ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಫೆ. ೪ರಂದು ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುವಾಗ ವಿನಾಕಾರಣ ರಾಜಕೀಯ ದುರುದ್ದೇಶದಿಂದ ಗ್ಯಾರಂಟಿ ಸಮಿತಿಯ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಾರ್ಯವೈಖರಿಯ ಬಗ್ಗೆ ಮಾತನಾಡುವ ಮೊದಲು ಅಂಕಿಅಂಶಗಳನ್ನು ಪಡೆದುಕೊಂಡು ಮಾತನಾಡಲಿ ಎಂದರು.
ಚನ್ನರಾಯಪಟ್ಟಣ ತಾಲೂಕಿನಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಾರಿಗೆ ತಂದಿರುವ ೫ ಯೋಜನೆಗಳು ಪಕ್ಷಾತೀತವಾಗಿ ಎಲ್ಲ ಫಲಾನುಭವಿಗಳಿಗೆ ತಲುಪುತ್ತಿದ್ದು, ಈ ಸಂಬಂಧ ಅಧ್ಯಕ್ಷರು ಮತ್ತು ಸಮಿತಿಯ ಸದಸ್ಯರು ಸೇರಿ ತಾಲೂಕಿನಲ್ಲಿ ಪ್ರವಾಸ ಮಾಡಿ, ಸದರಿ ಯೋಜನೆಗಳ ಪರಾಮರ್ಶೆ ನಡೆಸಿ, ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ.ಇದನ್ನು ತಾಲೂಕಿನ ಪಲಾನುಭವಿಗಳಿಗೆ ಪಕ್ಷಾತೀತವಾಗಿ ಸಮಿತಿಯು ತಲುಪಿಸುತ್ತಿರುವ ಬಗ್ಗೆ ಅಂಕಿಅಂಶಗಳನ್ನು ಪಡೆಯದೆ ಈ ರೀತಿ ಸುಖಾಸುಮ್ಮನೆ ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾದುದ್ದು ಎಂದರು.ಯೋಜನೆಗಳು ಸಹಕಾರಿ: ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಬಡ ಮಕ್ಕಳ ಕುಟುಂಬದ ನಿರ್ವಹಣೆಗೆ ವಿದ್ಯಾಭ್ಯಾಸಕ್ಕೆ, ದಿನನಿತ್ಯದ ಖರ್ಚು ವೆಚ್ಚಗಳಿಗೆ ತುಂಬಾ ಸಹಕಾರಿಯಾಗಿದ್ದು, ಶಕ್ತಿ ಯೋಜನೆಯಿಂದ ಬಡ ಮಹಿಳೆಯರು ಪುಣ್ಯಕ್ಷೇತ್ರಗಳಿಗೆ ಹೋಗಲು ಮತ್ತು ದೇವರ ದರ್ಶನ ಪಡೆಯಲು ತುಂಬಾ ಅನುಕೂಲವಾಗಿದೆ. ಇದರಿಂದ ಮುಜರಾಯಿ ಇಲಾಖೆಗೂ ಸಹ ಆರ್ಥಿಕತೆ ಹೆಚ್ಚಾಗಿದ್ದು, ಈ ಯೋಜನೆಗಳಿಂದ ಜನರ ಮತ್ತು ಸರ್ಕಾರದ ನಡುವೆ ಉತ್ತಮ ಬಾಂಧವ್ಯ ಉಂಟಾಗಿದ್ದು, ಈ ಯೋಜನೆಗಳಿಂದ ಜನರು ಖುಷಿಯಾಗಿ ಸರ್ಕಾರದ ೫ ಯೋಜನೆಗಳನ್ನು ಮೆಚ್ಚಿಕೊಂಡು, ಜೀವನ ನಡೆಸಿಕೊಂಡು ಬರುತ್ತಿದ್ದಾರೆ. ಇದನ್ನು ಸಹಿಸದ ಮಾಜಿ ಸಚಿವರು ಅಂಕಿಅಂಶಗಳನ್ನು ನೋಡದೇ ನೀಡಿರುವ ಹೇಳಿಕೆಯನ್ನು ಸಮಿತಿಯು ಕಟುವಾಗಿ ವಿರೋಧಿಸುತ್ತದೆ ಎಂದರು.
ಗ್ಯಾರಂಟಿ ಯೋಜನೆಯು ತಾಲೂಕಿನಲ್ಲಿ ಶೇಕಡ ೯೬.೫ರಷ್ಟು ಫಲಾನುಭವಿಗಳಿಗೆ ತಲುಪಿದ್ದು, ೨೦೨೪ರ ಡಿಸೆಂಬರ್‌ವರೆಗೆ ಗೃಹಲಕ್ಷ್ಮೀ ಯೋಜನೆಯಡಿ ತಾಲೂಕಿನಲ್ಲಿ ೮೧,೧೧೧ ಫಲಾನುಭವಿಗಳು, ಅನ್ನಭಾಗ್ಯ ಯೋಜನೆಯಡಿ ೮೨,೩೦೧ ಫಲಾನುಭವಿಗಳು, ಗೃಹಜ್ಯೋತಿ ಯೋಜನೆಯಡಿ ೮೨,೩೧೦ ಫಲಾನುಭವಿಗಳು, ಯುವನಿಧಿ ಯೋಜನೆಯಡಿ ೫೨೬ ಫಲಾನುಭವಿಗಳು ಮತ್ತು ಶಕ್ತಿ ಯೋಜನೆಯಡಿ ೨೫,೦೩೦ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ.
ಅನ್ನಭಾಗ್ಯಕ್ಕೆ ೪,೦೭,೧೫,೪೮೦ ರುಪಾಯಿಗಳು, ಗೃಹಲಕ್ಷ್ಮಿ ಯೋಜನೆಗೆ ೧೫,೭೧,೧೮,೦೦೦ ರು.ಗಳು, ಶಕ್ತಿಯೋಜನೆಗೆ ೨,೩೪,೪೨,೮೯೯ ರೂಗಳು. ಗೃಹಜ್ಯೋತಿ ಯೋಜನೆಗೆ ೨,೮೦,೨೨,೦೦೦ ರು.ಗಳು, ಯುವನಿಧಿಗೆ ೧೭,೪೩,೦೦೦ ರು.ಗಳು ಒಟ್ಟು ಪ್ರತಿ ತಿಂಗಳು ಸರ್ಕಾರ ನಮ್ಮ ತಾಲೂಕಿಗೆ ಒಟ್ಟು ೨೫ ಕೋಟಿ ರುಪಾಯಿಗಳಿಗಿಂತ ಹೆಚ್ಚು ಅನುದಾನವನ್ನು ನೀಡುತ್ತಿದೆ ಎಂದು ಎಲ್.ಪಿ.ಪ್ರಕಾಶ್ ಗೌಡ ಮಾಹಿತಿ ನೀಡಿದರು. ಸಮಿತಿ ಸದಸ್ಯರಾದ ಎ.ಪಿ.ರಂಗಸ್ವಾಮಿ, ಸಿ.ಎನ್. ಗಣೇಶ್, ಎ.ಆರ್.ನಾಗೇಶ್, ಬಿ.ಆರ್. ಕೆಂಪೇಗೌಡ, ಕೆ. ಎನ್.ನಾಗೇಶ್, ಮಿಲ್ಟ್ರಿ ಮಂಜು, ಎಸ್.ಎಂ.ಜನಾರ್ಧನ್, ಎಚ್.ಕೆ. ರಂಗಸ್ವಾಮಿ ಇದ್ದರು.