ಚನ್ನಪಟ್ಟಣ: ನಗರದ ತಾಲೂಕು ವ್ಯವಸಾಯೋತ್ಪನ್ನಗಳ ಸಹಕಾರ ಸಂಘದ (ಟಿಎಪಿಸಿಎಂಎಸ್) ಗೋದಾಮಿನಿಂದ ನಾಪತ್ತೆಯಾಗಿದ್ದ ಅನ್ನಭಾಗ್ಯ ಯೋಜನೆಯ 1543 ಕ್ವಿಂಟಲ್ ಅಕ್ಕಿ ಮತ್ತು 70 ಕ್ವಿಂಟಲ್ ರಾಗಿ ಪ್ರಕರಣದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಕರ್ತವ್ಯಲೋಪಕ್ಕಾಗಿ ಇಬ್ಬರು ಅಧಿಕಾರಿಗಳನ್ನು ಅಮಾನತಗೊಳಿಸಿದೆ.
ಕಳೆದ ನವಂಬರ್‌ನಲ್ಲಿ ನಗರದ ಟಿಎಪಿಸಿಎಂಎಸ್ ಗೋದಾಮಿನಿಂದ ಅಕ್ಕಿ ಹಾಗೂ ರಾಗಿ ಕಳವಾಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಕುರಿತು ಕಳೆದ ನ.22ರಂದು ಆಹಾರ ನಿರೀಕ್ಷಕ ಚೇತನ್‌ಕುಮಾರ್ ನೀಡಿದ್ದ ದೂರಿನ ಮೇರೆಗೆ ಚನ್ನಪಟ್ಟಣ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸರ್ಕಾರದ ಬೊಕ್ಕಸಕ್ಕೆ ಒಟ್ಟು ೫೫.೦೪ ಲಕ್ಷ ನಷ್ಟ ಉಂಟು ಮಾಡಿದ್ದ ಪ್ರಕರಣ ಕುರಿತು ಪೊಲೀಸ್ ತನಿಖೆ ಜೊತೆಗೆ ಇಲಾಖಾ ತನಿಖೆ ನಡೆದಿತ್ತು.
ಮೇಲ್ನೋಟಕ್ಕೆ ಚೇತನ್‌ಕುಮಾರ್ ಹಾಗೂ ಶಾಂತಕುಮಾರಿ ಅವರ ಕರ್ತವ್ಯ ಲೋಪ ಕಂಡುಬಂದಿದ್ದು, ಇಲಾಖೆಯ ಉಪ ನಿರ್ದೇಶಕಿ ರಮ್ಯ ಸಿ.ಆರ್ ಅವರು ಇಬ್ಬರಿಗೂ ನೋಟಿಸ್ ಜಾರಿ ಮಾಡಿದ್ದರು. ಅದಕ್ಕೆ ಅವರಿಬ್ಬರು ನೀಡಿದ ಪ್ರತಿಕ್ರಿಯೆ ತೃಪ್ತಿದಾಯಕವಾಗಿರಲಿಲ್ಲ. ಪಡಿತರ ದಾಸ್ತಾನು ಬಂದಾಗ ಅಧಿಕಾರಿಗಳು ಅದನ್ನು ಸಮಗ್ರವಾಗಿ ಪರಿಶೀಲಿಸಬೇಕು. ನಿಯಮಿತವಾಗಿ ನ್ಯಾಯಬೆಲೆ ಅಂಗಡಿ ಹಾಗೂ ಸಗಟು ಮಳಿಗೆಗಳಲ್ಲಿನ ದಾಸ್ತಾನು ಎತ್ತುವಳಿ, ವಿತರಣೆ ಹಾಗೂ ಅಂತಿಮ ಶಿಲ್ಕಿನ ಬಗ್ಗೆ ಪರಿಶೀಲನೆ ನಡೆಸಿದ್ದಲ್ಲಿ, ಗೋದಾಮಿನಿಂದ ಅಕ್ಕಿ ಮತ್ತು ರಾಗಿ ಕಳ್ಳತನವಾಗುತ್ತಿರಲಿಲ್ಲ. ನೌಕರರ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ವಾಸಿರೆಡ್ಡಿ ಅವರು ಇಬ್ಬರನ್ನು ಅಮಾನತು ಮಾಡಿದ್ದಾರೆ.ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು, ಗೋದಾಮಿನ ವ್ಯವಸ್ಥಾಪಕ ಚಂದ್ರಶೇಖರ್‌ನನ್ನು ಬಂಧಿಸಿದ್ದರು. ಇದಾದ ಒಂದೇ ವಾರದಲ್ಲಿ ಆತ ಜಾಮೀನ ಮೇಲೆ ಹೊರಬಂದಿದ್ದ. ಇಲಾಖೆಯು ಟಿಎಪಿಸಿಎಂಎಸ್‌ಗೆ ನೀಡಿದ್ದ ಪಡಿತರ ಅಕ್ಕಿ ಸಂಗ್ರಹದ ಪರವಾನಗಿ ರದ್ದುಪಡಿಸಿ, ಸಂಘಕ್ಕೆ ಪಾವತಿಯಾಗಬೇಕಿರುವ ಸುಮಾರು ೬೫ ಲಕ್ಷ ರೂ. ಬಿಲ್ ಅನ್ನು ಜಿಲ್ಲಾಧಿಕಾರಿ ತಡೆ ಹಿಡಿದಿದ್ದಾರೆ.