- ಯಾದಗಿರಿ ಜಿಲ್ಲೆಯಲ್ಲಿ ಅತೀವೃಷ್ಟಿ, ಅನಾವೃಷ್ಟಿಗೆ ಸಂಕಷ್ಟದಲ್ಲಿ ರೈತರು
- ಸುರಪುರ, ಹುಣಸಗಿ ತಾಲೂಕಿನಲ್ಲಿ ಭಾರಿ ಮಳೆ, ಗಾಳಿಗೆ ಮಕಾಡೆ ಮಲಗಿದ ಭತ್ತದ ಬೆಳೆ- ಯಾದಗಿರಿ ವರ್ಕನಳ್ಳಿ ಗ್ರಾಮದಲ್ಲಿ ನೀರಿನ ಕೊರತೆಯಿಂದ ಹಾಳಾದ ಲಕ್ಷಾಂತರ ರು.ಗಳ ಕಲ್ಲಂಡಗಿ ಬೆಳೆ
ಕನ್ನಡಪ್ರಭ ವಾರ್ತೆ ಯಾದಗಿರಿಒಂದೆಡೆ ಮಳೆ ನೀರಿನ ಕೊರತೆಯಿಂದ ಬೆಳೆ ಹಾಳಾಗಿದ್ದರಿಂದ ಅನ್ನದಾತ ಆತಂಕದಲ್ಲಿದ್ದರೆ, ಇನ್ನೊಂದೆಡೆ ಇನ್ನೇನು ವಾರೊಪ್ಪತ್ತಿನಲ್ಲಿ ಕೈಗೆ ಬರಬೇಕಿದ್ದ ಬೆಳೆ ಬಿರಗಾಳಿ- ಮಳೆಗೆ ನೆಲಕ್ಕಚ್ಚಿ ರೈತಾಪಿ ವರ್ಗ ಆಘಾತಗೊಂಡಿದೆ. ಕಳೆದೆರಡು ದಿನಗಳಲ್ಲಿ ಸಂಭವಿಸಿದ ಈ ಎರಡೂ ಪ್ರಕರಣಗಳು ರೈತರ ಬದುಕಿನ ಕಣ್ಣಾಮುಚ್ಚಾಲೆಯಾಟಕ್ಕೆ ಸಾಕ್ಷಿಯಂತಿವೆ.
ಕಾಳು ಕಟ್ಟುವ ಹಂತದಲ್ಲಿ ನೀರು ಸಿಗದಿದ್ದರೆ ಬೆಳೆ ಹಾಳಾಗುವ ಭೀತಿಯಿಂದ ಹತ್ತು-ಹದಿನೈದು ದಿನಗಳ ಕಾಲ ಸರ್ಕಾರದ ವಿರುದ್ಧ ಪ್ರತಿಭಟಿಸಿ, ನಾರಾಯಣಪುರದ ಜಲಾಶದಯದಿಂದ ಕಾಲುವೆಗಳ ನೀರು ಹರಿಸುವಲ್ಲಿ ಯಶಸ್ವಿ ಕಂಡಾಗ, ಇನ್ನೇನು 10-15 ದಿನಗಳಲ್ಲಿ ಬೆಳೆ ಕೈಗೆ ಬರಬಹುದು ಎಂಬ ಸಂತಸದಲ್ಲಿದ್ದ ರೈತರಿಗೆ ಕಳೆದೆರಡು ದಿನಗಳ ಹಿಂದೆ ಸುರಿದ ಬಿರುಗಾಳಿ ಮಳೆಗೆ ಭಾರಿ ಆಘಾತ ಮೂಡಿಸಿದೆ. ಕೈಗೆ ಬರಬೇಕಿದ್ದ ಭತ್ತದ ಬೆಳೆ ಹಾಸಿಗೆ ಹಾಸಿದಂತೆ ಅಂಗಾತ ಮಲಗಿ, ನೆಲಕಚ್ಚಿದೆ.ಒಂದು ಅಂದಾಜಿನಂತೆ, ಈ ಎರಡೂ ತಾಲೂಕುಗಳಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆ ನಾಶ ಆಗಿದೆ ಎನ್ನಲಾಗಿದೆ. ಬೆಳೆ ಕಳೆದುಕೊಂಡ ಅನ್ನದಾತರು ಕಂಗಲಾಗಿದ್ದಾರೆ. ಬಿರುಗಾಳಿ ಸಹಿತ ಜೋರಾಗಿ ಸುರಿದ ಅಕಾಲಿಕ ಮಳೆಗೆ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ.
