ಚಿತ್ರದುರ್ಗ: ಮತಗಟ್ಟೆ ಸಿಬ್ಬಂದಿಗೆ ಅಭ್ಯರ್ಥಿ ಕಡೆಯಿಂದ ಆಹಾರ ಸರಬರಾಜು ಮಾಡಲು ನಿರ್ಬಂಧ ವಿಧಿಸಲಾಗಿದೆ. ಮತದಾನ ಸೇರಿದಂತೆ ಚುನಾವಣೆ ಕಾರ್ಯಕ್ಕೆ ನೇಮಕಗೊಂಡ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಒತ್ತಡ ರಹಿತವಾಗಿ ಚುನಾವಣೆ ಕಾರ್ಯನಿರ್ವಹಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸಲಹೆ ನೀಡಿದರು.
ಚುನಾವನಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಚುನಾವಣೆ ಕಾರ್ಯವನ್ನು ಒತ್ತಡ ಎಂದು ಭಾವಿಸುವ ಬದಲು ಸಂತಸದಿಂದ ಕಾರ್ಯನಿರ್ವಹಿಸಿ. ಎಲ್ಲಾ ಹಂತದ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಚುನಾವಣೆ ಆಯೋಗದದಿಂದ ಈ ಬಾರಿ ನಿರ್ವಹಿಸಬೇಕಾದ ಕಾರ್ಯಗಳು, ಮುಚ್ಚಿದ ಲಕೋಟೆ ಹಾಗೂ ತೆರದ ಲಕೋಟೆಯಲ್ಲಿ ಒಪ್ಪಿಸಬೇಕಾದ ಬಗ್ಗೆ ಸ್ಪಷ್ಟ ನಿಯಮ ರೂಪಿಸಲಾಗಿದೆ. ಇದಕ್ಕಾಗಿ ವಿವಿಧ ಬಣ್ಣದ ಲಕೋಟೆಗಳನ್ನು ನಿರ್ಧರಿಸಲಾಗಿದೆ. ಹೆಚ್ಚುವರಿ ಲಕೋಟೆಗಳನ್ನು ಸಹ ವಿತರಿಸಲಾಗುವುದು. ಏ.25 ಮಸ್ಟರಿಂಗ್ ದಿನ ಹಂಚಿಕೆಯಾದ ಮತಗಟ್ಟೆ ಬಗ್ಗೆ ತಿಳಿಸಲಾಗುವುದು ಎಂದರು.
ಮತಗಟ್ಟೆಗಳಲ್ಲಿ ಅಕ್ಷರ ದಾಸೋಹದ ಅಧಿಕಾರಿಗಳು ಊಟದ ವ್ಯವಸ್ಥೆ ಮಾಡಲಿದ್ದಾರೆ. ಇದಕ್ಕಾಗಿ ಊಟದ ಮೆನುವನ್ನೂ ಸಿದ್ಧಪಡಿಸಲಾಗಿದೆ. ಆರೋಗ್ಯ ಸಂಬಂಧಿ ವಿಚಾರಗಳ ಮೇಲ್ವಿಚಾರಣೆಗೆ ಆಯಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮಹಿಳಾ ಸಿಬ್ಬಂದಿ ಸಹಾಯಕ್ಕಾಗಿ ಸಿಡಿಪಿಓಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ಯಾವುದೇ ಪಕ್ಷದ ಅಭ್ಯರ್ಥಿಗಳು ಮತಗಟ್ಟೆ ಸಿಬ್ಬಂದಿಗೆ ಆಹಾರ ಸರಬರಾಜು ಮಾಡುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಮತಗಟ್ಟೆ ಕಾರ್ಯಕ್ಕೆ ನೇಮಕವಾದವರು ನೀಡಿದ್ದ 12ಎ ಫಾರಂಗಳಿಗೆ ಇಡಿಸಿ (ಚುನಾವಣೆ ಕರ್ತವ್ಯ ಪ್ರಮಾಣ ಪತ್ರ) ನೀಡಲಾಗಿದೆ. ಇಡಿಸಿ ಪ್ರಮಾಣ ಪತ್ರವನ್ನು ಕರ್ತವ್ಯ ನಿರತ ಮತಗಟ್ಟೆಗಳಿಗೆ ತೆಗೆದುಕೊಂಡು ಹೋಗಿ, ಅಲ್ಲೇ ಮತದಾನ ಮಾಡಬಹುದು ಎಂದರು.ತರಬೇತಿ ಕಾರ್ಯ ವೀಕ್ಷಣೆಗೆ ಆಗಮಿಸಿದ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಸಾಮಾನ್ಯ ವೀಕ್ಷಕ ಮನೋಹರ ಮರಂಡಿ ಮಾತನಾಡಿ, ಮತಗಟ್ಟೆ ಅಧಿಕಾರಿಗಳು ಮತದಾನ ಆರಂಭಕ್ಕೂ ಮುನ್ನ ಅಣಕು ಮತದಾನ ನಡೆಸುವುದು ಕಡ್ಡಾಯವಾಗಿದೆ. ತರುವಾಯ ಕಂಟ್ರೋಲ್ ಯುನಿಟ್‍ನಲ್ಲಿ ಅಣಕು ಮತದಾನ ವಿವರವನ್ನು ಅಳಿಸಬೇಕು. ವಿವಿ ಪ್ಯಾಟ್‍ನಲ್ಲಿ ಸಂಗ್ರಹವಾದ ಅಣಕು ಮತದಾನ ಖಾತ್ರಿ ಚೀಟಿಗಳನ್ನು ಹೊರತೆಗದು, ಕ್ರಮಬದ್ಧವಾಗಿ ವಿವಿಪ್ಯಾಟ್‍ನ್ನು ಸೀಲ್ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಹಶೀಲ್ದಾರ್ ಡಾ.ನಾಗವೇಣಿ, ನಗರಸಭೆ ಆಯುಕ್ತೆ ಎಂ.ರೇಣುಕಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಸೇರಿದಂತೆ ಮತ್ತಿತರು ಇದ್ದರು.