ಕನ್ನಡಪ್ರಭ ವಾರ್ತೆ ಬೆಂಗಳೂರು
ಮದ್ಯ ವ್ಯವಸ ಮುಕ್ತರಾಗಿ ಎಂದು ಹೇಳಬೇಕಿರುವ ರಾಜ್ಯ ಸರ್ಕಾರ ಮದ್ಯ ಮಾರಾಟದಿಂದ ₹50 ಸಾವಿರ ಕೋಟಿ ಆದಾಯ ಸಂಗ್ರಹಿಸುವ ಗುರಿ ಹೊಂದಿರುವುದು ದುರದೃಷ್ಟಕರ ಎಂದು ಮನೋವೈದ್ಯ ಸಿ.ಆರ್.ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.ಗುರುವಾರ ನಗರದ ಗಾಂಧಿ ಭವನದಲ್ಲಿ ಚಿತ್ತರಗಿ ಇಳಕಲ್ ವಿಜಯ ಮಹಂತೇಶ್ವರ ಸಂಸ್ಥಾನದ ಶ್ರೀ ಮಹಾಂತ ಶಿವಯೋಗಿಗಳ ಜಯಂತಿ ಅಂಗವಾಗಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಗಾಂಧಿ ಸ್ಮಾರಕ ಸಹಯೋಗದಲ್ಲಿ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಸರ್ಕಾರಕ್ಕೆ ಮದ್ಯದ ತೆರಿಗೆಯೇ ಮೂಲ ಆದಾಯ. ಹಾಗಾಗಿ ಮಧ್ಯರಾತ್ರಿವರೆಗೂ ಮದ್ಯದಂಗಡಿ ಬಾಗಿಲು ತೆರೆದಿರುತ್ತದೆ. ಪೊಲೀಸರು ಬಾಗಿಲು ಹಾಕಿಸುವುದಿಲ್ಲ. ಇದರಿಂದ ಮದ್ಯ ವ್ಯವನಿಗಳ ಸಂಖ್ಯೆಯೊಂದಿಗೆ ಆದಾಯವೂ ಹೆಚ್ಚಾಗುತ್ತದೆ. ಸರ್ಕಾರ ಪರ್ಯಾಯ ಆದಾಯದ ಮಾರ್ಗ ಕಂಡುಕೊಂಡು ಮದ್ಯದ ತೆರಿಗೆಯ ಮೇಲೆ ಆಧಾರವಾಗುವುದನ್ನು ನಿಲ್ಲಿಸುವ ಕಡೆಗೆ ಚಿಂತನೆ ನಡೆಸಬೇಕು ಎಂದರು.ಒಂದು ದೇಶವನ್ನು ನಾಶ ಮಾಡಲು ಅಣುಬಾಂಬ್ ಬೇಕಿಲ್ಲ. ಗಾಂಜಾ ಸೇರಿದಂತೆ ಮಾದಕ ವಸ್ತುಗಳೇ ಸಾಕು, ಅವು ಮನುಷ್ಯನನ್ನು ಸಾಯಿಸುತ್ತವೆ. ಬೆಂಗಳೂರಿಗೆ ನಿತ್ಯ ಟನ್‌ಗಟ್ಟಲೇ ಗಾಂಜಾ ಬೀಳುತ್ತಿದೆ. ಪ್ರೌಢಶಾಲೆ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಮತ್ತು ಸಾಫ್ಟ್‌ವೇರ್ ಎಂಜಿನಿಯರ್‌ಗಳೇ ಇದರ ಟಾರ್ಗೆಟ್ ಆಗಿದ್ದಾರೆ. ಧೂಮಪಾನದಿಂದ ಹೃದಯಾಘಾತ, ಕ್ಯಾನ್ಸರ್ ಪ್ರಮಾಣವೂ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆಶೀರ್ವಚನ ನೀಡಿದ ಚಿತ್ತರಗಿ ಇಳಕಲ್ ವಿಜಯಮಹಂತೇಶ್ವರ ಸಂಸ್ಥಾನ ಶಿರೂರು ಶಾಖಾ ಮಠದ ಬಸವಲಿಂಗ ಸ್ವಾಮೀಜಿ, ನಮ್ಮ ಮನಸ್ಸಿನಲ್ಲಿಯೇ ದೇವರು ಇದ್ದಾನೆ. ದೇವರಿರುವ ಜಾಗಕ್ಕೆ ಮದ್ಯ, ಧೂಮ, ಮಾದಕ ವಸ್ತುಗಳಂತಹ ಅಸಹ್ಯಗಳನ್ನು ತುಂಬಿದರೆ ಆರೋಗ್ಯವಾಗಿರಲು ಸಾಧ್ಯವಿಲ್ಲ ಎಂದರು.ಕಾರ್ಯಕ್ರಮದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ। ವೂಡೇ ಪಿ.ಕೃಷ್ಣ, ವಿಕ್ಟೋರಿಯಾ ಆಸ್ಪತ್ರೆಯ ಮನೋ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ। ಗುರುಪ್ರಸಾದ್, ವಾರ್ತಾ ಇಲಾಖೆ ಉಪನಿರ್ದೇಶಕ ರಾಮಲಿಂಗಪ್ಪ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ಮಹೇಶ್, ಗಾಂಧಿ ಭವನದ ನಿರ್ದೇಶಕ ಶಿವರಾಜ್, ಜಿ.ಸಿ.ಚಂದ್ರಶೇಖರ್ ಉಪಸ್ಥಿತರಿದ್ದರು.