ನೂರಾರು ಎಕರೆ ಭತ್ತದ ಬೆಳೆ ನೆಲಕಚ್ಚಿ ಹೋಗಿದೆ. ಯಾವ ರೀತಿ ನೆಲಕಚ್ಚಿದೆ ಅಂದ್ರೆ ಇಡೀ ಭತ್ತದ ಗದ್ದೆಗಳು ಹಾಸಿಗೆಯಂತಾಗಿವೆ. "ಇನ್ನೇನು ಒಂದು ವಾರ ಕಳೆದಿದ್ದರೆ ಭತ್ತ ಕಟಾವು ಆಗಿ ಹೋಗುತ್ತಿತ್ತು. ಆದರೆ, ಶನಿವಾರ ಸುರಿದ ಮಳೆಯಿಂದಾಗಿ ಎಲ್ಲವೂ ಹಾಳಾಗಿ ಹೋಗಿದೆ. ತೆನೆ ಕಟ್ಟಿ ಒಣಗಿ ನಿಂತಿದ್ದ ಬೆಳೆ ಮಳೆ -ಗಾಳಿಗೆ ಸಂಪೂರ್ಣ ನೆಲಕಚ್ಚಿದೆ. ಮಾರಾಟವಾಗಿದ್ದರೆ ಲಕ್ಷಾಂತರ ರುಪಾಯಿಗಳು ಕೈಗೆ ಸಿಗುತ್ತಿತ್ತು.. " ಎಂದು ನೋವು ತೋಡಿಕೊಂಡ ಹುಣಸಗಿ ತಾಲೂಕಿನ ಕಾಮನಟಗಿ ಗ್ರಾಮದಲ್ಲಿ ಲೀಸ್ ಪಡೆದಿರುವ ವೆಂಕಟ್ ಕೃಷ್ಣ, ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗಾಗಿದೆ, ತಮಗಾದ ಪರಿಸ್ಥಿತಿ ಬಹುತೇಕ ಈ ಭಾಗದ ರೈತರಿಗೂ ಆಗಿದೆ ಎಂದರು.ನಾಲ್ಕು ತಿಂಗಳ ಹಿಂದೆ ಭತ್ತವನ್ನ ನಾಟಿ ಮಾಡಿದ ರೈತರು, ಕೊನೆ ಹಂತದಲ್ಲಿ ಸರ್ಕಾರದ ವಿರುದ್ಧ ಎರಡು ವಾರಗಳ ಕಾಲ ಹೋರಾಟ ಮಾಡಿದ ಬಳಿಕ ನಾರಾಯಣಪುರ ಡ್ಯಾಂನಿಂದ ನೀರು ಬಿಟ್ಟುಕೊಂಡು ಬೆಳೆಯನ್ನ ಬೆಳೆದಿದ್ದರು. ಆದರೆ, ಈಗ ನೋಡಿದರೆ ಬೆಳೆ ಅಕಾಲಿಕ ಮಳೆಗೆ ಹಾಳಾಗಿ ಹೋಗಿದೆ, ನಾಲ್ಕು ತಿಂಗಳ ಪರಿಶ್ರಮ ವ್ಯರ್ಥವಾಂದತಾಗಿದೆ. ಕೇವಲ ಹುಣಸಗಿ ತಾಲೂಕು ಅಷ್ಟೇ ಅಲ್ದೆ ಜಿಲ್ಲೆಯ ನಾನಾ ತಾಲೂಕುಗಳಲ್ಲಿ ಇದೆ ರೀತಿ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರ ಸಂಕಷ್ಟದಲ್ಲಿರುವ ರೈತರ ಕೈ ಹಿಡಿದು ಬೆಳೆ ನಷ್ಟದ ಪರಿಹಾರ ನೀಡಬೇಕೆಂದು ರೈತ ಮುಖಂಡ ಶಂಕರ್ ನಾಯ್ಕ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
===ಬಾಕ್ಸ್===ನೀರಿಲ್ಲದೆ ಹಾಳಾದ ಕಲ್ಲಂಗಡಿ!
