ಕನ್ನಡಪ್ರಭ ವಾರ್ತೆ ಮೈಸೂರುರಾಜ್ಯದ 163 ತಾಲೂಕುಗಳಲ್ಲಿ ಬಗರ್ ಹುಕುಂ ಸಮಿತಿ ರಚಿಸಲಾಗಿದ್ದು, ಬಗರ್ ಹುಕುಂ ಸಾಗುವಳಿ ಅರ್ಜಿಗಳನ್ನು ಮುಂದಿನ 8 ತಿಂಗಳೊಳಗೆ ವಿಲೇವಾರಿ ಮಾಡಲು ರಾಜ್ಯ ಸರ್ಕಾರವು ಕ್ರಮ ವಹಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಮೈಸೂರು ವಿಭಾಗದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 163 ತಾಲೂಕುಗಳಲ್ಲಿ ಬಗರ್ ಹುಕುಂ ಸಾಗುವಳಿ ಸಮಿತಿಗಳನ್ನು ರಚಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿದ್ದು ಈ ಸಮಿತಿಗಳು ಈಗಾಗಲೇ 4.38 ಎಕರೆಗಿಂತ ಕಡಿಮೆ ಭೂಮಿ ಇರುವವರಿಗೆ ಮಾತ್ರ ಆಸ್ತಿಯನ್ನು ಸಕ್ರಮಿಕರಣ ಮಾಡಿ ಕೊಡಲು ಅವಕಾಶವಿದೆ. ಫಲಾನುಭವಿಗಳಿಗೆ ಮಾಲೀಕತ್ವದ ಹಕ್ಕನ್ನು ಡಿಜಲೀಕರಣ ಮಾಡಿ ಕೊಡಲಾಗುವುದು. ನಿಜವಾದ ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಲಾಗುವುದು ಎಂದರು. ಸಮಸ್ಯೆ ಇರುವ 1763 ಗ್ರಾಮಗಳ ಗುರುತುರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 1763 ಗ್ರಾಮಗಳನ್ನು ಸಮಸ್ಯೆ ಕಂಡು ಬರುವ ಗ್ರಾಮಗಳು ಎಂದು ಗುರುತಿಸಲಾಗಿದೆ. ಇಲ್ಲಿ ಅತಿವೃಷ್ಟಿಯಿಂದ ಆಗುವ ಅನಾಹುತಗಳನ್ನು ತಡೆಯಲು ವಲ್ನರಬಲ್ ಗ್ರಾಮ ಪಂಚಾಯತಿಗಳಲ್ಲಿ ಗ್ರಾಪಂ ಹಂತದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್ ಫೋರ್ಸ್ ತಂಡಗಳನ್ನು ರಚಿಸಬೇಕು. ಈ ತಂಡದಲ್ಲಿ ಅಗ್ನಿಶಾಮಕ ಅಧಿಕಾರಿಗಳು, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಕಂದಾಯ ಇಲಾಖೆಯ ಅಧಿಕಾರಿಗಳು ಇರಬೇಕು. ಈ ತಂಡಗಳು ಅತಿವೃಷ್ಟಿಯಿಂದ ತೊಂದರೆ ಆಗುವ ವಲ್ನರಬಲ್ ಸ್ಥಳಗಳನ್ನು ಗುರುತಿಸಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು. ಮಳೆಯಿಂದ ಕುಸಿಯಬಹುದಾದ ಮನೆಗಳನ್ನು ಗುರುತಿಸಿ ಅಂತಹ ಮನೆಗಳಲ್ಲಿ ಜಿಲ್ಲಾಧಿಕಾರಿಗಳ ಹಾಗೂ ತಹಸೀಲ್ದಾರ್ ಅವರ ಪಿಡಿ ಖಾತೆಯಲ್ಲಿ 776 ಕೋಟಿ ರೂ. ಟಾಸ್ಕ್ ಫೋರ್ಸ್ ಹಣ ಇದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ 4 ತುಕಡಿಗಳು ಈಗಾಗಲೇ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೆ, ರಾಜ್ಯ ವಿಪತ್ತು ನಿರ್ವಹಣಾ ತುಕಡಿಗಳನ್ನು ಸಹ ನಿಯೋಜಿಸಲಾಗುವುದು ಎಂದರು. ಭೂ ಆಧಾರ್ ಯೋಜನೆರಾಜ್ಯದಲ್ಲಿ 4 ಕೋಟಿ ಆರ್ ಟಿಸಿಯಲ್ಲಿ 2 ಕೋಟಿ ಆರ್ ಟಿಸಿಗಳ ಪರಿಶೀಲನೆ ಆಗಿದೆ. ಆರ್ ಟಿಸಿಗಳಿಗೆ ಆಧಾರ್ ಅಥೆಂಟಿಕೇಶನ್ ಆಗಬೇಕು. ಇದರಿಂದ ಡೂಪ್ಲಿಕೇಟ್ ಸೇಲ್ ಅನ್ನು ನಿಯಂತ್ರಣ ಮಾಡಲು ಅನುಕೂಲವಾಗುತ್ತದೆ. ಪತಿಯೊಬ್ಬರು ತಮ್ಮ ಜಮೀನಿಗೆ ಆಧಾರ್ ಸಿಡಿಂಗ್ ಮಾಡಲು ಭೂ ಆಧಾರ್ ಯೋಜನೆಯನ್ನು ಜಾರಿಗೆ ತರಲಾಗಿದೆ. ರೈತರು ತಮ್ಮ ಆಸ್ತಿಗೆ ಆಧಾರ್ ಸೀಡಿಂಗ್ ಮಾಡಿಸಿದರೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಪೋಡಿ ಮುಕ್ತ ಗ್ರಾಮಗಳನ್ನು ಮಾಡಲು ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಯಾರ ದಾಖಲೆಗಳು ಸಮರ್ಪಕವಾಗಿ ಇರುವವರ ಪೋಡಿಯನ್ನು ಮಾಡಲಾಗುತ್ತದೆ. 767 ಸರ್ವೇಯರ್ ಹುದ್ದೆಗಳನ್ನು ಭರ್ತಿ ಹಾಗೂ 43 ಎಡಿಎಲ್ಆರ್ ಹುದ್ದೆಗಳ ನೇಮಕಾತಿ ಮಾಡಲಾಗುತ್ತಿದೆ. 23 ಕೋಟಿ ವೆಚ್ಚದಲ್ಲಿ ಆಧುನಿಕ ಸರ್ವೇ ಉಪಕರಣಗಳನ್ನು ನೀಡಲಾಗುತ್ತಿದೆ. ಮಾರ್ಚ್ ತಿಂಗಳಲ್ಲಿ 1200 ಜನ ಲೈಸನ್ಸ್ ಸರ್ವೇಯರ್ ಗಳನ್ನು ಈಗಾಗಲೇ ನೇಮಕ ಮಾಡಲಾಗಿದೆ ಎಂದು ಅವರು ವಿವರಿಸಿದರು.ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ, ವಿಪತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಇದ್ದರು.----ಕೋಟ್...ರಾಜ್ಯದಲ್ಲಿ ಶೇ.15 ರಷ್ಟು ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗಳು ಮಾತ್ರ ಖಾಲಿ ಇವೆ. ಈಗಾಗಲೇ 1000 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗೆ ಅಧಿಸೂಚನೆ ಹೊರಡಿಸಿದ್ದು ನೇಮಕಾತಿ ಹಂತದಲ್ಲಿ ಇದೆ. 1000 ಹುದ್ದೆಗಳ ಭರ್ತಿಯಿಂದ ಹುದ್ದೆಗಳ ಕೊರತೆ ನೀಗಲಿದೆ.- ಕೃಷ್ಣ ಬೈರೇಗೌಡ, ಕಂದಾಯ ಸಚಿವ