ರೈತರ ಭೂ ಸ್ವಾಧೀನ ಪ್ರಕ್ರಿಯೆ ಮರುಪರಿಶೀಲನೆ

KannadaprabhaNewsNetwork | Published : Aug 24, 2024 1:16 AM

ಸಾರಾಂಶ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನೆಲಮಂಗಲ ತಾಲೂಕು, ಸೋಂಪುರ ಹೋಬಳಿ, ಹನುಮಂತಪುರ ಹಾಗೂ ತ್ಯಾಮಗೊಂಡ್ಲು ಹೋಬಳಿಯ ಕೋಡಿಪಾಳ್ಯ ಮತ್ತು ಬಿದಲೂರು ಗ್ರಾಮದ 500 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕೆ.ಐ.ಎ.ಡಿ.ಬಿ. ರೈತರಿಗೆ ನೋಟಿಸ್‌ ನೀಡಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆಐಎಡಿಬಿ 500 ಎಕರೆ ಭೂ ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆ ತಡೆ ಹಿಡಿಯಬೇಕೆಂದು ಕೋರಿ ಸಂಸದ ಡಾ.ಕೆ.ಸುಧಾಕರ್‌ ಮಾಡಿದ್ದ ಮನವಿಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಸ್ಪಂದಿಸಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನೆಲಮಂಗಲ ತಾಲೂಕು, ಸೋಂಪುರ ಹೋಬಳಿ, ಹನುಮಂತಪುರ ಹಾಗೂ ತ್ಯಾಮಗೊಂಡ್ಲು ಹೋಬಳಿಯ ಕೋಡಿಪಾಳ್ಯ ಮತ್ತು ಬಿದಲೂರು ಗ್ರಾಮದ 500 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕೆ.ಐ.ಎ.ಡಿ.ಬಿ. ರೈತರಿಗೆ ನೋಟಿಸ್‌ ನೀಡಿತ್ತು.ತೋಟಗಾರಿಕೆ ಬೆಳೆ ಜಮೀನು

ಈ ಸಮಸ್ಯೆಯನ್ನು ಸಂಸದ ಡಾ.ಕೆ.ಸುಧಾಕರ್‌ ಸಚಿವರ ಗಮನಕ್ಕೆ ತಂದಿದ್ದರು. ಇದು ಸಂಪೂರ್ಣ ಕೃಷಿ ಜಮೀನುಗಳಾಗಿದ್ದು, ತೆಂಗು, ಅಡಿಕೆ, ಬಾಳೆ ಮೊದಲಾದ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗಿದೆ. ಇದನ್ನು ಕೆ.ಐ.ಎ.ಡಿ.ಬಿ. ಪರಿಶೀಲಿಸದೆ ಸ್ವಾಧೀನ ಮಾಡುತ್ತಿದ್ದು, ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಕೃಷಿಯನ್ನೇ ನಂಬಿ ಬದುಕುತ್ತಿರುವ ಇವರಿಗೆ ಬೇರೆ ಆದಾಯವಿಲ್ಲ. ಆದ್ದರಿಂದ ಸಚಿವರು ಕೂಡಲೇ ಮಧ್ಯಪ್ರವೇಶಿಸಿ ಭೂ ಸ್ವಾಧೀನ ತಡೆಹಿಡಿದು, ಪರ್ಯಾಯ ಮಾರ್ಗೋಪಾಯಗಳ ಬಗ್ಗೆ ಚರ್ಚೆ ನಡೆಸಬೇಕು, ರೈತರ ಬದುಕಿನ ಹಿತದೃಷ್ಟಿಯಿಂದ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರದಲ್ಲಿ ಕೋರಿದ್ದರು. ಅಧಿಕಾರಿಗಳಿಗೆ ಸಚಿವ ಪತ್ರ

ಇದಕ್ಕೆ ಸ್ಪಂದಿಸಿ ಪತ್ರ ಬರೆದಿರುವ ಸಚಿವರು, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಸಂಸದ ಡಾ.ಕೆ.ಸುಧಾಕರ್‌, ಭೂಸ್ವಾಧೀನ ಪ್ರಸ್ತಾವ ಕೈಬಿಡುವಂತೆ ಮನವಿ ಮಾಡಿ ತಾವು ಬರೆದಿದ್ದ ಪತ್ರಕ್ಕೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಸ್ತಾವವನ್ನು ಮರುಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಸ್ವಾಗತಾರ್ಹ ಎಮದು ತಿಳಿಸಿದ್ದಾರೆ.

ಭೂ ಸ್ವಾಧೀನ ಕೈಬಿಡಿ

ಜಮೀನುಗಳಲ್ಲಿ ತೆಂಗು, ಅಡಿಕೆ, ಬಾಳೆ ಮುಂತಾದ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರ ಹಿತದೃಷ್ಟಿಯಿಂದ ಈ ಭೂಸ್ವಾದೀನ ಪ್ರಸ್ತಾವವನ್ನು ಯಾವುದೇ ಕಾರಣಕ್ಕೂ ಕೈಗೆತ್ತಿಕೊಳ್ಳಬಾರದು ಎಂದು ರೈತರ ಪರವಾಗಿ ಸಚಿವರಲ್ಲಿ ಮತ್ತೊಮ್ಮೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

Share this article