ಗ್ರಾಮಠಾಣಾ ಗಡಿಯನ್ನು ಬಹಳ ಹಿಂದೆ ನಿಗದಿಪಡಿಸಲಾಗಿದೆ. ಬಳಿಕ ವಿಸ್ತರಣೆಯಾಗಿರುವ ಪ್ರದೇಶವನ್ನು ಗ್ರಾಮಠಾಣಾ ಗಡಿಗೆ ಸೇರಿಸದ ಹಿನ್ನೆಲೆಯಲ್ಲಿ ನಾಗರಿಕರು ಹಲವು ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ ಪುನರ್ ಸಮೀಕ್ಷೆ ನಡೆಸಿ ನಿಗದಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಬೆಂಗಳೂರು : ಗ್ರಾಮಠಾಣಾ ಗಡಿಯನ್ನು ಬಹಳ ಹಿಂದೆ ನಿಗದಿಪಡಿಸಲಾಗಿದೆ. ಬಳಿಕ ವಿಸ್ತರಣೆಯಾಗಿರುವ ಪ್ರದೇಶವನ್ನು ಗ್ರಾಮಠಾಣಾ ಗಡಿಗೆ ಸೇರಿಸದ ಹಿನ್ನೆಲೆಯಲ್ಲಿ ನಾಗರಿಕರು ಹಲವು ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ ವಿಸ್ತರಣೆಯಾಗಿರುವ ಪ್ರದೇಶವನ್ನು ಪುನರ್ ಸಮೀಕ್ಷೆ ನಡೆಸಿ ನಿಗದಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ವಿಧಾನಸೌಧದಲ್ಲಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಹಾಗೂ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಜಂಟಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮಠಾಣಾ ಗಡಿ ಗುರುತಿಸುವಿಕೆ ಬಗ್ಗೆ ಸಮೀಕ್ಷೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಈ ಸಂಬಂಧ ಅನುಮತಿಗಾಗಿ ಕಂದಾಯ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಎಂದು ಸೂಚನೆ ನೀಡಿದರು.
ಜತೆಗೆ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಮೂಲ ಸೌಕರ್ಯ ಅಭಿವೃದ್ಧಿಗೊಳಿಸಲು ಸರ್ಕಾರಿ ಜಮೀನು ಕೊರತೆ ಉಂಟಾಗುತ್ತಿದೆ. ಭೂಸ್ವಾಧೀನ ಮಾಡಿಕೊಂಡು ಪರಿಹಾರ ನೀಡಿ ಮೂಲ ಸೌಕರ್ಯ ಮಾಡಲು ಹಣಕಾಸು ವೆಚ್ಚ ಹೆಚ್ಚಾಗುತ್ತಿದೆ. ಹೀಗಾಗಿ ಮೂಲ ಸೌಕರ್ಯಗಳಿಗೆ ಅಗತ್ಯವಿರುವ ಭೂಮಿಯನ್ನು ಗುರುತಿಸಿ ಮೀಸಲಿಡಲು ಭೂ ಬ್ಯಾಂಕ್ ಸ್ಥಾಪನೆ ಮಾಡಬೇಕು ಎಂದು ಸೂಚಿಸಿದರು.
ನಾನು ವಿಕೇಂದ್ರೀಕರಣದ ಪರ:
ನಾನು ವಿಕೇಂದ್ರೀಕರಣದ ಪರ. ಅಧಿಕಾರ ಒಂದೇ ಕಡೆ ಕೇಂದ್ರೀಕರಣ ಆಗುವುದನ್ನು ಎಂದಿಗೂ ಒಪ್ಪುವುದಿಲ್ಲ. ಹೀಗಾಗಿ ಅಧಿಕಾರವನ್ನು ಗ್ರಾಮ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು. ವಿಕೇಂದ್ರೀಕರಣದಲ್ಲಿ ಜನರ ಒಳಗೊಳ್ಳುವಿಕೆ ಬಹಳ ಮುಖ್ಯ. ಹೀಗಾಗಿ ಜನರ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕು. ಯೋಜನಾ ಮತ್ತು ಅಭಿವೃದ್ಧಿ ಸಮಿತಿಗಳು ಬಜೆಟ್ ಮಂಡನೆಗೆ ಪೂರ್ವದಲ್ಲಿ ಸಭೆ ಕರೆದು ಚರ್ಚಿಸಬೇಕು. ಅಧಿಕಾರ ವಿಕೇಂದ್ರೀಕರಣ ಕುರಿತು ಕಾನೂನು ಪ್ರಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ಮೀಸಲಾತಿ ಸೂಕ್ತವಾಗಿ ಪಾಲಿಸಿ:
ಗ್ರಾಮ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಂವಿಧಾನದ (73)(74)ರ ಅನ್ವಯ ಮೀಸಲಾತಿ ಸರಿಯಾಗಿ ಪಾಲನೆ ಆಗುತ್ತಿಲ್ಲ. ಗ್ರಾಮ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ, ಹಿಂದುಳಿದವರಿಗೆ ಮೀಸಲಾತಿ ಸರಿಯಾಗಿ ಪಾಲನೆ ಆಗುತ್ತಿದೆಯೇ ಎಂಬ ಬಗ್ಗೆ ರಾಜ್ಯದ ನೀತಿ ಆಯೋಗದ ಉಪಾಧ್ಯಕ್ಷರು ಗಮನ ಹರಿಸಬೇಕು. ಇದಕ್ಕಾಗಿ ರಾಜ್ಯದ ನೀತಿ ಆಯೋಗದ ಉಪಾಧ್ಯಕ್ಷರು ನಿಯಮಿತವಾಗಿ ರಾಜ್ಯ ಪ್ರವಾಸ ಮಾಡಬೇಕು ಎಂದು ಮುಖ್ಯಮಂತ್ರಿ ಅವರು ನಿರ್ದೇಶನ ನೀಡಿದರು.
