ಅನ್ನಭಾಗ್ಯ ಫಲಾನುಭವಿಗಳಿಗೆ ಇನ್ನು ಹಣ ಬದಲು ಅಕ್ಕಿಭಾಗ್ಯ?

KannadaprabhaNewsNetwork | Published : Feb 19, 2025 12:45 AM

ಸಾರಾಂಶ

‘ಅನ್ನಭಾಗ್ಯ’ ಯೋಜನೆಯಡಿ ಕೆಲ ಅಂತ್ಯೋದಯ ಮತ್ತು ಬಿಪಿಎಲ್‌ ಕಾರ್ಡ್‌ದಾರರಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯ ಹಣ ಬ್ಯಾಂಕ್‌ ಖಾತೆಗೆ ಕಳೆದ ಮೂರು ತಿಂಗಳಿನಿಂದ ಜಮೆಯಾಗಿಲ್ಲ. ಇದು ಫಲಾನುಭವಿಗಳ ಆಕ್ರೋಶಕ್ಕೆ ಕಾರಣವಾಗಿದೆ.

- ಅಕ್ಕಿ ಪಡೆಯಲು ಆಹಾರ ಇಲಾಖೆ ಪ್ರಯತ್ನ

- ಅದೇ ಕಾರಣಕ್ಕೆ ಹಣ ವರ್ಗಾವಣೆ ಸ್ಥಗಿತ?

----

ಆಗುತ್ತಿರುವುದೇನು?

- ನಿಗದಿತ ಸಮಯಕ್ಕೆ ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ಪಡಿತರ ಅಕ್ಕಿ ಹಣ ಜಮಾ ಮಾಡುತ್ತಿಲ್ಲ.

- ಕೆಲ ತಿಂಗಳು ಹಣ ಪಾವತಿಗೆ ತಾಂತ್ರಿಕತೆ ಸಮಸ್ಯೆ ನೆಪವೊಡ್ಡಿದ್ದ ಆಹಾರ ಇಲಾಖೆ ಕಾಲ ತಳ್ಳುತ್ತಿತ್ತು

- ಈಗ ಹಣದ ಬದಲಿಗೆ ಅಕ್ಕಿ ಕೊಡುವುದಾಗಿ ಆಹಾರ ಇಲಾಖೆಯ ಕೆಲ ಅಧಿಕಾರಿಗಳು ಹೇಳುತ್ತಿದ್ದಾರೆ

- ವಿಪರ್ಯಾಸವೆಂದರೆ ಅಕ್ಕಿ, ಹಣ ಎರಡೂ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಸರ್ಕಾರದಲ್ಲಿ ಈ ಬಗ್ಗೆ ಗೊಂದಲ

