ಈ ಬಾರಿ ಮುಂಗಾರು ಮಳೆ ಪ್ರಾರಂಭವಾಗುವುದು ವಿಳಂಬ
ಕನ್ನಡಪ್ರಭ ವಾರ್ತೆ ಮುಂಡಗೋಡ
ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಕೃಷಿ ಚಟುವಟಿಕೆ ಚುರುಕುಗೊಂಡಿರುವುದು ಒಂದು ಕಡೆಯಾದರೆ, ಈ ಬಾರಿ ಮುಂಗಾರು ಮಳೆ ಪ್ರಾರಂಭವಾಗುವುದು ವಿಳಂಬವಾಗಿದ್ದರಿಂದ ಭತ್ತ ಹಾಗೂ ಗೋವಿನ ಜೋಳ ಬೆಳೆಗಳಿಗೆ ಬೆಂಕಿ ರೋಗ ಕೀಟ ಬಾಧೆ ಆವರಿಸಿರುವುದರಿಂದ ಬೆಳೆ ಕುಂಠಿತವಾಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.ಪ್ರಸಕ್ತ ಸಾಲಿನಲ್ಲಿ ಏಪ್ರಿಲ್-ಮೇನಲ್ಲಿ ಅಡ್ಡ ಮಳೆಯಾಗಿ ಜೂನ್ ತಿಂಗಳಲ್ಲಿ ವಿರಾಮ ನೀಡಿದ್ದರಿಂದ ಮುಂಗಾರು ಮಳೆ ಹಿಡಿದುಕೊಂಡರೆ ಬಿತ್ತನೆಗೆ ಹಿನ್ನಡೆಯಾಗುತ್ತದೆ ಎಂದು ತರಾತುರಿಯಲ್ಲಿ ಭೂಮಿಯನ್ನು ಹದಗೊಳಿಸಿಕೊಂಡು ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಬಿತ್ತನೆ ಬೀಜ ಖರೀದಿಸಿ ಬಿತ್ತನೆ ಕಾರ್ಯ ಮುಗಿಸಿಕೊಂಡಿದ್ದಾರೆ. ಆದರೆ ಸಕಾಲಕ್ಕೆ ಮಳೆ ಬಾರದೆ ವಿಳಂಬ ಮಾಡಿದ್ದರಿಂದ ಭತ್ತ ಮತ್ತು ಗೋವಿನ ಜೋಳ ಸಸಿಗಳ ಬೆಳವಣಿಗೆಯೇ ಆಗಿಲ್ಲ. ಈ ವೇಳೆಗಾಗಲೇ ಸಾಕಷ್ಟು ದೊಡ್ಡದಾಗಿ ಬೆಳೆಯಬೇಕಿದ್ದ ಭತ್ತದ ಸಸಿಗಳು ನೆಲದಿಂದ ಮೇಲೆಯೇ ಎದ್ದಿಲ್ಲ.