ನೀತಿ ಯೋಜನೆ ಸಮಿತಿಗಳ ಆಯ್ಕೆ ಕಾಲಕಾಲಕ್ಕೆ ಆಗುವ ಕುರಿತು ಹಾಗೂ ಸಭೆಗಳು ನಿಯಮಿತವಾಗಿ ನಡೆಯಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಯಬೇಕು. ಇದಕ್ಕೆ ಕ್ರಮ ಕೈಗೊಳ್ಳಲಾಗುವಂತೆ ಜಿಲ್ಲಾಧಿಕಾರಿಗಳು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದರು.
ಆ.15ರ ಒಳಗಾಗಿ ಜವಾಬ್ದಾರಿ ನಕ್ಷೆ ಸಿದ್ಧಪಡಿಸಿ:
ಸ್ಥಳೀಯ ಸಂಸ್ಥೆಗಳಿ ಆರ್ಥಿಕ ಸಹಾಯ ಒದಗಿಸಲು ಹಣಕಾಸು ಆಯೋಗದ ಅಧ್ಯಕ್ಷರಾದ ಸಿ.ನಾರಾಯಣಸ್ವಾಮಿ ಅವರು ವರದಿ ನೀಡಿದ್ದು ಅದರ ಜಾರಿಗೆ ಕ್ರಮ ಕೈಗೊಳ್ಳುತ್ತೇವೆ. ಇನ್ನು ಸಂವಿಧಾನದ 73ನೇ ತಿದ್ದುಪಡಿ ಅನ್ವಯ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಜವಾಬ್ದಾರಿ ನಕ್ಷೆ ಸಿದ್ಧಪಡಿಸಲು 2023-24ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಲಾಗಿತ್ತು. ಅದರಂತೆ ಗ್ರಾಮೀಣಾಭಿವೃದ್ಧಿ ಇಲಾಖೆಯು 13 ಇಲಾಖೆಗಳಿಗೆ ಸಂಬಂಧಿಸಿ ಜವಾಬ್ದಾರಿ ನಕ್ಷೆ ಸಿದ್ದಪಡಿಸಿದ್ದು, 2ನೇ ಹಂತದಲ್ಲಿ ಬಾಕಿ ಇರುವ ಉಳಿದ 16 ಇಲಾಖೆಗಳ ಕಾರ್ಯಚಟುವಟಿಕೆಗಳ ಜವಾಬ್ದಾರಿ ನಕ್ಷೆಯನ್ನು 2025ರ ಆಗಸ್ಟ್ 15ರ ಒಳಗೆ ಪೂರ್ಣಗೊಳಿಸಿ ಎಂದು ಸಿದ್ದರಾಮಯ್ಯ ಸೂಚಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ, 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೇರಿ ಹಲವು ಅಧಿಕಾರಿಗಳು ಹಾಜರಿದ್ದರು.
ಗ್ರಾಮ ನಕ್ಷೆ ರಚನೆಗೆ ಪ್ರಸ್ತಾವ ಸಲ್ಲಿಸಿ
ಸಭೆಯಲ್ಲಿ ಹಲವು ಗ್ರಾಮಗಳು ಇನ್ನೂ ಗ್ರಾಮ ನಕ್ಷೆಯನ್ನೇ ಹೊಂದಿರದ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಹಲವು ಕಾರಣಗಳಿಂದ ಕೆಲ ಗ್ರಾಮಗಳಿಗೆ ಗ್ರಾಮ ನಕ್ಷೆಯೇ ಇರುವುದಿಲ್ಲ. ಅಂತಹ ಗ್ರಾಮಗಳಿಗೆ ಗ್ರಾಮ ನಕ್ಷೆ ರಚನೆ ಕುರಿತಂತೆ ಪ್ರಸ್ತಾವನೆ ಸಲ್ಲಿಸಿ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.