----

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಅನ್ನಭಾಗ್ಯ’ ಯೋಜನೆಯಡಿ ಕೆಲ ಅಂತ್ಯೋದಯ ಮತ್ತು ಬಿಪಿಎಲ್‌ ಕಾರ್ಡ್‌ದಾರರಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯ ಹಣ ಬ್ಯಾಂಕ್‌ ಖಾತೆಗೆ ಕಳೆದ ಮೂರು ತಿಂಗಳಿನಿಂದ ಜಮೆಯಾಗಿಲ್ಲ. ಇದು ಫಲಾನುಭವಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೆಲ ಫಲಾನುಭವಿಗಳಿಗೆ ಡಿಸೆಂಬರ್‌ ತಿಂಗಳ ಹಣ ಜನವರಿ ತಿಂಗಳಲ್ಲಿ ಖಾತೆಗಳಿಗೆ ಸಂದಾಯವಾಗಿದೆ. ಆದರೆ, ಹಲವರಿಗೆ ಮೂರು ತಿಂಗಳಿನಿಂದ ಡಿಬಿಟಿ ಮೂಲಕ ಹಣ ಬಂದಿಲ್ಲ. ಅನ್ನಭಾಗ್ಯದ ಹಣಕ್ಕಾಗಿ ಕಾದು ಕಾದು ಬೇಸರಗೊಂಡಿರುವ ಹಲವು ಫಲಾನುಭವಿ ಮಹಿಳೆಯರು ಆಹಾರ ಇಲಾಖೆಯ ನಿರ್ಲಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಎಫ್‌ಸಿಐ ರಾಜ್ಯ ಸರ್ಕಾರಗಳಿಗೆ ಪ್ರತಿ ಕೆಜಿಗೆ 22.50 ರು.ನಂತೆ ಅಕ್ಕಿ ಮಾರಾಟ ಮಾಡಲು ಸಿದ್ಧವಿದೆ. ಈ ಹಿನ್ನೆಲೆಯಲ್ಲಿ ಬಿಪಿಎಲ್‌ ಮತ್ತು ಅಂತ್ಯೋದಯ ಫಲಾನುಭವಿಗಳಿಗೆ ಹಣದ ಬದಲಿಗೆ ಅಕ್ಕಿಯನ್ನೇ ನೀಡಬೇಕೆಂದು ಆಹಾರ ಇಲಾಖೆ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಹೆಚ್ಚುವರಿ 5 ಕೆಜಿಗೆ 170 ರು.ನಂತೆ ಹಣ ಸಂದಾಯ ಮಾಡಿಲ್ಲ ಎನ್ನಲಾಗಿದೆ. ಹೀಗಾಗಿ, ಫಲಾನುಭವಿಗಳಿಗೆ ಅತ್ತ ಹಣವೂ ಇಲ್ಲ, ಇತ್ತ ಅಕ್ಕಿಯೂ ಸಿಗದಂತಾಗಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಬಿಪಿಎಲ್ ಕಾರ್ಡ್‌ನ ಪ್ರತಿ ಫಲಾನುಭವಿಗೆ ತಲಾ 10 ಕೆ.ಜಿ. ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದ ನಂತರ ಹೆಚ್ಚುವರಿ ಅಕ್ಕಿಯನ್ನು ಕೇಂದ್ರದಿಂದ ಖರೀದಿಸಲು ಪ್ರಯತ್ನಿಸಿತ್ತು. ಆ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಅಕ್ಕಿ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರಾಕರಿಸಿತ್ತು. ಇದೀಗ ಕೇಂದ್ರ ಸರ್ಕಾರ ಅಕ್ಕಿಯನ್ನು ಪ್ರತಿ ಕೆಜಿಗೆ 34 ರು. ಬದಲಿಗೆ 22.50 ರು.ಗೆ ಕೊಡಲು ಮುಂದಾಗಿದ್ದರೂ ರಾಜ್ಯ ಖರೀದಿಸಲು ಮನಸು ಮಾಡುತ್ತಿಲ್ಲ. ಅಕ್ಕಿ ಬದಲಿಗೆ ಕೆಜಿಗೆ 34 ರು.ನಂತೆಯೇ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲು ತೀರ್ಮಾನಿಸಿದೆ.

ಆದರೆ, ನಿಗದಿತ ಸಮಯಕ್ಕೆ ಡಿಬಿಟಿ ಮೂಲಕ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಿಲ್ಲ. ಕೆಲ ತಿಂಗಳು ತಾಂತ್ರಿಕತೆ ಸಮಸ್ಯೆಯ ನೆಪವೊಡ್ಡಿದ್ದ ಆಹಾರ ಇಲಾಖೆ, ಈಗ ಹಣದ ಬದಲಿಗೆ ಅಕ್ಕಿ ಕೊಡುವುದಾಗಿ ಹೇಳುತ್ತಿದೆ. ವಿಪರ್ಯಾಸವೆಂದರೆ ಅಕ್ಕಿ, ಹಣ ಎರಡೂ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಆಹಾರ ಅಧಿಕಾರಿಗಳು ಈ ಕುರಿತು ಸರಿಯಾದ ಸ್ಪಷ್ಟನೆ ನೀಡುತ್ತಿಲ್ಲ ಎಂದು ಹಲವು ಫಲಾನುಭವಿಗಳು ಕಿಡಿಕಾರುತ್ತಿದ್ದಾರೆ.

