ಎಚ್.ಎನ್. ಪ್ರಸಾದ್
ಕನ್ನಡಪ್ರಭ ವಾರ್ತೆ ಹಲಗೂರುವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿವೃತ್ತ ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಬಳಗ ಕಟ್ಟಿಕೊಂಡು ದಳವಾಯಿ ಕೋಡಿಹಳ್ಳಿ ಸರ್ಕಾರಿ ಪ್ರೌಢಶಾಲೆ ಉಳಿಸಲು ಮುಂದಾಗಿದ್ದಾರೆ.
ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶಿಕ್ಷಕರು ಹಾಗೂ ವ್ಯಾಸಂಗ ಪಡೆದ ಹಿರಿಯ ವಿದ್ಯಾರ್ಥಿಗಳ ಬಳಗ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಪಣತೊಟ್ಟಿದ್ದಾರೆ.ದಳವಾಯಿ ಕೋಡಿಹಳ್ಳಿ ಗ್ರಾಮ ವ್ಯಾಪ್ತಿಯ ಸುತ್ತಮುತ್ತಲ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡುತ್ತಿರುವ ನಿವೃತ್ತ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು 7ನೇ ತರಗತಿ ಮುಗಿದ ನಂತರ 8ನೇ ತರಗತಿ ವಿದ್ಯಾಭ್ಯಾಸಕ್ಕೆ ಗ್ರಾಮದ ಪ್ರೌಢಶಾಲೆಗೆ ಮಕ್ಕಳನ್ನು ಸೇರಿಸಿ ಶಾಲೆ ಉಳಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತಿದ್ದಾರೆ.
ಗ್ರಾಮಗಳ ಪ್ರತಿ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಅವರ ಪೋಷಕರಿಗೆ ಶಾಲೆಯಲ್ಲಿ ನುರಿತ ಶಿಕ್ಷಕರಿಂದ ಉತ್ತಮ ಶಿಕ್ಷಣ ನೀಡುತ್ತಿರುವುದು, ಸರ್ಕಾರಿ ಶಾಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದಾಗಿದ್ದು, ನಿಮ್ಮ ಮಕ್ಕಳನ್ನು ಸೇರಿಸುವಂತೆ ಕೋರುತ್ತಿದ್ದಾರೆ.ಪ್ರೌಢಶಾಲೆಗಳಿಗೆ ಸರ್ಕಾರದಿಂದ ಸಿಗುವ ಸೌವಲತ್ತುಗಳ ಬಗ್ಗೆ ವಿದ್ಯಾರ್ಥಿಗಳ ಪೋಷಕರಿಗೆ ತಿಳಿಸಿ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಉಳಿದು ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಅರಿವು ಮೂಡಿಸಲಾಗುತ್ತಿದೆ.
ದಳವಾಯಿ ಕೋಡಿಹಳ್ಳಿ ಗ್ರಾಮ ವ್ಯಾಪ್ತಿಯ ಕೆಂಪಯ್ಯನದೊಡ್ಡಿ, ಬಾಳೆ ಹೊನ್ನಿಗ, ಗುಂಡಾಪುರ, ದೇವಿರಳ್ಳಿಯ ಹಿರಿಯ ಪ್ರಾಥಮಿಕ ಶಾಲೆಗಳಿಗೆ ತೆರಳಿ ಅಲ್ಲಿಯ ಶಿಕ್ಷಕರಿಗೂ ಹಾಗೂ ವಿದ್ಯಾರ್ಥಿಗಳಿಗೆ ಪ್ರೌಢಶಾಲೆಗಳಲ್ಲಿ ಮಕ್ಕಳ ವ್ಯಾಸಂಗ ಮುಂದುವರಿಸುವಂತೆ ಮನವರಿಕೆ ಮಾಡಿಕೊಡಲಾಗುತ್ತಿದೆ.ನಿವೃತ್ತ ಮುಖ್ಯ ಶಿಕ್ಷಕ ಎ.ಎಸ್.ದೇವರಾಜು, ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಶಾಲೆ ಮುಖ್ಯಶಿಕ್ಷಕ ಸಿದ್ದೇಗೌಡ, ಶಿಕ್ಷಕ ಜಯರಾಮು ಸೇರಿದಂತೆ ಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ತಮ್ಮಣ್ಣೇಗೌಡ, ಹಿರಿಯ ವಿದ್ಯಾರ್ಥಿಗಳಾದ ರವೀಶ, ಸಿದ್ದಯ್ಯ, ರಾಜೇಶ್ವರ, ನಾಗರಾಜು, ಜಯಶಂಕರ ಮತ್ತು ಇತರರು ತಂಡ ಕಟ್ಟಿಕೊಂಡು ಶಾಲೆ ಉಳಿಸಲು ಮುಂದಾಗಿರುವುದು ಶ್ಲಾಘನೀಯವಾಗಿದೆ.ಇವರ ಮನವಿಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ದೊರಕಿದೆ. ಮಾರ್ಚ್ ಕೊನೆ ವಾರದಲ್ಲಿ ಮತ್ತೊಮ್ಮೆ ವಿದ್ಯಾರ್ಥಿ ಮನೆಗೆ ಭೇಟಿ ನೀಡಿ ಪೋಷಕರನ್ನು ಭೇಟಿ ಮಾಡುವ ತೀರ್ಮಾನ ಮಾಡಿಕೊಂಡಿದ್ದೇವೆ. ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗುತ್ತಿದ್ದೇವೆ.
- ಎ.ಎಸ್.ದೇವರಾಜು, ನಿವೃತ್ತ ಮುಖ್ಯ ಶಿಕ್ಷಕರುನಾವು ವ್ಯಾಸಂಗ ಮಾಡಿದ ಶಾಲೆ ಉಳಿಯಬೇಕು. ಭವಿಷ್ಯದಲ್ಲಿ ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಹಳೆಯ ವಿದ್ಯಾರ್ಥಿಗಳ ಸಂಘ ಮಾಡಿಕೊಂಡು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರಾಗಿದ್ದೇವೆ. ಇದಕ್ಕೆ ಮಕ್ಕಳ ಪೋಷಕರು ಸಹಕಾರ ನೀಡಬೇಕು.-ತಮ್ಮಣ್ಣೇಗೌಡ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