ಭತ್ತ ಪ್ರಧಾನ ಪ್ರದೇಶವಾಗಿರುವ ತಾಲೂಕಿನಲ್ಲಿ ಹಿಂದೆಲ್ಲ ಶೇ. ೮೦ರಷ್ಟು ಭೂಮಿಯಲ್ಲಿ ಭತ್ತವನ್ನೇ ಬೆಳೆಯಲಾಗುತ್ತಿತ್ತು, ಆದರೆ ಕೆಲ ವರ್ಷಗಳ ಹಿಂದೆ ಮಳೆಯ ಪ್ರಮಾಣ ಕಡಿಮೆಯಾಗಿ ಅನಾವೃಷ್ಟಿ ಎದುರಾಗಿದ್ದರಿಂದ ನಿರಂತರ ಭತ್ತದ ಬೆಳೆ ಹಾನಿಗೊಳಗಾದ ಪರಿಣಾಮ ಕಳೆದ ೫-೬ ವರ್ಷಗಳಿಂದ ಗೋವಿನ ಜೋಳ ಬೆಳೆ ಬಿತ್ತನೆ ಕೂಡ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿತ್ತು. ಆದರೆ ಕಳೆದ ವರ್ಷ ಹೆಚ್ಚಿನ ಮಳೆಯಾಗಿ ಗೋವಿನ ಜೋಳ ಬೆಳೆ ಕೈಕೊಟ್ಟಿದ್ದರಿಂದ ಈ ಬಾರಿ ಮತ್ತೆ ಮೊದಲಿನಂತೆಯೇ ಭತ್ತ ಬಿತ್ತನೆ ಹೆಚ್ಚಿನ ಪ್ರಮಾಣದಲ್ಲಿ ಮಾಡಲಾಗಿದೆ. ಆದರೆ ಮಳೆ ವಿಳಂಬವಾಗಿದ್ದರಿಂದ ಭತ್ತದ ಬೆಳವಣಿಗೆಗೂ ಈ ಬಾರಿ ಹೊಡೆತ ಬಿದ್ದಂತಾಗಿದೆ. ಯಾವುದೇ ನೀರಾವರಿ ಯೋಜನೆ ಇಲ್ಲದಿರುವುದರಿಂದ ಇಲ್ಲಿಯ ಬಹುತೇಕ ರೈತರು ಮಳೆಯಾಶ್ರಯಿಸಿಯೇ ವ್ಯವಸಾಯ ಮಾಡುತ್ತಾರೆ.
ಮಳೆಯ ಪ್ರಮಾಣ ಕಡಿಮೆ: ಪ್ರಸಕ್ತ ಸಾಲಿನಲ್ಲಿ ಜ. ೧ರಿಂದ ಜು.೮ರವರೆಗೆ ೪೫೮೭ ಮಿಮೀ ಮಳೆಯಾಗಿದ್ದು, ವಾಡಿಕೆಯಂತೆ ೫೨೮.೮ ಮಿಮೀ ಮಳೆಯಾಗಬೇಕಿತ್ತು. ಆದರೆ ವಾಡಿಕೆಗಿಂತ ೭೦ ಮಿಮೀ ಮಳೆ ಕಡಿಮೆಯಾದಂತಾಗಿದೆ. ಅಲ್ಲದೇ ಕಳೆದ ವವರ್ಷ ಈ ವೇಳೆಗೆ ೬೩೯.೧ ಮಿಮೀ ಮಳೆಯಾಗಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿತ್ತು.
ಕಳೆದ ಬಾರಿ ಹೆಚ್ಚು ಮಳೆಯಾಗಿದ್ದರಿಂದ ಅದೇ ನಿರೀಕ್ಷೆಯಿಂದ ಮೊದಲಿನಂತೆಯೇ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬಿತ್ತನೆ ಮಾಡಲಾಗಿದೆ. ಅಗತ್ಯ ಸಂದರ್ಭ ಮಳೆ ಕೈಕೊಟ್ಟಿದ್ದರಿಂದ ಬೆಳೆಯಲ್ಲಿ ಬೆಂಕಿ ರೋಗ ಕಾಣಿಸಿಕೊಂಡಿದ್ದು, ಬೆಳೆಯಲ್ಲಿ ಕುಂಠಿತವಾಗುವ ವಾತಾವರಣವಿದೆ. ಕೃಷಿ ಇಲಾಖೆ ಹಾಗೂ ಸಂಬಂಧಿಸಿದ ಇಲಖೆ ಈ ಬಗ್ಗೆ ಗಮನಹರಿಸಿ ರೈತರ ನೆರವಿಗೆ ಬಂದು ಸೂಕ್ತ ಸಲಹೆ ಸೂಚನೆ ನೀಡಬೇಕಿದೆ ಎನ್ನುತ್ತಾರೆ ರೈತ ಸಂಗಮೇಶ ಕೊಳ್ಳಾನವರ.