ಬೆಂಗಳೂರು : ‘ನಮ್ಮಲ್ಲಿ ಸಾವಿರಾರು ಉದ್ಯಮಿಗಳು ಕೆಪೆಕ್‌ನಿಂದ ಸಹಾಯ ಪಡೆದು ಜನರ ಆರೋಗ್ಯ ಹೆಚ್ಚಿಸುವ ಶ್ರೇಷ್ಠ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಬೆಳೆಯಿಂದ ಬ್ರ್ಯಾಂಡ್ ಕಟ್ಟಿದ ಈ ಉದ್ಯಮಿಗಳು ಸದ್ದಿಲ್ಲದೆ ಬ್ರೌನ್ ರೆವೆಲ್ಯೂಷನ್ ಮಾಡುತ್ತಿದ್ದಾರೆ’ ಎಂದು ಕರ್ನಾಟಕ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ(ಕೆಪೆಕ್)ದ ವ್ಯವಸ್ಥಾಪಕ ನಿರ್ದೇಶಕರಾದ ಸಿ.ಎನ್.ಶಿವಪ್ರಕಾಶ್ ಹೇಳಿದ್ದಾರೆ.
‘ಕನ್ನಡಪ್ರಭ’ ಪ್ರಕಟಿಸಿರುವ ಕೆಪೆಕ್ ಉದ್ಯಮಿಗಳ ಸಕ್ಸೆಸ್ ಸ್ಟೋರಿ ಇರುವ ‘ಬೆಳೆಯಿಂದ ಬ್ರಾಂಡ್’ ಕೃತಿಯ ಯಶಸ್ಸನ್ನು ಸಂಭ್ರಮಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ಯಮಿಗಳ ಸಾಹಸ ಮೆಚ್ಚಿ ಮಾತನಾಡಿದರು.
‘ನಿಜವಾಗಿಯೂ ಅಗತ್ಯ ಇರುವವರಿಗೆ ಆರ್ಥಿಕ ನೆರವು ಒದಗಿಸುವುದು ಕೆಪೆಕ್ ಉದ್ದೇಶ. ನಮ್ಮಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಯಶಸ್ವಿ ಉದ್ಯಮಿಗಳಿದ್ದಾರೆ. 200ಕ್ಕೂ ಹೆಚ್ಚು ಕೆಟಗರಿಯ ಉತ್ಪನ್ನಗಳಿವೆ. ಅವೆಲ್ಲವೂ ನಮ್ಮ ಆರೋಗ್ಯ ಹೆಚ್ಚಿಸುವಂಥ ಬ್ರೌನ್ ಉತ್ಪನ್ನಗಳು. ಈ ಉತ್ಪನ್ನಗಳಿಂದ ಸಾಕಷ್ಟು ಮಂದಿಯ ಆಯಸ್ಸು ಹೆಚ್ಚಾಗಿದೆ. ಅವರ ಕುರಿತು ಕನ್ನಡಪ್ರಭ ಪ್ರಕಟಿಸಿದ ಸರಣಿ ಲೇಖನಗಳಿಂದ, ‘ಬೆಳೆಯಿಂದ ಬ್ರಾಂಡ್’ ಪುಸ್ತಕದಿಂದ ಉದ್ಯಮಿಗಳ ಯಶೋಗಾಥೆ ಲಕ್ಷಾಂತರ ಮಂದಿಯನ್ನು ತಲುಪುವಂತಾಗಿದೆ’ ಎಂದರು.
ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ‘ಕೆಪೆಕ್ ಉದ್ಯಮಿಗಳ ಕತೆಗಳು ಆಶಾಕಿರಣದ ರೀತಿ ಭರವಸೆ ಮೂಡಿಸುವಂತಿವೆ. ಒಬ್ಬೊಬ್ಬರ ಕತೆಗಳು ಸಿನಿಮಾ ಆಗುವಂತಿವೆ. ಕೆಪೆಕ್ ಲೇಖನ ಸರಣಿ ಆರಂಭಿಸಿದಾಗ ಭಾರೀ ಪ್ರತಿಕ್ರಿಯೆ ದೊರೆಯುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಮೂರ್ನಾಲ್ಕು ಲೇಖನ ಪ್ರಕಟ ಆಗುತ್ತಿದ್ದಂತೆ ಓದುಗರು ಬೆರಗಾಗಿಸುವಂತಹ ಪ್ರತಿಕ್ರಿಯೆ ನೀಡಿದರು. ಆಹ್ಲಾದ ಹುಟ್ಟಿಸುವ ಅವರ ಕತೆಗಳಿಗೆ ‘ಕನ್ನಡಪ್ರಭ’ ವೇದಿಕೆಯಾಗಿದ್ದು ನಮಗೆ ಹೆಮ್ಮೆ ತಂದಿದೆ’ ಎಂದು ಹೇಳಿದರು.
ಕೆಪೆಕ್‌ನಿಂದ ನೆರವು ಪಡೆದು ಉದ್ಯಮಿಗಳಾಗಿರುವ ಫಲಾನುಭವಿಗಳು ಕೆಪೆಕ್ ಮತ್ತು ‘ಕನ್ನಡಪ್ರಭ’ದಿಂದ ದೊರೆತ ಪ್ರೋತ್ಸಾಹಕ್ಕೆ ಧನ್ಯವಾದ ಸಲ್ಲಿಸಿದರು. ‘ಕೆಪೆಕ್ ನಮ್ಮನ್ನು ತಾಯಿ, ತಂದೆಯಂತೆ ಪೊರೆಯುತ್ತಿದೆ. ನಮಗೆ ಸಾಲ ಕೊಟ್ಟು ಆ ಸಾಲ ತೀರಿಸುವ ದಾರಿಯನ್ನೂ ಹೇಳಿಕೊಡುತ್ತಿದೆ. ಇದೀಗ ‘ಕನ್ನಡಪ್ರಭ’ ನಮ್ಮ ದಾರಿಗೆ ಬೆಳಕು ಬೀರಿದ್ದು, ಲೇಖನ ಸರಣಿ ಪ್ರಕಟವಾದ ಮೇಲೆ ನಮ್ಮ ವಹಿವಾಟು ಹೆಚ್ಚಾಗಿದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಪೆಕ್ ಜಂಟಿ ನಿರ್ದೇಶಕರಾದ ಶಿವಕುಮಾರ್, ಸಹಾಯಕ ನಿರ್ದೇಶಕರಾದ ಚಂದ್ರಕುಮಾರ್, ಕನ್ನಡಪ್ರಭ ಪ್ರಧಾನ ಪುರವಣಿ ಸಂಪಾದಕ ಗಿರೀಶ್ ಎಚ್.ರಾವ್. (ಜೋಗಿ), ಕಾರ್ಯನಿರ್ವಾಹಕ ಸಂಪಾದಕ (ವಿಶೇಷ ಯೋಜನೆಗಳು) ಎಚ್.ಎಸ್.ಅವಿನಾಶ್, ಕನ್ನಡಪ್ರಭ ಮಾರುಕಟ್ಟೆ ವಿಭಾಗದ ಸಹಾಯಕ ಉಪಾಧ್ಯಕ್ಷರಾದ ಬಿ.ಸಿ. ರಾಘವೇಂದ್ರ ಇದ್ದರು.