ವಿಶ್ವವಿದ್ಯಾಲಯ ಮುಚ್ಚುವ ತೀರ್ಮಾನ ಹಿಂಪಡೆಯಿರಿ: ಬಸವರಾಜ ಶಿವಣ್ಣನವರ

KannadaprabhaNewsNetwork | Published : Feb 23, 2025 12:31 AM

ಸಾರಾಂಶ

ಎರಡು ವರ್ಷಗಳ ಹಿಂದೆ ಆರಂಭಿಸಿದ ಹಾವೇರಿ ವಿಶ್ವ ವಿದ್ಯಾಲಯ ಮುಚ್ಚುವ ತೀರ್ಮಾನ ಕೈಬಿಟ್ಟು, ವಿಶ್ವ ವಿದ್ಯಾಲಯವನ್ನು ಉಳಿಸಿ ಅಭಿವೃದ್ಧಿಪಡಿಸಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು.

ಹಾವೇರಿ: ಎರಡು ವರ್ಷಗಳ ಹಿಂದೆ ಆರಂಭಿಸಿದ ಹಾವೇರಿ ವಿಶ್ವ ವಿದ್ಯಾಲಯ ಮುಚ್ಚಲು ಪ್ರಸ್ತುತ ರಾಜ್ಯ ಸರ್ಕಾರದ ಸಚಿವ ಸಂಪುಟ ಉಪಸಮಿತಿ ತೀರ್ಮಾನಿಸಿದ್ದು, ಈ ತೀರ್ಮಾನ ಕೈಬಿಟ್ಟು ಯಥಾಸ್ಥಿತಿಯಲ್ಲಿ ವಿಶ್ವ ವಿದ್ಯಾಲಯವನ್ನು ಉಳಿಸಿ ಅಭಿವೃದ್ಧಿಪಡಿಸಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು.

ನಗರದ ಶಾಸಕರ ಗೃಹ ಕಚೇರಿಯಲ್ಲಿ ಶನಿವಾರ ಮನವಿ ಸಲ್ಲಿಸಿ, ಯಾವುದೇ ಅನುದಾನ ಬರದಿರುವ ಸಂದರ್ಭದಲ್ಲಿಯೂ ವಿಶ್ವ ವಿದ್ಯಾಲಯ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಅಗತ್ಯ ಅನುದಾನ ನೀಡಿ ಬಲಪಡಿಸುವ ಬದಲು ವಿಶ್ವವಿದ್ಯಾಲಯ ಮುಚ್ಚುವುದು ಸರಿಯಲ್ಲ. ಹಾಗಾಗಿ ರಾಜ್ಯ ಸರ್ಕಾರ ಈ ವಿಶ್ವವಿದ್ಯಾಲಯ ಮುಚ್ಚುವ ತೀರ್ಮಾನ ರದ್ದುಪಡಿಸಿ, ವಿವಿ ಅಭಿವೃದ್ಧಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಶಾಸಕ ಬಸವರಾಜ ಶಿವಣ್ಣನವರ ಮನವಿ ಸ್ವೀಕರಿಸಿ ಮಾತನಾಡಿ, ಹಾವೇರಿ ವಿವಿ ಉಳಿಸಲು ಸರ್ಕಾರದ ಮಟ್ಟದಲ್ಲಿ ಅಗತ್ಯ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.

ಆನಂತರ ಹಾವೇರಿ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರಿಗೆ ಹಾವೇರಿ ವಿಶ್ವವಿದ್ಯಾಲಯ ಉಳಿಸುವ ಭಾಗವಾಗಿ ನಗರಸಭೆಯಿಂದ ಠರಾವು ಪಾಸ್ ಮಾಡಲು ವಿನಂತಿಸಲಾಯಿತು. ಇದಕ್ಕೆ ಸೂಕ್ತವಾಗಿ ಸ್ಪಂದಿಸಿದ ಅವರು ಠರಾವ್ ಪಾಸು ಮಾಡಲಾಗುವುದು ಎಂದರಲ್ಲದೇ, ಹಾವೇರಿ ವಿಶ್ವ ವಿದ್ಯಾಲಯದ ಉಳಿವಿಗಾಗಿ ನಡೆಯುವ ಹೋರಾಟಕ್ಕೆ ಕೈಜೋಡಿಸುವುದಾಗಿ ಭರವಸೆ ನೀಡಿದರು.

ಹೋರಾಟ ಸಮಿತಿಯ ಸಂಚಾಲಕ ಹಾಗೂ ಸದಸ್ಯರಾದ ಬಸವರಾಜ ಪೂಜಾರ, ಸತೀಶ ಕುಲಕರ್ಣಿ, ಪರಿಮಳಾ ಜೈನ, ಸತೀಶ ಎಂ.ಬಿ., ನೇತ್ರಾ ಅಂಗಡಿ, ರೇಣುಕಾ ಗುಡಿಮನಿ, ಜುಬೇದಾ ನಾಯಕ್, ಬಸವರಾಜ ಎಸ್., ಉಡಚಪ್ಪ ಮಾಳಗಿ, ಪೃಥ್ವಿರಾಜ ಬೆಟಗೇರಿ, ಎಂ. ಆಂಜನೇಯ, ರಾಜೇಂದ್ರ ಹೆಗಡೆ, ಮಾಲತೇಶ ಕರ್ಜಗಿ ಇನ್ನಿತರರು ಉಪಸ್ಥಿತರಿದ್ದರು.

Share this article