ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬರ-ನೆರೆ ಸಂದರ್ಭಗಳಲ್ಲಿ ಸಂಕಷ್ಟಕ್ಕೀಡಾಗುವ ರೈತಾಪಿ ಸಮೂಹಕ್ಕೆ ನೆರವು ನೀಡುವುದು ಧರ್ಮ. ಹಿಂದಿನ ಎಲ್ಲ ಕೇಂದ್ರ ಸರ್ಕಾರಗಳು ಕೂಡ ಯಾವುದೇ ರಾಜ್ಯ ಬರದಿಂದ ಸಂಕಷ್ಟಕ್ಕೆ ಸಿಲುಕಿದಾಗ ನೆರವು ನೀಡುತ್ತಲೇ ಬಂದಿವೆ. ರಾಜ್ಯದ 223 ತಾಲೂಕುಗಳು ಬರಕ್ಕೆ ತುತ್ತಾಗಿವೆ. ರೈತರ ನೆರವಿಗೆ ಧಾವಿಸಬೇಕು. ಹೀಗಾಗಿ ಪರಿಹಾರ ಬಿಡುಗಡೆ ಮಾಡಿ ಎಂದರೆ ಕುಂಟು ನೆಪ ಹೇಳಿದರು ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ 28 ಸಂಸದರ ಪೈಕಿ ಕಾಂಗ್ರೆಸ್ ಪಕ್ಷದ ಸಂಸದ ಡಿ.ಕೆ.ಸುರೇಶ್ ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಸಂಸದರು ನೆರವು ಬಿಡುಗಡೆ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಿಲ್ಲ. ರಾಜ್ಯದಿಂದ ಬಿಜೆಪಿಯ 25 ಸಂಸದರು ಆಯ್ಕೆಯಾಗಿದ್ದಾರೆ. ಆದರೆ, ಇವರಿಗೆ ಪ್ರಧಾನಿಗೆ ರಾಜ್ಯದ ಪರಿಸ್ಥಿತಿ ಮನವರಿಕೆ ಮಾಡಿ ನೆರವು ತರಲು ಸಾಧ್ಯವಾಗಲಿಲ್ಲ. ಜೆಡಿಎಸ್‌ನ ಪ್ರಜ್ವಲ್ ರೇವಣ್ಣ ಮತ್ತು ಸುಮಲತಾ ಕೂಡ ಮಾತನಾಡಲಿಲ್ಲ ಎಂದು ಕುಟುಕಿದರು.ಸಂಸತ್ತಿನಲ್ಲಿ ಮಾತನಾಡುವವರನ್ನು ಆಯ್ಕೆ ಮಾಡಬೇಕು. ತುಟಿ ಬಿಚ್ಚದವರಿಂದ ರಾಜ್ಯಕ್ಕೆ ಯಾವುದೇ ಪ್ರಯೋಜನ ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರು ಕಾನೂನು ಪದವೀಧರೆಯಾಗಿದ್ದು, ದೂರದೃಷ್ಟಿ ಹೊಂದಿದ್ದಾರೆ. ತರುಣಿಯಾಗಿದ್ದು, ಕೆಲಸ ಮಾಡುವ ಉತ್ಸಾಹ ಹೊಂದಿದ್ದಾರೆ. ಈ ಬಾರಿ ಅವರಿಗೆ ಆಶೀರ್ವಾದ ಮಾಡಿ ದೆಹಲಿಗೆ ಕಳುಹಿಸಿ. ನಿಮ್ಮ ಸಮಸ್ಯೆಗಳ ಬಗ್ಗೆ ಅವರು ಸಂಸತ್ತಿನಲ್ಲಿ ಧ್ವನಿ ಎತ್ತಲಿದ್ದಾರೆ ಎಂದು ಹೇಳಿದರು.
ಮೋದಿ ಅವರಿಗೆ ಅಧಿಕಾರ ನಡೆಸಲು ಹತ್ತು ವರ್ಷ ಅವಕಾಶ ನೀಡಿದ್ದೀರಿ. ಈ ಕ್ಷೇತ್ರದ ಸಂಸದರಿಗೆ 20 ವರ್ಷ ಅವಕಾಶ ಕೊಟ್ಟಿದ್ದೀರಿ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಲು ಬಾಗಲಕೋಟೆಯಿಂದಲೇ ಗೆಲುವು ಆರಂಭವಾಗಲಿ. ಸಂಯುಕ್ತಾ ಪಾಟೀಲ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ನಾವೇನು ಭಿಕ್ಷುಕರಾ?:
ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಸಂದಾಯ ಮಾಡುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ನಮ್ಮ ಹಕ್ಕನ್ನು ನಾವು ಕೇಳಿದರೆ ಸಬೂಬು ಹೇಳುತ್ತಾರೆ. ರಾಜ್ಯ ಸರ್ಕಾರ ಬರ ಪರಿಹಾರ ನೆರವಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಯಿತು ಎಂದರು.
ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ಲೇವಡಿ ಮಾಡುವವರು ಈ ಯೋಜನೆಗಳಿಂದ ಬದುಕು ಕಟ್ಟಿಕೊಂಡ ಕುಟುಂಬಗಳನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚಿಸಲಿ ಎಂದು ಸವಾಲು ಹಾಕಿದರು.ಮತ್ತೆ ಮೋದಿ ಅಧಿಕಾರಕ್ಕೆ ಬಂದರೆ ನಾವು ಗುಲಾಮರಾಗಿ ಬದುಕಬೇಕಾಗುತ್ತದೆ. ಸಂವಿಧಾನ ಬದಲಾವಣೆಯ ಪ್ರಯತ್ನಗಳು ನಡೆಯುವುದರಲ್ಲಿ ಅನುಮಾನ ಇಲ್ಲ. ಬಿಜೆಪಿಯ ಹಲವು ಮುಖಂಡರು ಈ ಸುಳಿವು ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ದೇಶವನ್ನು ಪಾರು ಮಾಡಲು ಮೋದಿಯನ್ನು ಮನೆಗೆ ಕಳುಹಿಸಿ.