ಕೊಪ್ಪಳ:
ಜಿಲ್ಲೆಯ ಶೈಕ್ಷಣಿಕ ಸಂಸ್ಥೆ, ಸರ್ಕಾರಿ ಕಚೇರಿಗಳ ಆವರಣ, ಬಸ್ ನಿಲ್ದಾಣ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ಸಹಾಯವಾಣಿ 1098ರ ಕುರಿತು ಶಾಶ್ವತ ಬರಹ ಕಡ್ಡಾಯವಾಗಿ ಬರೆಯಿಸುವಂತೆ ಜಿಲ್ಲಾಧಿಕಾರಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಮಾತನಾಡಿ, ಮಿಷನ್ ವಾತ್ಸಲ್ಯ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಮಕ್ಕಳ ಸಹಾಯವಾಣಿ 1098 ಅನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಅದರ ಲೋಗೋ ಬದಲಾಯಿಸಲಾಗಿದ್ದು, ಈ ಕುರಿತು ಸಮುದಾಯದಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕಾಗಿದೆ ಎಂದರು.ರಾಜ್ಯ ಮಕ್ಕಳ ರಕ್ಷಣಾ ನೀತಿ 2016 ಪರಿಷ್ಕರಣೆ 2023ರನ್ವಯ ಹಾಗೂ ಹೈಕೋರ್ಟ್ ನಿರ್ದೇಶನದಂತೆ ಶೈಕ್ಷಣಿಕ ಸಂಸ್ಥೆ, ವಸತಿ ನಿಲಯ, ವಸತಿ ಸಹಿತ ಶೈಕ್ಷಣಿಕ ಸಂಸ್ಥೆ, ಸರ್ಕಾರಿ ಕಚೇರಿಗಳ ಆವರಣಗಳಲ್ಲಿ ಈ ಮಕ್ಕಳ ಸಹಾಯವಾಣಿ ಕುರಿತು ಕಡ್ಡಾಯವಾಗಿ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು. ಇದರಿಂದ ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಕ್ಕಳು ತಮ್ಮ ಸಮಸ್ಯೆ ಕುರಿತು ಅಥವಾ ಮಗುವಿನ ಸಂಕಷ್ಟಕರ ಪರಿಸ್ಥಿತಿಯ ಕುರಿತು ಸಾರ್ವಜನಿಕರು ಈ ಸಹಾಯವಾಣಿಗೆ ಮಾಹಿತಿ ನೀಡಬಹುದಾಗಿದೆ. ಮಾಹಿತಿ ಲಭ್ಯವಾದ 60 ನಿಮಿಷದಲ್ಲಿ ಅಂತಹ ಮಗುವನ್ನು ರಕ್ಷಿಸಿ ಮುಂದಿನ ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.