ವ್ಯವಸ್ಥೆ ಇಲ್ಲದಿರುವುದರಿಂದ ಮತ್ತಷ್ಟು ಸಮಯ ಬರಬಹುದಾದ ನೀರಿಗೆ ಅಡ್ಡಿಯಾಗಿದೆ. ಪುರಾತನ ಕಾಲದ ಈ ಕೆರೆ ಅಭಿವೃದ್ಧಿಗೊಂಡರೆ ಇನ್ನಷ್ಟು ಕುಟುಂಬಗಳಿಗೆ ಹಾಗೂ ಹೆಚ್ಚಿನ ಸಮಯ ನೀರು ದೊರಕುವ ಜತೆ ಗ್ರಾಮದ ಅಂತರ್ಜಲ ಮಟ್ಟವು ಹೆಚ್ಚಲಿದೆ. ಈ ಹಿಂದೆಯೇ ಕಾಯಕಲ್ಪ ಸಿಗಬೇಕಿದ್ದ ಈ ಕೆರೆಗೆ ತಡವಾಗಿಯಾದರೂ ಅಭಿವೃದ್ಧಿ ಭಾಗ್ಯ ಸಿಕ್ಕಿರುವುದು ಪರಿಸರದ ಜನರ ವಿಶ್ವಾಸ ಹೆಚ್ಚಿಸಿದೆ.

ನಬಾರ್ಡ್ ಸಹಕಾರ: ಈ ಕೆರೆಯ ಅಭಿವೃದ್ಧಿಗೆ ಪಂಚಾಯಿತಿಯು ನಬಾರ್ಡ್‌ಗೆ ಮನವಿ ಸಲ್ಲಿಸಿತ್ತು‌. ಅಧಿಕಾರಿಗಳ ತಂಡ ಇಲ್ಲಿಗೆ ಆಗಮಿಸಿ, ಪರಿಸರ ಅಧ್ಯಯನ ನಡೆಸಿ ಕೆರೆ ಅಭಿವೃದ್ಧಿಗೊಂಡರೆ ಉಂಟಾಗಬಹುದಾದ ಅನುಕೂಲಗಳ ಪರಿಶೀಲನೆ ನಡೆಸಿತು. ಕೆರೆ ಅಭಿವೃದ್ಧಿಗೊಂಡರೆ ಪೆರ್ನಾಳೆ, ನೆಲ್ಲಿಗುಡ್ಡೆ, ಕಂಚಾರಿ ಕಂಡ, ಬೆಂದ್ರಾಳ, ಪಾದೆ ಮೊದಲಾದ ಪರಿಸರಗಳ ವ್ಯಾಪ್ತಿಗೆ 5 ಕಿ‌‌ಮೀ.ಗಿಂತ ಹೆಚ್ಚಿನ ದೂರಕ್ಕೆ ನೀರು ಹರಿದು ಬಂದು 350 ಹೆಕ್ಟೇರ್ ಪ್ರದೇಶಕ್ಕೆ ನೀರಿನ ಅನುಕೂಲವಾಗಲಿದೆ ಎಂಬುದನ್ನು ಮನಗಂಡು, ಕೆರೆಯಲ್ಲಿ ಹೆಚ್ಚಿನ ನೀರಿನ ಸಂಗ್ರಹ ಕ್ಕೆ ಆದ್ಯತೆ ನೀಡಿ ಸುತ್ತಲ ಜಲಮೂಲಗಳ ನೀರು ಕೆರೆಯನ್ನು ಸೇರುವಂತೆ ಮಾಡುವ ಕುರಿತು ಅಧ್ಯಯನ ನಡೆಸಿತು.

ಬಳಿಕ ಗ್ರಾಮಸ್ಥರ ಸಭೆಯನ್ನು ಕರೆದು ಸಮಿತಿ ರಚಿಸಿ ಇದೀಗ ಪ್ರಾಥಮಿಕ ಹಂತದ ಕಾಮಗಾರಿಗಳು ಆರಂಭವಾಗಿವೆ.

