ಸ್ವಾಯತ್ತ ಸಂಸ್ಥೆಯಾಗಿ ಕಸಾಪ ಪುನಶ್ಚೇತನ: ಡಾ.ಸಿ.ಸೋಮಶೇಖರ

KannadaprabhaNewsNetwork |  
Published : Oct 26, 2026, 01:30 AM IST
ಚಿತ್ರ 25ಬಿಡಿಆರ್‌1ಡಾ. ಸಿ. ಸೋಮಶೇಖರ  | Kannada Prabha

ಸಾರಾಂಶ

ಸಮಸ್ತ ಕನ್ನಡಿಗರ ಅಸ್ಮಿತೆಯ ಸ್ವಾಭಿಮಾನದ ಸ್ವಾಯತ್ತ ಸಂಸ್ಥೆಯನ್ನಾಗಿ ಪುನಶ್ಚೇತನಗೊಳಿಸಬೇಕು ಎಂಬ ಹಂಬಲದೊಂದಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿಯಾಗಿ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೇನೆ ಎಂದು ನಿವೃತ್ತ ಐಎಎಸ್‌ ಅಧಿಕಾರಿ, ಹಿರಿಯ ಸಾಹಿತಿ ಡಾ. ಸಿ. ಸೋಮಶೇಖರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಸಮಸ್ತ ಕನ್ನಡಿಗರ ಅಸ್ಮಿತೆಯ ಸ್ವಾಭಿಮಾನದ ಸ್ವಾಯತ್ತ ಸಂಸ್ಥೆಯನ್ನಾಗಿ ಪುನಶ್ಚೇತನಗೊಳಿಸಬೇಕು ಎಂಬ ಹಂಬಲದೊಂದಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿಯಾಗಿ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೇನೆ ಎಂದು ನಿವೃತ್ತ ಐಎಎಸ್‌ ಅಧಿಕಾರಿ, ಹಿರಿಯ ಸಾಹಿತಿ ಡಾ. ಸಿ. ಸೋಮಶೇಖರ ತಿಳಿಸಿದರು.

ಅವರು ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಈಗಾಗಲೇ ನಾಡಿನಾದ್ಯಂತ ಪ್ರವಾಸ ಕೈಗೊಂಡು ಪರಿಷತ್ತಿನ ಅಜೀವ ಸದಸ್ಯರುಗಳನ್ನು, ಹಿರಿಯ ಸಾಹಿತಿಗಳನ್ನು ಹಾಗೂ ಕನ್ನಡ ಪರ ಹೋರಾಟಗಾರರನ್ನು ಸಂಪರ್ಕಿಸಿ ಅವರ ಸಹಕಾರ ಮತ್ತು ಮಾರ್ಗದರ್ಶನವನ್ನು ಕೋರಿದ್ದೇನೆ ಎಂದರು.

ಕಳೆದ ಮೂರು ವರ್ಷಗಳಿಂದ ದಾರ್ಶನಿಕ ಧಾರ್ಮಿಕ ಗುರುಗಳು, ಸಾಹಿತಿಗಳು, ಸಾಹಿತ್ಯಾಸಕ್ತರ ಒತ್ತಾಸೆಯ ಮೇರೆಗೆ ಪರಿಷತ್‌ಗೆ ಆಡಳಿತದ ಸ್ಪರ್ಶ ಕೊಡಬೇಕು, ಸಂಸ್ಥೆಗೆ ಆರ್ಥಿಕ ಬಲ ತುಂಬುವುದರೊಂದಿಗೆ ಅದನ್ನು ಮೇಲಕ್ಕೆತ್ತಬಹುದು ಎಂಬ ಆಶಯ ನನ್ನನ್ನು ಸ್ಪರ್ಧೆಗಿಳಿಯಲು ನಿರ್ಧರಿಸಿದ್ದೇನೆ ಎಂದರು.

ಸರ್ಕಾರಿ ಸೇವೆಯಿಂದ ನಿವೃತ್ತ, ಕನ್ನಡದ ಕೆಲಸದಿಂದ ನಿವೃತ್ತನಾಗಲ್ಲ: ಅಷ್ಟಕ್ಕೂ ಸಾಂಸ್ಕೃತಿಕ ಮೌಲ್ಯಗಳು ಜೀವನದ ಒಂದು ಭಾಗ, ಕನ್ನಡ ಭಾಷೆ, ಕನ್ನಡ ಮನ, ಮನೆಗಳ ಅಭಿವೃದ್ಧಿಯ ಸಂಕಲ್ಪದೊಂದಿಗೆ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆಯೇ ಹೊರತು ಒಬ್ಬ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಪರಿಷತ್‌ನ್ನು ತಂಗುದಾಣವಾಗಿಸಿಕೊಂಡು ಆಶ್ರಯ ಪಡೆಯಲು ಅಲ್ಲ ಎಂದು ಸ್ಪಷ್ಟಪಡಿಸಿ ಸರ್ಕಾರಿ ಸೇವೆಯಿಂದ ನಿವೃತ್ತನಾಗಿದ್ದರೂ ಕನ್ನಡದ ಕೆಲಸದಿಂದ ನಿವೃತ್ತನಾಗುವುದಿಲ್ಲ. ಪ್ರವೃತ್ತಿಗೆ ನಿವೃತ್ತಿ ಇಲ್ಲ ಎಂದರು.

