ಕೊಪ್ಪಳ:
ಕೊಪ್ಪಳ ತಾಲೂಕಿನ ಕೆಲವೆಡೆ, ಕಾರಟಗಿ, ಕುಕನೂರು ಹಾಗೂ ಗಂಗಾವತಿ ತಾಲೂಕಿನಲ್ಲಿ ಆಲಿಕಲ್ಲಿನೊಂದಿಗೆ ಮಳೆ ಸುರಿದಿದೆ. ಕುಕನೂರು ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಅನುದಾನಿತ ನೃಪತುಂಗ ಪ್ರೌಢಶಾಲೆಯ ಕೊಠಡಿಯ ಮುಂದಿನ ಚಾವಣಿಯ ತಗಡು ಹಾರಿವೆ. ಭಾನಾಪುರ, ನಿಟ್ಟಾಲಿ, ವೀರಾಪುರ, ಆಡೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗಾಳಿಗೆ ಮರಗಳು ನೆಲಕ್ಕುರುಳಿವೆ. ಮಾರುಕಟ್ಟೆಗೆ ಬರಬೇಕಾಗಿದ್ದ ಮಾವು ನೆಲಕ್ಕಚ್ಚಿದೆ.
ಕೊಪ್ಪಳ ನಗರದಲ್ಲಿ ಒಂದೂವರೆ ಗಂಟೆಗೂ ಅಧಿಕ ಕಾಲ ಮಳೆ ಸುರಿದಿದೆ. ಇದರಿಂದ ಚರಂಡಿಗಳು ತುಂಬಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ ವರದಿಯಾಗಿದೆ. ಭೋವಿ ಓಣಿಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಜನರು ಪರದಾಡಿದರು. ಮಳೆ ನಿಂತ ಬಳಿಕ ಮನೆಯೊಳಗೆ ತುಂಬಿದ ನೀರನ್ನು ಹೊರಹಾಕಲು ಜನರು ಹರಸಾಹಸ ಪಟ್ಟರು. ಅದೇ ರೀತಿ ಕಾರಟಗಿ ಹಾಗೂ ಸುತ್ತಮುತ್ತಲ ಗ್ರಾಮಗಳಾದ ಹೊನ್ನಾಪುರ, ಗುಂಡೂರು ಸೇರಿದಂತೆ ಹಲವೆಡೆ ಆಲಿಕಲ್ಲು ಸಹಿತ ಎಡಬಿಡದೆ ಮಳೆ ಸುರಿದ ಪರಿಣಾಮ ಅಪಾರ ಪ್ರಮಾಣದ ಭತ್ತದ ಬೆಳೆ ನೆಲಕ್ಕೆ ಉರುಳಿ ಬಿದ್ದಿದೆ. ಜನರು ಆಲಿಕಲ್ಲುಗಳನ್ನು ಬುಟ್ಟಿಯಲ್ಲಿ ಸಂಗ್ರಹಿಸಿ ಸಂಭ್ರಮಿಸಿದ್ದಾರೆ.ನೂರಾರು ಎಕರೆ ಭತ್ತ ಹಾನಿ:ಗುರುವಾರ ಏಕಾಏಕಿ ಸುರಿದ ಆಲಿಕಲ್ಲು ಮಳೆಯಿಂದ ಕಾರಟಗಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ಭತ್ತದ ಬೆಳೆ ನೆಲಕ್ಕೆ ಬಿದ್ದಿದೆ. ಗದ್ದೆಯಲ್ಲಿ ನೀರು ನಿಂತುಕೊಂಡಿದ್ದು ಕಟಾವಿಗೂ ಬರದಂತೆ ಆಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಕಟಾವು ಮಾಡಿ ರಾಶಿ ಹಾಕಿದ್ದ, ಕಣದಲ್ಲಿ ಒಣಗಲು ಹಾಕಿದ್ದ ಭತ್ತ ನೀರು ಪಾಲಾಗಿದೆ. ರಸ್ತೆಯಲ್ಲಿ ಹಾಕಿದ ಭತ್ತ ತೋಯ್ದು ಲಕ್ಷಾಂತರ ರುಪಾಯಿ ಹಾನಿಯಾಗಿದೆ.ಸಿಡಿಲಿಗೆ ಎತ್ತು, ಹಸು ಬಲಿ