ಬಹು ವರ್ಷದ ಬೇಡಿಕೆ: ಐತಿಹಾಸಿಕ ಪೆರ್ನಾಳೆ ಕೆರೆ ತೋಟತ್ತಾಡಿ ಗ್ರಾಮಕ್ಕೆ ನೀರಿನ ಮೂಲವಾಗಿದೆ.. ಪ್ರಾಚೀನವಾದ ಈ ಕೆರೆಯಲ್ಲಿ ಸದ್ಯ ಹೂಳು ತುಂಬಿ ತನ್ನ ಮೂಲ ಸ್ವರೂಪ ಕಳೆದುಕೊಂಡಿದ್ದರು ಗ್ರಾಮಸ್ಥರಿಗೆ ಆಧಾರವಾಗಿದೆ.

ಈ ಕೆರೆ ಅಭಿವೃದ್ಧಿ ಹೊಂದಿದರೆ ಗ್ರಾಮದ ಬಹುತೇಕ ಬೇಸಿಗೆ ನೀರಿನ ಸಮಸ್ಯೆ ನೀಗಲಿದೆ. ಕೆರೆಯ ಸಮೀಪ ವಾಸಿಸುವ ಕುಟುಂಬಗಳಿಗೆ ಹೆಚ್ಚಿನ ಮೂಲಭೂತ ಸೌಲಭ್ಯಗಳು ದೊರಕಲಿವೆ‌.ಇ ದರ ಅಭಿವೃದ್ಧಿ ಬಹಳ ದೊಡ್ಡ ಮೊತ್ತದ ಯೋಜನೆಯಾದ ಕಾರಣ ಗ್ರಾಮ ಪಂಚಾಯಿತಿಯಿಂದ ಅನುಷ್ಠಾನಗೊಳಿಸುವುದು ಸುಲಭದ ಮಾತಲ್ಲ ಆದರೆ ಈಗ ನಬಾರ್ಡ್ ಸಹಾಯಹಸ್ತ ಚಾಚಿದ ಕಾರಣ ಬಹು ವರ್ಷದ ಬೇಡಿಕೆ ಎಂದು ಈಡೇರುವ ಹಂತದಲ್ಲಿದೆ‌

ಯೋಜನೆಯನ್ನು ಅನುಷ್ಠಾನಗೊಳಿಸಲು ಗ್ರಾಮಸ್ಥರು ಒಪ್ಪಿಗೆ ನೀಡಿದ್ದಾರೆ. ಯೋಜನೆಯ ರೂಪುರೇಷೆಗಳು ಸಿದ್ಧಗೊಂಡಿದ್ದು ಅಗತ್ಯ ಅನುದಾನದ ಬಗ್ಗೆ ವರದಿ ಸಲ್ಲಿಸಲಾಗಿದೆ. ಸುಮಾರು ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎನ್ನುತ್ತಾರೆ ನಬಾರ್ಡ್‌ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಸಂಗೀತಾ ಕರ್ತಾ.

ಪ್ರಸ್ತುತ ಊರವರ ಸಹಕಾರದೊಂದಿಗೆ ಕೆರೆ ಪ್ರದೇಶಕ್ಕೆ ತೆರಳುವ ರಸ್ತೆ ದುರಸ್ತಿಗೊಳಿಸುವ ಕಾಮಗಾರಿ, ಕಿಂಡಿ ಅಣೆಕಟ್ಟು ರಚನೆ ನಡೆಯುತ್ತಿದೆ. ಕೆರೆಯು ಅಭಿವೃದ್ಧಿ ಹೊಂದುವುದರಿಂದ ಗ್ರಾಮದ ಹೆಚ್ಚಿನ ಭಾಗಗಳಿಗೆ ನೀರು ಹರಿದುಬರಲಿದೆ ಎಂದು ಚಾರ್ಡಾಡಿ ಗ್ರಾಪಂ ಪಿಡಿಒ ಪುರುಷೋತ್ತಮ ಅಭಿಪ್ರಾಯಪಡುತ್ತಾರೆ.

Share this article