ಭತ್ತ ಇಳುವರಿ ಕುಸಿತ<bha>;</bha> ಬೆಲೆ ನೆಗೆತ

KannadaprabhaNewsNetwork | Published : Dec 18, 2023 2:00 AM

ಸಾರಾಂಶ

ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ, ಭತ್ತ, ಹತ್ತಿ, ಸಜ್ಜೆ ಸೇರಿ ಬರದ ನಾಡಿನಲ್ಲಿ ರೈತರ ಉತ್ಪನ್ನಗಳಿಗೆ ಬಂಪರ್ ಬೆಲೆ ಇದ್ದು ಮಳೆ ಇಲ್ಲದ ಪರಿಣಾಮ ಬೆಳೆಗಳ ಇಳುವರಿ ಕುಂಠಿತಗೊಂಡಿದೆ.

ಲಿಂಗಸುಗೂರು: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ, ಭತ್ತ, ಹತ್ತಿ, ಸಜ್ಜೆ ಸೇರಿ ಬರದ ನಾಡಿನಲ್ಲಿ ರೈತರ ಉತ್ಪನ್ನಗಳಿಗೆ ಬಂಪರ್ ಬೆಲೆ ಇದ್ದು ಮಳೆ ಇಲ್ಲದ ಪರಿಣಾಮ ಬೆಳೆಗಳ ಇಳುವರಿ ಕುಂಠಿತಗೊಂಡಿದೆ.

ತಾಲೂಕಿನಲ್ಲಿ ಪ್ರದೇಶವಾರು ಬಹು ಬೆಳೆ ಕೃಷಿ ಪದ್ಧತಿ ಇದೆ. ಇನ್ನೂ ನೀರಾವರಿ, ಖುಷ್ಕಿ ಪ್ರದೇಶಗಳು ಪ್ರತ್ಯೇಕವಾಗಿವೆ. ಆದರೂ ಕೃಷ್ಣಾ ಮೇಲ್ದಂಡೆ ಯೋಜನೆ ಹಾಗೂ ಕೊಳವೆಬಾವಿ, ತೆರೆದ ಬಾವಿ ಸೇರಿ ಬಹುತೇಕ ಪ್ರದೇಶ ನೀರಾವರಿಗೆ ಒಳಪಟ್ಟಿದೆ. ಮುಂಗಾರು ಹಂಗಾಮಿನಲ್ಲಿ ತೊಗರಿ, ಹತ್ತಿ, ಸಜ್ಜೆ, ಹೆಸರು, ಅಲಸಂದಿ ಸೇರಿ ದ್ವಿದಳ ಧಾನ್ಯ ಬೆಳೆಯುತ್ತಾರೆ. ಬಿತ್ತನೆ ಮಾಡಿದ ಬಳಿಕ ಮುಂಗಾರು ಮಳೆ ಸಂಪೂರ್ಣವಾಗಿ ಬಾರದೇ ಬೆಳೆಗಳು ಬಾಡಿದ್ದವು. ಕೆಲವರು ನೀರಾವರಿ ಪ್ರದೇಶದಲ್ಲಿ ನೀರು ಹರಿಸುವ ಮೂಲಕ ಬೆಳೆ ರಕ್ಷಣೆ ಮಾಡಿಕೊಂಡರೆ ಬಹುತೇಕ ಖುಷ್ಕಿ ಪ್ರದೇಶದ ಬೆಳೆಗಳು ಒಣಗಿ ಹೋಗಿವೆ. ನೀರು ಹಾಯಿಸಿದೆಡೆ ಇಳುವರಿ ಉತ್ತಮವಾಗಿದೆ. ನೀರಿಲ್ಲದ ಪ್ರದೇಶದಲ್ಲಿ ಇಳುವರಿ ಪಾತಾಳ ಕಂಡಿದೆ. ಒಣ ಬೇಸಾಯ ಪ್ರದೇಶದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.

