ಎಂ.ಕೆ.ಹರಿಚರಣ್ ತಿಲಕ್
ನ್ಯಾಯಾಲಯದ ತಡೆಯಾಜ್ಞೆ ತೆರವಾದ ಹಿನ್ನೆಲೆಯಲ್ಲಿ ಪಟ್ಟಣ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಇಂದು (ಸೆ.25 ) ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ಅನುಕೂಲ ವಾತಾವರಣವಿದ್ದು, ಜೆಡಿಎಸ್ - ಬಿಜೆಪಿ ಮೈತ್ರಿ ಸದಸ್ಯರಲ್ಲಿ ಗೊಂದಲ ಏರ್ಪಟ್ಟಿದೆ.
ಪುರಸಭೆಯ ಶಹರಿ ರೋಜ್‌ಗಾರ್ ಭವನದಲ್ಲಿ ಬೆಳಗ್ಗೆ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣಾ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ. ನೂತನ ಮೀಸಲಾತಿ ಪ್ರಕಾರ ಪಟ್ಟಣ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿರಿಸಲಾಗಿತ್ತು.ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಿರುವ ಸರ್ಕಾರದ ನಿಲುವನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷದ ಸದಸ್ಯ ಕೆ.ಸಿ.ಮಂಜುನಾಥ್ ರಾಜ್ಯ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ ಪರಿಣಾಮ ಕಳೆದ ಸೆ.2 ರಂದು ಪುರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆದಿತ್ತು.
ಪಟ್ಟಣ ಪುರಸಭೆಯಲ್ಲಿ 23 ಜನ ಚುನಾಯಿತ ಸದಸ್ಯರಲ್ಲಿ ಜೆಡಿಎಸ್ 11, ಕಾಂಗ್ರೆಸ್ 10, ಓರ್ವ ಬಿಜೆಪಿ ಹಾಗೂ ಪಕ್ಷೇತರ ಸದಸ್ಯರಿದ್ದಾರೆ. ಇದರೊಂದಿಗೆ ಕ್ಷೇತ್ರದ ಶಾಸಕ ಮತ್ತು ಸಂಸದರು ಸೇರಿ 25 ಮಂದಿ ಮತದಾನದ ಹಕ್ಕು ಪಡೆದಿದ್ದಾರೆ.
11 ಮಂದಿ ಜೆಡಿಎಸ್ ಸದಸ್ಯರಲ್ಲಿ ಒಮ್ಮತವಿಲ್ಲ. ನಾಲ್ವರು ಜೆಡಿಎಸ್, 7 ಮಂದಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಬೆಂಬಲಿತ ಬಿಜೆಪಿ ಪಾಳಯದಲ್ಲಿದ್ದಾರೆ. ಸಮನ್ವಯತೆಯ ಕೊರತೆಯಿಂದ ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದ ಜೆಡಿಎಸ್ ಈಗಲೂ ಒಡೆದ ಮನೆಯಾಗಿದೆ. ಸಹಜವಾಗಿಯೇ ಇದರ ಲಾಭ ಕಾಂಗ್ರೆಸ್ ಪಕ್ಷಕ್ಕೆ ದಕ್ಕುವ ನಿರೀಕ್ಷೆ ಇದೆ.
ಮೈತ್ರಿ ಪಾಳಯದಲ್ಲಿ ಇದುವರೆಗೂ ಅಭ್ಯರ್ಥಿ ಆಯ್ಕೆಯಾಗಿಲ್ಲ. ಆದರೂ ಶಾಸಕ ಎಚ್.ಟಿ.ಮಂಜು ಅವರು ಘೋಷಿಸುವ ಅಭ್ಯರ್ಥಿಗೆ ಮತ ಹಾಕುವುದಾಗಿ ಪ್ರಕಟಿಸಿದ್ದಾರೆ. ಸದ್ಯದ ಪರಿಸ್ಥಿಯಲ್ಲಿ ಕಾಂಗ್ರೆಸ್ ಗೆಲುವು ನಿರಾಯಾಸ ಎನ್ನುವ ವಾತಾವರಣವಿದೆ. ಜೆಡಿಎಸ್ ಪಕ್ಷದಿಂದ ಯಾರು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಲಿದ್ದಾರೆನ್ನುವ ಕುತೂಹಲ ಮೂಡಿದೆ.