ಅನ್ಯಾಯವಾಗದಂತೆ ಗೃಹ ಜ್ಯೋತಿ ಪರಿಷ್ಕರಿಸಿ: ಶಿವಾನಂದ ಸ್ವಾಮಿ

KannadaprabhaNewsNetwork |  
Published : Jul 15, 2026, 01:15 AM IST
ಞಞ | Kannada Prabha

ಸಾರಾಂಶ

ಚಿಕ್ಕಮಗಳೂರುಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಬಾರದೆಂದು ಗೃಹ ಜ್ಯೋತಿಯ ಪರಿಷ್ಕರಣೆ ಕಾರ್ಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಸೂಚಿಸಿದ್ದಾರೆ.

- ಚಿಕ್ಕಮಗಳೂರು, ಮೂಡಿಗೆರೆ, ಕಳಸ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು, ಮೆಸ್ಕಾಂ ಅಧಿಕಾರಿಗಳು ಹಾಗೂ ಮೀಟರ್ ರೀಡರ್‌ಗಳ ಕಾರ್ಯಾಗಾರ

--

- ಗೃಹ ಜ್ಯೋತಿ ಸಮರ್ಪಕ ಪರಿಷ್ಕರಣೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾರ್ಜ್ ಆದೇಶ

- ಮನೆಮನೆಗೆ ತೆರಳುವ ಮೀಟರ್ ರೀಡರ್‌ಗಳಿಗೆ ಅಗತ್ಯ ಮಾಹಿತಿ ಒದಗಿಸಿ

- ಮೆಸ್ಕಾಂ ಜಿಲ್ಲಾ, ತಾಲೂಕು ಗ್ಯಾರಂಟಿ ಸಮಿತಿಗಳ ನೆರವಿನೊಂದಿಗೆ ಪರಿಷ್ಕರಣೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಬಾರದೆಂದು ಗೃಹ ಜ್ಯೋತಿಯ ಪರಿಷ್ಕರಣೆ ಕಾರ್ಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಸೂಚಿಸಿದ್ದಾರೆ.

ನಗರದ ಮೆಸ್ಕಾಂ ಸಭಾಂಗಣದಲ್ಲಿ ಮಂಗಳವಾರ ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಕಳಸ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರು ಮತ್ತು ಮೆಸ್ಕಾಂ ಅಧಿಕಾರಿಗಳು ಹಾಗೂ ಮೀಟರ್ ರೀಡರ್‌ಗಳ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಗೃಹ ಜ್ಯೋತಿಯ ಪರಿಷ್ಕರಣೆ ಆರಂಭವಾಗಿದ್ದು ಈ ಯೋಜನೆಯಲ್ಲಿ ದುರುಪಯೋಗವನ್ನು ತಡೆಯುವ ಸಲುವಾಗಿ ಮೀಟರ್ ರೀಡರ್‌ಗಳ ಮೂಲಕ ಸ್ಥಳದಲ್ಲೇ ಪರಿಶೀಲನೆ ಮಾಡುವುದು ಏಕೈಕ ಮಾರ್ಗವಾಗಿದೆ ಎಂದರು.

ಗ್ರಾಹಕರು ಮತ್ತು ಫಲಾನುಭವಿಗಳು ಮೀಟರ್ ರೀಡರ್‌ಗಳಿಗೆ ಸಂಪೂರ್ಣ ಸಹಕಾರ ನೀಡಬೇಕು. ಪರಿಷ್ಕರಣೆ ಪ್ರಕ್ರಿಯೆಯನ್ನು ಸಮರ್ಪಕವಾಗಿ ಕೈಗೊಳ್ಳಲು ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಆದೇಶ ನೀಡಿರುವ ಹಿನ್ನೆಲೆಯಲ್ಲಿ ಮೆಸ್ಕಾಂ ಜಿಲ್ಲಾ, ತಾಲೂಕು ಗ್ಯಾರಂಟಿ ಸಮಿತಿಗಳ ನೆರವಿನೊಂದಿಗೆ ಪರಿಷ್ಕರಣೆ ಕಾರ್ಯ ನಡೆಸಲಾಗುತ್ತಿದೆ.

