ಅಕ್ಕಿ ಅಕ್ರಮ, ಮಣಿಕಂಠ ಪತ್ರದ ತನಿಖೆಯಾಗಲಿ : ಮುತಾಲಿಕ್‌

KannadaprabhaNewsNetwork | Published : Jul 30, 2024 12:38 AM

ಸಾರಾಂಶ

ಅಕ್ಕಿ ಅಕ್ರಮದ ಕುರಿತು ಪೊಲೀಸ್‌ ವಶದಲ್ಲಿರುವ ಮಣಿಕಂಠ ರಾಠೋಡ್‌ ಬರೆದಿರುವ ಪತ್ರ ತನಿಖೆಯಾಗಬೇಕು. ಪ್ರಕರಣದ ಸೂತ್ರಧಾರಿ ಹೆಸರು ಪತ್ರದಲ್ಲಿದ್ದು, ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ, ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಅಕ್ಕಿ ಅಕ್ರಮದ ಕುರಿತು ಪೊಲೀಸ್‌ ವಶದಲ್ಲಿರುವ ಮಣಿಕಂಠ ರಾಠೋಡ್‌ ಬರೆದಿರುವ ಪತ್ರ ತನಿಖೆಯಾಗಬೇಕು. ಪ್ರಕರಣದ ಸೂತ್ರಧಾರಿ ಹೆಸರು ಪತ್ರದಲ್ಲಿದ್ದು, ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ, ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಆಗ್ರಹಿಸಿದರು. ಕಳೆದ ವರ್ಷ ನವೆಂಬರ್ ನಲ್ಲಿ ಶಹಾಪುರದಲ್ಲಿ ನಡೆದಿದ್ದ 6077 ಕ್ವಿಂಟಲ್ ಪಡಿತರ ಅಕ್ಕಿ ನಾಪತ್ತೆ ಪ್ರಕರಣದ ಆರೋಪ ಹೊತ್ತು, ಪೊಲೀಸ್‌ ವಶದಲ್ಲಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ಭೇಟಿಯಾಗಲು ಮುತಾಲಿಕ್‌ ಬಂದಿದ್ದರು. ತಮ್ಮ ಆಗಮನದ ಸುದ್ದಿ ತಿಳಿದು ಮಣಿಕಂಠರನ್ನು ವೈದ್ಯಕೀಯ ಚಿಕಿತ್ಸೆ ನೆಪ ಹೇಳಿ ಪೊಲೀಸರು ತರಾತುರಿಯಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರ ವಿರುದ್ಧ ಕಿಡಿ ಕಾರಿದ ಮುತಾಲಿಕ್‌, ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.ಪೊಲೀಸರ ಕಸ್ಟಡಿಯಲ್ಲಿರುವ ಮಣಿಕಂಠ ರಾಠೋಡ್ 6077 ಕ್ವಿಂಟಲ್ ಅಕ್ಕಿ ನಾಪತ್ತೆ ಪ್ರಕರಣದ ಸೂತ್ರಧಾರಿ ಯಾರು ಎಂದು ಹೆಸರು ಸಮೇತ ಬರೆದಿರುವ ಪತ್ರ ವೈರಲ್ ಆಗಿದೆ. ಆ ಪತ್ರದ ಆಧಾರದ ಮೇಲೆ ಹೆಸರಿರುವ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಬೇಕಾಗಿತ್ತು. ಆದರೆ ಅವರು ಆ ಕೆಲಸ ಮಾಡಲಿಲ್ಲ ಎಂದು ಶಂಕೆ ವ್ಯಕ್ತಪಡಿಸಿದರು. ದ್ವೇಷದಿಂದ ಮಣಿಕಂಠ ರಾಠೋಡ್‌ರನ್ನು ಉದ್ದೇಶಪೂರ್ವಕವಾಗಿ ರಾಜಕೀಯವಾಗಿ ಮುಗಿಸಲು ಒಳ ಸಂಚು ನಡೆಸಿರುವುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.

ಈ ಪ್ರಕರಣದಲ್ಲಿ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಹಾಗಾದರೆ ಇವರೆಲ್ಲರನ್ನೂ ಯಾವ ಆಧಾರದಲ್ಲಿ ಬಂಧಿಸಲಾಗಿದೆ. ಪ್ರಮುಖ ಆರೋಪಿಗಳನ್ನು ಈ ಕೇಸಿನಿಂದ ಬಚಾವ್ ಮಾಡುವ ದುರುದ್ದೇಶದಿಂದ ನಿರಪರಾಧಿಗಳನ್ನು ಬಂಧಿಸುವ ಮೂಲಕ ಪೊಲೀಸರು ತಮ್ಮ ಶೂರತನ ತೋರಿಸಿದ್ದಾರೆ ಎಂದು ವಿರುದ್ಧ ಕಿಡಿ ಕಾರಿದರು.ಪೊಲೀಸರು ಎಷ್ಟು ಸಾಚಾಗಳಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಭಯೋತ್ಪಾದಕರನ್ನು ಭೇಟಿಯಾಗಲು ಅವಕಾಶ ನೀಡುವ ಇವರು ಮಣಿಕಂಠರನ್ನು ಭೇಟಿಯಾಗಲು ಏಕೆ ಬಿಡಲಿಲ್ಲ. ಪೊಲೀಸರು ಕಾನೂನು ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಪೊಲೀಸರ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿ, ರಾಠೋಡ್ ಬಂಧಿಸಿರುವ ಪೊಲೀಸ್ ಅಧಿಕಾರಿ ಮತ್ತು ತನಿಖಾ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿ, ಸೇವೆಯಿಂದ ಅಮಾನತು ಗೊಳಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

Share this article