ಐಎಎಸ್‌ ಅಧಿಕಾರಿಯಾಗಿ ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುವದರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕನಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ, ತುಮಕೂರು ಜಿಲ್ಲಾಧಿಕಾರಿಯಾಗಿ ರೆಡ್‌ಕ್ರಾಸ್‌ ಸಂಸ್ಥೆಯ ರಾಜ್ಯ ಉಪಾಧ್ಯಕ್ಷನಾಗಿ ಅಲ್ಲದೆ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ನಾಡಿನಾದ್ಯಂತ ಕನ್ನಡ ಸೇವೆ ಮಾಡುವ ಅವಕಾಶ ಪಡೆದಿದ್ದೇನೆ, ಇದೀಗ ಕಸಾಪ ಮೂಲಕ ಜೀವನದ ಮತ್ತಷ್ಟು ಕನ್ನಡ, ಕನ್ನಡಿಗರ ಸೇವೆಗೆ ಅವಕಾಶ ಕೋರುತ್ತಿದ್ದೇನೆ ಎಂದರು.

ಮುಂದಿನ ದಿನಗಳಲ್ಲಿ ಕಸಾಪದ ಮೂಲಕ ಯುವಕರು, ಮಹಿಳೆಯರು ಹಾಗೂ ಮಕ್ಕಳನ್ನು ಸಾಹಿತ್ಯ ಚಟುವಟಿಕೆಗಳತ್ತ ಆಕರ್ಷಿಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಕನ್ನಡ, ಕನ್ನಡಿಗ, ಕರ್ನಾಟಕ ಎಂಬ ಪರಿಕಲ್ಪನೆಯ ಕಾರ್ಯಕ್ರಮಗಳು ಅಲ್ಲದೆ ಪರಿಷತ್ತಿನ ವತಿಯಿಂದ ಪ್ರತಿ ತಿಂಗಳು ಸಾಹಿತ್ಯ ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಅಪ್ರಕಟಿತ ವಿದ್ವಾಂಸರ ಕೃತಿಗಳ ಪ್ರಕಟಣೆಗೆ ಆಧ್ಯತೆ ನೀಡಲಾಗುವುದು ಎಂದರು.

ಸಂಸ್ಕೃತಿ ಮತ್ತು ಪ್ರಗತಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಹೀಗಾಗಿ ಆಡಳಿತಕ್ಕೆ ಮಾನವೀಯ ಸ್ಪರ್ಶವನ್ನು ನೀಡಲು ಶ್ರಮಿಸುವುದರೊಂದಿಗೆ ಕನ್ನಡ ಸಾಹಿತ್ಯ ಪರಿಷತ್‌ನ ಈಗಿರುವ 4ಲಕ್ಷ ಸದಸ್ಯತ್ವ ಸಂಖ್ಯೆಯನ್ನು 1ಕೋಟಿಗೆ ಕೊಂಡೊಯ್ಯುವ ಪ್ರಯತ್ನವನ್ನು ನಾನು ಮಾಡುತ್ತೇನೆ ಎಂದರು.

ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಪರಿಷತ್‌ನಿಂದ ತರಬೇತಿ: ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಮಾಧ್ಯಮದಲ್ಲಿ ಎದುರಿಸುವ ಅಭ್ಯರ್ಥಿಗಳಿಗೆ ಪರಿಷತ್ತಿನ ಮೂಲಕ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಕನ್ನಡ ಹೋರಾಟಗಾರರು, ಸಾಹಿತಿಗಳು ಹಾಗೂ ಸರ್ಕಾರದ ನಡುವೆ ಸಂಪರ್ಕ ಸೇತುವೆಯಾಗಿ ಪರಿಷತ್ತು ಕಾರ್ಯನಿರ್ವಹಿಸುವಂತೆ ಮಾಡಲಾಗುವುದು ಎಂದು ಡಾ. ಸಿ. ಸೋಮಶೇಖರ್‌ ತಿಳಿಸಿದರು.

