ಬಿಜೆಪಿ ನಗರ ಘಟಕದ ವತಿಯಿಂದ ಬೃಹತ್ ಪ್ರತಿಭಟನೆ । ತನಿಖಾ ತಂಡವನ್ನು ಕೂಡಲೇ ವಜಾಗೊಳಿಸಲು ಒತ್ತಾಯಕನ್ನಡಪ್ರಭ ವಾರ್ತೆ ಶಹಾಪುರ
ಬಿಜೆಪಿ ಕಾರ್ಯಕರ್ತರು ಸಿ.ಬಿ. ಕಮಾನದಿಂದ ಬಸವೇಶ್ವರ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಮೆರವಣಿಗೆಯುದ್ದಕ್ಕೂ ಸರ್ಕಾರದ ವಿರುದ್ಧ ಹಾಗೂ ಅಕ್ಕಿ ಆರೋಪಿಗಳನ್ನು ರಕ್ಷಿಸುತ್ತಿರುವ ಸಚಿವ ದರ್ಶನಾಪೂರ್ ರಾಜೀನಾಮೆ ನೀಡಬೇಕೆಂದು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಎನ್. ರವಿಕುಮಾರ್ ಮಾತನಾಡಿ, ಶಹಾಪುರದಲ್ಲಿ ಇಂತಹ ದೊಡ್ಡಮಟ್ಟದ ಅಕ್ಕಿ ನಾಪತ್ತೆ ಒಂದೇ ಅಲ್ಲ. ಅಕ್ರಮ ಮರಳು ಸಾಗಾಣಿಕೆ, ರಸಗೊಬ್ಬರ ಕಳ್ಳ ಸಾಗಾಣಿಕೆ ಸೇರಿದಂತೆ ಹಲವು ಪ್ರಕರಣಗಳನ್ನು ಸೂಕ್ಷ್ಮತೆಯಿಂದ ನೋಡಿದಾಗ ಇದರಲ್ಲಿ ಈ ಕ್ಷೇತ್ರದ ಪ್ರಮುಖ ನಾಯಕರ ಕೈವಾಡವಿದೆ ಎಂಬ ಅನುಮಾನಗಳು ಬಲವಾಗುತ್ತಿವೆ ಎಂದರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕಾರು ತಿಂಗಳಲ್ಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಜ್ಯದಲ್ಲಿ ಹೆಚ್ಚಿರುವ ಭ್ರೂಣಹತ್ಯೆ, ಬೆಳಗಾವಿಯಲ್ಲಿ ನಡೆದ ಅಧಿವೇಶನ ಸಮಯದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿದ ಪ್ರಕರಣ ಇಡೀ ರಾಜ್ಯ ತಲೆತಗ್ಗಿಸುವಂತೆ ಮಾಡಿದೆ. ಈ ಘಟನೆಯನ್ನು ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ ಎನ್ನುವುದು ಸಾಮಾನ್ಯ ಜನರಿಗೂ ಅರ್ಥವಾಗುತ್ತದೆ. ಶಹಾಪುರ ಹಲವು ಅಕ್ರಮ ದಂಧೆಯ ಅಡ್ಡೆಯಾಗಿದೆ ಎನ್ನುವುದು ಕಂಡು ಬರುತ್ತಿದೆ.
ಈ ಪ್ರಕರಣದ ಸೂತ್ರಧಾರಿ ಗುರುನಾಥ್ ರೆಡ್ಡಿ ಹಾಗೂ ಮಲ್ಲಿಕ್ ಚಾಮನಾಳ ಇವರನ್ನು ಬಂಧಿಸಬೇಕು. ಈ ಪ್ರಕರಣವನ್ನು ನಾವು ಇಲ್ಲಿಗೆ ಬಿಡುವುದಿಲ್ಲ. ಆಹಾರ ಸಚಿವ ಹಾಗೂ ಉನ್ನತ ಅಧಿಕಾರಿಗೆ ಭೇಟಿ ಮಾಡುತ್ತೇವೆ ಎಂದರು. ಇದನ್ನು ನಿಷ್ಪಕ್ಷಪಾತ ತನಿಖೆಗೆ ಸಿಐಡಿ ಇಲ್ಲವೇ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.
ವೀಣಾ ಮೋದಿ, ಭಾರತಿ ಜಮಖಂಡಿ, ಬಸವರಾಜ ಅರುಣಿ, ಮಲ್ಲಿಕಾರ್ಜುನ ಚಿಲ್ಲಾಳ, ಚಂದ್ರಶೇಖರ್, ರಾಘವೇಂದ್ರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಬಡವರಿಗೆ ವಿತರಿಸಬೇಕಾದ ಅಕ್ಕಿಯನ್ನು ಸಚಿವ ದರ್ಶನಾಪೂರ ಹಾಗೂ ಅವರ ಆಪ್ತರ ಕೈವಾಡದಿಂದಾಗಿ ಇಷ್ಟೊಂದು ದೊಡ್ಡ ಪ್ರಮಾಣದ 6077 ಕ್ವಿಂಟಲ್ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗಿದೆ. ಕೇಸ್ ಮುಚ್ಚಿ ಹಾಕುವ ಹುನ್ನಾರ ನಡೆದಿರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
-
-
-
16ವೈಡಿಆರ್ : ಶಹಾಪುರ ನಗರದಲ್ಲಿ 6077 ಕ್ವಿಂಟಲ್ ಅಕ್ಕಿ ನಾಪತ್ತೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಬಿಜೆಪಿ ನಗರ ಘಟಕದಿಂದ ನಡೆದ ಪ್ರತಿಭಟನೆಯಲ್ಲಿ ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಎನ್. ರವಿಕುಮಾರ್ ಮಾತನಾಡಿದರು.---000---