ಮುಖಭಂಗ ನಂಗಲ್ಲ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಎಂದ ರೇವಣ್ಣ

KannadaprabhaNewsNetwork | Published : Apr 30, 2025 12:35 AM

ಸಾರಾಂಶ

ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮುಖಭಂಗ ಹೊರತು ನನಗಲ್ಲ. ಜಿಲ್ಲೆಯಲ್ಲಿ ಬಿಜೆಪಿನಾ ಕಾಂಗ್ರೆಸ್‌ಗೆ ಅಡ ಇಟ್ಟಿದ್ದಾರೆ. ನಗರಸಭೆ ಅಧ್ಯಕ್ಷರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇನೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಗುಡುಗಿದರು. ನಾನು ಮೂವತ್ತು ವರ್ಷ ರಾಜಕೀಯ ಮಾಡಿದ್ದೀನಿ, ಇಂತಹದ್ದನ್ನೆಲ್ಲಾ ನೋಡಿದ್ದೀನಿ, ನನಗೆ ರಾಜಕೀಯ ಹಿನ್ನಡೆಯಲ್ಲ ಇದು ಬುನಾದಿ. ಆ ಅಧ್ಯಕ್ಷನಿಗೆ ಮಾನ, ಮರ್ಯಾದೆ, ಗೌರವ ಇದೆಯಾ! ಈ ಎರಡು ರಾಷ್ಟ್ರೀಯ ಪಕ್ಷಗಳಿಗೆ ಹೆದರಲ್ಲ ಎಂದು ಗುಡುಗಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮುಖಭಂಗ ಹೊರತು ನನಗಲ್ಲ. ಜಿಲ್ಲೆಯಲ್ಲಿ ಬಿಜೆಪಿನಾ ಕಾಂಗ್ರೆಸ್‌ಗೆ ಅಡ ಇಟ್ಟಿದ್ದಾರೆ. ನಗರಸಭೆ ಅಧ್ಯಕ್ಷರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇನೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಗುಡುಗಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಅವಿಶ್ವಾಸ ನಿರ್ಣಯವನ್ನು ಯಾವ ಉದ್ದೇಶಕ್ಕಾಗಿ ತಂದಿದ್ದೇನೆ ಎಂಬ ಬಗ್ಗೆ ನಮ್ಮ ಪಾರ್ಟಿಯ ಎಲ್ಲರೂ ಕುಳಿತುಕೊಂಡು ತೀರ್ಮಾನಿಸಿದ್ದೇವೆ. ಈಗಿನ ಅಧ್ಯಕ್ಷರು ನನಗೆ ಮೂರೇ ತಿಂಗಳು ಸಾಕು ಅಂದಿದ್ದರು. ಆದರೆ ಮೂರು ಹೋಗಿ ಆರು ತಿಂಗಳು ಕಳೆದರೂ ಅಧಿಕಾರ ಬಿಡಲಿಲ್ಲ. ಬೇಕಾದರೆ ಹಾಸನಾಂಬೆ ಮುಂದೆ ಸತ್ಯದ ಬಗ್ಗೆ ಆಣೆ ಮಾಡಲಿ. ನಾವು ಮುಸಲ್ಮಾನ್ ಸದಸ್ಯರಿಗೆ ಅವಕಾಶ ಕೊಡಬೇಕು ಎಂದಿದ್ದೆವು. ಆದರೆ ನನಗೇ ಮೊದಲ ಅವಕಾಶ ಕೊಡಿ ಎಂದು ಕೇಳಿದ್ದರು. ಹಾಸನದಲ್ಲಿ ಕಾಂಗ್ರೆಸ್ ಬಿಜೆಪಿ ಒಟ್ಟಾಗಿ ನಡೆದುಕೊಂಡಿವೆ. ಹಿಂದೆ ಎನ್‌ಡಿಎ ಜೊತೆ ಮೈತ್ರಿ ಇದೆ ಅಂಥ ಉಪಾಧ್ಯಕ್ಷ ಸ್ಥಾನ ಕೊಟ್ಟಿದ್ದೆವು. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಿಗೂ ತಿಳಿಸಿದ್ದೇನೆ. ಕಳೆದ ಒಂದು ವರ್ಷದಿಂದ ಜಿಲ್ಲೆಯಲ್ಲಿ ಏನು ನಡೆಯುತ್ತಿದೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಗೊತ್ತಾಗಬೇಕು. ಬಿಜೆಪಿ-ಕಾಂಗ್ರೆಸ್ ಎರಡೂ ಸೇರಿ ಪ್ರಾದೇಶಿಕ ಪಕ್ಷದ ಮೇಲೆ ಸವಾಲು ಒಡ್ಡಿದ್ದಾರೆ. ಆ ಸವಾಲನ್ನು ನಾವು ಸ್ವೀಕರಿಸುತ್ತೇವೆ. ನಮ್ಮ ಸದಸ್ಯರು ನಮ್ಮ ಪಕ್ಷದ ಗೌರವ ಉಳಿಸಿದ್ದಾರೆ ಎಂದರು.