ಕನ್ನಡಪ್ರಭ ವಾರ್ತೆ ಯಾದಗಿರಿಒಂದೆಡೆ, ಅಕಾಲಿಕ ಮಳೆಗೆ ಜಿಲ್ಲೆಯ ವಿವಿಧೆಡೆ ಭತ್ತದ ಬೆಳೆ ಹಾಳಾಗಿದ್ದರೆ, ರಣಬಿಸಿಲಿನ ತಾಪಕ್ಕೆ ಜಲಮೂಲ ಬತ್ತಿದ್ದರಿಂದ, ನೀರು ಸಿಗದೆ, ಲಕ್ಷಾಂತರ ರು.ಗಳ ಬೆಲೆಯ ಕಲ್ಲಂಗಡಿ ಬೆಳೆ ಹಾಳಾದ ಘಟನೆ ಕಂಡು ಬಂದಿದೆ. ಯಾದಗಿರಿ ತಾಲೂಕಿನ ವರ್ಕನಳ್ಳಿ ಗ್ರಾಮದಲ್ಲಿ ಕಲ್ಲಂಗಡಿ ಬೆಳೆ ಹಾನಿಯಾಗಿದೆ. ರೈತ ಭೀಮರಾಯ ಎನ್ನುವವರು ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಲ್ಲಂಗಡಿ ಬೆಳೆ ಸಂಪೂರ್ಣ ಹಾನಿಯಾಗಿದೆ. ನೀರಿಲ್ಲದೇ ಜಮೀನಿನಲ್ಲೇ ಒಣಗಿ ಹೋಗ್ತಿರುವ ಕಲ್ಲಂಗಡಿ ಬೆಳೆಯಿಂದಾಗಿ ಅವರು ಆತಂಕಗೊಂಡಿದ್ದಾರೆ. ಬೇಸಿಗೆಯಲ್ಲಿ ಕಲ್ಲಂಗಡಿ ಬೆಳೆ ಆರ್ಥಿಕವಾಗಿ ಕೈಹಿಡಿಯಬಹುದು ಎಂಬ ಲೆಕ್ಕಾಚಾರದಲ್ಲಿದ್ದ ರೈತ ಭೀಮರಾಯ-ಭಾಗ್ಯವಂತಿ ದಂಪತಿ ಇದೀಗ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹಾಗೆಯೇ, ಬೆಳೆದ ಕಲ್ಲಂಗಡಿಗೆ ಯೋಗ್ಯ ದರವೂ ಸಿಗುತ್ತಿಲ್ಲವೆನ್ನುವ ನೋವಿದೆ. ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ಪರದಾಡುತ್ತಿದ್ದಾರೆ.
----13ವೈಡಿಆರ್6 : ಅಕಾಲಿಕ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ.
13ವೈಡಿಆರ್7 : ಅಕಾಲಿಕ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ.13ವೈಡಿಆರ್8 : ನೀರಿನ ಕೊರತೆಯಿಂದ ಹಾಳಾದ ವರ್ಕನಳ್ಳಿಯ ಕಲ್ಲಂಗಡಿ ಬೆಳೆದ ರೈತರ ಆತಂಕ.