ಪರಿಷ್ಕರಣೆಗಾಗಿ ಮನೆಮನೆಗೆ ತೆರಳುವ ಮೀಟರ್ ರೀಡರ್‌ಗಳಿಗೆ ಅಗತ್ಯ ಮಾಹಿತಿ ಒದಗಿಸುವಂತೆ ಕರೆ ನೀಡಿದ ಅವರು ಗ್ಯಾರಂಟಿ ಸಮಿತಿಯ ಸದಸ್ಯರು ಇವರಿಗೆ ಅಗತ್ಯ ಸಹಕರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಮೆಸ್ಕಾಂನ ಸೂಪರಿಂಟೆಂಡೆಂಟ್ ಎಂಜಿನಿಯರ್ ಮಂಜುನಾಥ್ ಮಾತನಾಡಿ ಗೃಹಜ್ಯೋತಿ ಯೋಜನೆ ಫಲಾನುಭವಿಗಳು ವಿದ್ಯುತ್ ಸಂಪರ್ಕದ ಆರ್.ಆರ್. ಸಂಖ್ಯೆ, ಆಧಾರ್ ಕಾರ್ಡ್, ಪಡಿತರ ಕಾರ್ಡ್, ವೋಟರ್ ಐಡಿ, ಅಗತ್ಯವಿದ್ದವರು ಮನೆ ಬಾಡಿಗೆಯ ಕರಾರು ನಕಲುಗಳನ್ನು ಮೊದಲೇ ಸಂಗ್ರಹಿಸಿ ಪರಿಷ್ಕರಣಾದಾರರು ಮನೆಬಳಿ ಬಂದಾಗ ಸೂಕ್ತ ಮಾಹಿತಿಗಳನ್ನು ನೀಡಿದಲ್ಲಿ ಕೆಲವೇ ನಿಮಿಷದಲ್ಲಿ ಫಲಾನುಭವಿಗಳ ಪರಿಷ್ಕರಣೆ ನಡೆಯುತ್ತದೆ. ಇದಕ್ಕೆ ಜಿಲ್ಲೆಯ ಜನರು ಸಹಕರಿಸಬೇಕು ಎಂದರು.ಈ ಯೋಜನೆ ಕರ್ನಾಟಕ ರಾಜ್ಯದ ಮತದಾರರಿಗೆ ಸೀಮಿತವಾಗಿದ್ದು ಹೊರರಾಜ್ಯದ ಪ್ರಜೆಗಳಿಗೆ ಅನ್ವಯಿಸುವುದಿಲ್ಲ. ಜಿಲ್ಲೆಯಲ್ಲಿ 3.51 ಲಕ್ಷ ಫಲಾನುಭವಿಗಳಿದ್ದು, ಸಮರೋಪಾದಿಯಲ್ಲಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಸೋಮವಾರದವರೆಗೆ 49 ಸಾವಿರಕ್ಕೆ ಏರಿದೆ. ಜುಲೈ 31 ರವರೆಗೆ ಈ ಪರಿಷ್ಕರಣೆ ಕಾರ್ಯ ಮುಂದುವರಿಯಲಿದ್ದು ಫಲಾನುಭವಿಗಳು ಸಹಕರಿಸಲು ಮನವಿ ಮಾಡಿದರು.ಗೃಹಜ್ಯೋತಿ ಯೋಜನೆಯನ್ನು ಸರ್ಕಾರ ಗೃಹ ಬಳಕೆಗೆ ಸೀಮಿತಗೊಳಿಸಿದೆ. ಇತ್ತೀಚೆಗೆ ಕೆಲವರು ವಾಣಿಜ್ಯೋದ್ಯಮಕ್ಕೆ ದುರುಪಯೋಗಪಡಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಮೆಸ್ಕಾಂ ಸಿಬ್ಬಂದಿ ಸ್ಥಳದಲ್ಲೇ ಮಾಹಿತಿ ಕಲೆ ಹಾಕಿ ದಾಖಲಾತಿಗಳನ್ನು ಸಿದ್ಧಪಡಿಸುತ್ತಿದ್ದಾರೆ ಎಂದರು. ಕಾರ್ಯಾಗಾರದಲ್ಲಿ ಕಾರ್ಯಪಾಲಕ ಎಂಜಿನಿಯರ್‌ ಮಾರುತಿ, ತಾಲೂಕು ಗ್ಯಾರಂಟಿ ಸಮಿತಿಗಳ ಅಧ್ಯಕ್ಷರಾದ ಎಂ.ಮಲ್ಲೇಶ್, ಬಿ.ಎಸ್.ಜಯರಾಮ್ ಹಾಗೂ ಗಣೇಶ್ ಹೆಬ್ಬಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾವಗಡದಲ್ಲಿ ಕೋವಿಡ್ ಮುಂಜಾಗ್ರತೆಗೆ ಡಿಸಿ ಸೂಚನೆ
ಕುರಿ ಮಾಲೀಕನಿಗೆ ಪರಿಹಾರ ಮಂಜೂರಾತಿ ಆದೇಶ ಪತ್ರ