ರಾಷ್ಟ್ರೀಯ ಪಕ್ಷಗಳಿಗೆ ಹೆದರಲ್ಲ:

ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಇದ್ದರೇ ಹಾಸನದಲ್ಲಿ ಮಾತ್ರ ಬಿಜೆಪಿ ಕಾಂಗ್ರೆಸ್ ಅಲೆಯನ್ಸ್ ಇದೆ ಎಂದು ಹಾಸನದಲ್ಲಿ ಅವಿಶ್ವಾಸ ಮಂಡನೆ ಸೋತ ಬಗ್ಗೆ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು. ಅದೆಷ್ಟು ದಿನ ಇರ್ತಾನೆ, ಕಾಂಗ್ರೆಸ್- ಬಿಜೆಪಿ ಇವರು ಮೂರು ಜನ ಸೇರಿ ಅದೇನ್ ಕಡಿದು ಕಟ್ಟೆ ಹಾಕ್ತಾರೆ ನೋಡೋಣ! ನಮ್ಮ ಪಕ್ಷದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ, ಅವರ ಜೊತೆ ನಾನು ಇರ್ತೇನೆ. ಆತನ ವಿರುದ್ಧ ಕಾನೂನು ರೀತಿ ಏನ್ ಕಲಿಸಬೇಕು ಕಲಿಸ್ತೀನಿ. ನಾನು ಮೂವತ್ತು ವರ್ಷ ರಾಜಕೀಯ ಮಾಡಿದ್ದೀನಿ, ಇಂತಹದ್ದನ್ನೆಲ್ಲಾ ನೋಡಿದ್ದೀನಿ, ನನಗೆ ರಾಜಕೀಯ ಹಿನ್ನಡೆಯಲ್ಲ ಇದು ಬುನಾದಿ. ಆ ಅಧ್ಯಕ್ಷನಿಗೆ ಮಾನ, ಮರ್ಯಾದೆ, ಗೌರವ ಇದೆಯಾ! ಈ ಎರಡು ರಾಷ್ಟ್ರೀಯ ಪಕ್ಷಗಳಿಗೆ ಹೆದರಲ್ಲ ಎಂದು ಗುಡುಗಿದರು.

ಮುಖಭಂಗ ನನಗೆ ಆಗಿಲ್ಲ, ಬಿಜೆಪಿ ರಾಜ್ಯ ಅಧ್ಯಕ್ಷರಿಗೆ ಮುಖಭಂಗ ಆಗಿದೆ ಎಂದು ಪುನಃ ಇದೇ ಮಂತ್ರ ಪಠಿಸಿದರು. ಬಿಜೆಪಿ ಜೊತೆ ಮೈತ್ರಿಯು ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರು ಎಲ್ಲಿವರೆಗೂ ಇಟ್ಟುಕೊಳ್ಳುತ್ತಾರೆ ಅಲ್ಲಿವರೆಗೂ ಇರುತ್ತೇವೆ ಅದಕ್ಕೆ ಭೇದಭಾವ ಇಲ್ಲ. ಪಕ್ಷದೊಳಗೆ ಸರಿಪಡಿಸಿಕೊಳ್ಳುವುದು ಅವರಿಗೆ ಬಿಟ್ಟ ವಿಚಾರ. ನಗರಸಭೆಯಲ್ಲಿ 21 ಜನರು ಜೆಡಿಎಸ್‌ನವರು ಮತ ಹಾಕಿದ್ದಾರೆ. ಕಾಂಗ್ರೆಸ್ ಜೊತೆ ಬಿಜೆಪಿ ಹೋದರೇ ನಾನೇನು ಮಾಡುವುದಕ್ಕೆ ಆಗುತ್ತದೆ ಎಂದರು.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ಪ್ರಕರಣ ವಿಚಾರವಾಗಿ ಮಾತನಾಡಿ, ಈ ಘಟನೆಯನ್ನು ನಾನು ಉಗ್ರವಾಗಿ ಖಂಡನೆ ಮಾಡ್ತೀನಿ. ಎಲ್ಲಾ ಧರ್ಮವನ್ನು ಸಮನಾಗಿ ನೋಡಬೇಕು. ಅಲ್ಲಿ ಯಾರೋ ಮುಸ್ಲಿಂ ಮಾಡಿದರೆ, ಇಲ್ಲಿ ಇರುವ ಮುಸ್ಲಿಮರು ಏನು ಮಾಡ್ತಾರೆ. ಕಾನೂನು ರೀತಿ ಏನಿದೆ ರಾಷ್ಟ್ರೀಯ ಮಟ್ಟದಲ್ಲಿ ಮಾಡಿಕೊಳ್ಳಲಿ ಎಂದರು.

Share this article