4.40 ಕೋಟಿ ಫಲಾನುಭವಿಗಳು:

ರಾಜ್ಯದಲ್ಲಿ 1,16,51,209 ಬಿಪಿಎಲ್ ಕಾರ್ಡ್‌ಗಳಿದ್ದು ಬರೋಬ್ಬರಿ 3,93,29,981 ಮಂದಿ ಫಲಾನುಭವಿಗಳಿದ್ದಾರೆ. ಇದಲ್ಲದೆ 10,83,977 ಅಂತ್ಯೋದಯ ಕಾರ್ಡ್‌ಗಳಿದ್ದು, 43,81,789 ಮಂದಿ ಫಲಾನುಭವಿಗಳಿದ್ದಾರೆ. 1.26 ಕೋಟಿಗೂ ಅಧಿಕ ಕಾರ್ಡ್‌ಗಳಿಗೆ 4.40 ಕೋಟಿ ಫಲಾನುಭವಿಗಳಿದ್ದಾರೆ. ಪ್ರತಿ ತಿಂಗಳು ಬರೋಬ್ಬರಿ 700 ಕೋಟಿಗೂ ಅಧಿಕ ಹಣವನ್ನು ರಾಜ್ಯ ಸರ್ಕಾರ ಹೆಚ್ಚುವರಿ ಅಕ್ಕಿಯ ಬದಲಿಗೆ ಫಲಾನುಭವಿಗಳಿಗೆ ಭರಿಸುತ್ತಿದೆ.

-----

ಕಾರ್ಡ್‌ ರದ್ದಾಗಿದ್ದರೆ ಹಣ ಬರಲ್ಲ!

ಆದಾಯ ತೆರಿಗೆ ಪಾವತಿದಾರರು, ಸ್ವಂತ ಮನೆ ಹೊಂದಿರುವವರು, ವಾರ್ಷಿಕ 1.20 ಲಕ್ಷಕ್ಕೂ ಹೆಚ್ಚು ಆದಾಯ ಇರುವವರು ಸೇರಿದಂತೆ ವಿವಿಧ ನಿಯಮಗಳ ಅಡಿಯಲ್ಲಿ ಲಕ್ಷಾಂತರ ಬಿಪಿಎಲ್‌ ಕಾರ್ಡ್‌ಗಳನ್ನು ಆಹಾರ ಇಲಾಖೆ ರದ್ದು ಮಾಡಿದೆ. ಬಹುತೇಕ ಫಲಾನುಭವಿಗಳಿಗೆ ತಮ್ಮ ಪಡಿತರ ಚೀಟಿ ರದ್ದಾಗಿರುವ ಮಾಹಿತಿಯೇ ಇಲ್ಲ. ನ್ಯಾಯಬೆಲೆ ಅಂಗಡಿಯಲ್ಲಿ ಮಾಹೆಯ ದಿನಸಿ ಪಡೆಯಲು ಹೋದವರಿಗೆ ಕಾರ್ಡ್‌ ರದ್ದಾಗಿರುವುದು ಗೊತ್ತಾಗುತ್ತಿದೆ. ಕಾರ್ಡ್‌ ರದ್ದಾಗಿರುವ ಫಲಾನುಭವಿಗಳಿಗೆ ಹೆಚ್ಚುವರಿ ಅಕ್ಕಿಯ ಹಣ ಸಂದಾಯವಾಗುತ್ತಿಲ್ಲ. ಇದು ಕೂಡ ಗೊಂದಲಕ್ಕೆ ಕಾರಣವಾಗಿರಬಹುದು ಎಂದು ಆಹಾರ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Share this article