ಬೀದರ್‌ ಕನ್ನಡ ಭ‍ವನಕ್ಕೆ 2 ಕೋಟಿ ರು.ಗಳ ಅನುದಾನ: ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಬೀದರ್‌ನ ಕನ್ನಡ ಭವನಕ್ಕೆ 2 ಕೋಟಿ ರು.ಗಳನ್ನು ಹಾಗೂ ಕರ್ನಾಟಕ ಸಾಹಿತ್ಯ ಸಂಘಕ್ಕೆ 50 ಲಕ್ಷ ರು.ಗಳ ಅನುದಾನ ಅಲ್ಲದೆ 600ಕ್ಕೂ ಹೆಚ್ಚು ಗಡಿ ಸಂಘ ಸಂಸ್ಥೆಗಳ, ಶಾಲೆ ಮತ್ತು ಕಾಲೇಜುಗಳ ಕನ್ನಡ, ಸಾಹಿತ್ಯ ಮತ್ತು ಅಭಿವೃದ್ಧಿಯ ಕಾರ್ಯಕ್ಕೆ ಅನುದಾನ ಮಂಜೂರು ಮಾಡಿದ್ದೇನೆ. ಗಡಿಭಾಗದ ಸಾಧಕರನ್ನು ಗುರುತಿಸಲು ಗಡಿನಾಡ ಚೇತನ ಪ್ರಶಸ್ತಿ ಸ್ಥಾಪಿಸಲು ಕಾರಣೀಭೀತನಾಗಿದ್ದೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ವಿದ್ವಾಂಸ ಹುಲಿಕಲ್ ನಟರಾಜ ಅವರು ಮಾತನಾಡಿ, ಪರಿಷತ್‌ಗೆ ಡಾ. ಸಿ. ಸೋಮಶೇಖರ ಅವಿರೋಧ ಆಯ್ಕೆಯಾಗಲಿ, ಅಂಥ ವಾತಾವರಣ ನಿರ್ಮಾಣವಾಗುವ ಸಾಧ್ಯತೆಗಳೂ ಇವೆ. ಕನ್ನಡ ಸೇವೆಗೆ ಇವರು ಅತ್ಯುತ್ತಮ ಎಂದರು.

ಪ್ರೊ. ಜಗನ್ನಾಥ ಹೆಬ್ಬಾಳೆ ಅವರು ಡಾ. ಸಿ. ಸೋಮಶೇಖರ ಅವರ ಕಾರ್ಯಗಳನ್ನು ನೆನೆದು ಈ ಭಾಗದ ಸಾಹಿತ್ಯ, ಸಂಸ್ಕೃತಿ ಮತ್ತು ಗಡಿಯಲ್ಲಿನ ಚಟುವಟಿಕೆಗಳಿಗೆ ನೀಡಿದ ಕೊಡುಗೆಗಳನ್ನು ಕೊಂಡಾಡಿದರು.ಕಥೆಗಾರ್ತಿ ಪಾರ್ವತಿ ಸೋನಾರೆ ಅವರು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ ಈ ಕಲ್ಯಾಣ ಕರ್ನಾಟಕ ಭಾಗವನ್ನು ಕಡೆಗಣಿಸದಿರಲಿ. ಇಲ್ಲಿಯ ಸಾಹಿತಿ, ಕಲಾವಿದರಿಗೂ ಲಿಂಗ ಬೇಧವಿಲ್ಲದೆ ಆಧ್ಯತೆ ನೀಡಲಿ ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಗುರುನಾಥ ಕೊಳ್ಳೂರ್‌, ದಾನಿ ಬಾಬುರಾವ್‌, ವಿಜಯಲಕ್ಷ್ಮಿ, ಕೌಟಗೆ ಇದ್ದರು.

ಡಾ. ಸಿ ಸೋಮಶೇಖರ ವಿಜಯ ಎದ್ದು ಕಾಣುತ್ತಿದೆ: ಹಿರಿಯ ಲೇಖಕಿ ಮಲ್ಲಮ್ಮ ಪಾಟೀಲ್‌ ಅ‍ವರು ಕನ್ನಡ, ಕನ್ನಡಿಗರ ಅಭಿಮಾನದ ಅಸ್ಮಿತೆಯನ್ನು ಎತ್ತಿ ಹಿಡಿಯೋದ್ರಲ್ಲಿ ಡಾ. ಸಿ. ಸೋಮಶೇಖರ ಖಂಡಿತವಾಗಿ ಸಫಲರಾಗ್ತಾರೆ, ಅವರು ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರಾದರೆ, ಈಗಾಗಲೇ ಅವರಿಗೆ ದೊರಕುತ್ತಿರುವ ಬೆಂಬಲ, ಸಹಕಾರ ಗಮನಸಿದರೆ ಅವರ ವಿಜಯಯಾತ್ರೆ ಎದ್ದು ಕಾಣುತ್ತಿದೆ ಎಂದರೆ ಸುನಿತಾ ದಾಡಗೆ ಅವರು ಇದಕ್ಕೆ ಸಹಮತ ವ್ಯಕ್ತಪಡಿಸಿ, ನಾವೆಲ್ಲರೂ ಅವರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆಗಳ ಬಲವರ್ಧನೆ ನಮ್ಮೆಲ್ಲರ ಜವಾಬ್ದಾರಿ
ಕಾಡಾನೆ ಹಾವಳಿ ತಡೆಯದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