ಖುಷ್ಕಿ ಪ್ರದೇಶದಲ್ಲಿ ತೊಗರಿ, ಹತ್ತಿ, ಸಜ್ಜೆ ಮುಂತಾದ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. ನೀರಾವರಿ ಸೌಕರ್ಯ ಹೊಂದಿದ ಪ್ರದೇಶದಲ್ಲಿ ಮಳೆ ಇಲ್ಲದಾಗಿ ಬೆಳೆಗಳಿಗೆ ನೀರು ಹಾಯಿಸಿದ ರೈತರಿಗೆ ಇಳುವರಿ ಜೊತೆಗೆ ಬಂಪರ್ ಬೆಲೆ, ಲಾಭ ಸಿಕ್ಕಿದೆ. ಪ್ರಮುಖವಾಗಿ ತೊಗರಿ ಕ್ವಿಂಟಲ್‌ಗೆ 10,000 ಮೇಲ್ಪಟ್ಟಿದೆ. ಇನ್ನೂ ಸಜ್ಜೆ ಕ್ವಿಂಟಲ್ 3,000 ಅಧಿಕ ಬೆಲೆ ಇದೆ. ಹತ್ತಿ ಧಾರಣೆ ಉತ್ತಮವಾಗಿದೆ. ಪರಿಣಾಮ ಇಳುವರಿ ಕಡಿಮೆ ಇದ್ದರೂ ಧಾರಣೆ ಉತ್ತಮವಾಗಿರುವುದರಿಂದ ರೈತರ ಉತ್ಪನ್ನಗಳಿಗೆ ಬೇಡಿಕೆ, ಬೆಲೆ ದ್ವಿಗುಣವಾಗಿದೆ.

ಇನ್ನೂ ಭತ್ತ ಬೆಳೆದ ನೀರಾವರಿ ಪ್ರದೇಶದ ರೈತರ ಉತ್ಪನ್ನಗಳಿಗೆ ದಾಖಲೆ ಬೆಲೆ ಇದೆ. ಆರ್‌ಎನ್‌ಆರ್‌ ತಳಿಯ ಸೋನಾ ಭತ್ತಕ್ಕೆ 75 ಕೆ.ಜೆ.ಗೆ 2400-2500 ಧಾರಣೆ ಇದೆ. ಪೂರ್ಣ ಸೋನಾ ತಳಿ 75 ಕೆ.ಜಿ ಭತ್ತಕ್ಕೆ 2000-22000 ಧಾರಣೆ ಇದೆ. ಕಳೆದ ಸಾಲಿನಲ್ಲಿ ಭತ್ತದ ಬೆಲೆ ಕುಸಿದಿತ್ತು. ಪ್ರಸಕ್ತ ಸಾಲಿನ ಭತ್ತದ ಧಾರಣೆ ರೈತರಿಗೆ ಹೆಚ್ಚಿನ ಲಾಭ ತಂದಿದ್ದು ಭತ್ತದ ಬೆಳೆಗಾರರು ಆನಂದ ತುಂದಿಲರಾಗಿದ್ದಾರೆ.

ಮಳೆ ಕೊರತೆಯಿಂದ ಜಲಮೂಲಗಳಲ್ಲಿ ನೀರಿನ ಲಭ್ಯತೆ ಅನುಮಾನ ಇರುವ ಕಾರಣ ರೈತರು ಬೇಸಿಗೆ ಹಂಗಾಮಿನಲ್ಲಿ ಭತ್ತದ ನಾಟಿ ಕೈಬಿಟ್ಟಿದ್ದಾರೆ. ಇನ್ನು ತೆರೆದ ಬಾವಿ, ಕೊಳವೆ ಬಾವಿ ನೀರಿನ ಸೌಲತ್ತು ಹೊಂದಿದ್ದ ರೈತರು ಬೇಸಿಗೆ ಹಂಗಮಿನಲ್ಲಿ ಶೇಂಗಾ, ಸಜ್ಜೆ ಬಿತ್ತನೆ ಮಾಡಿದ್ದಾರೆ.

ಮೇವಿಗಾಗಿ ಹುಡುಕಾಟ : ಮಳೆ ಕೊರತೆಯಿಂದ ಬೇಸಿಗೆ ಹಂಗಾಮಿನಲ್ಲಿ ತೀವ್ರವಾದ ಮೇವಿನ ಕೊರತೆ ಉಂಟಾಗುವುದನ್ನು ಅರಿತ ರೈತರು ಈಗಲೇ ಭತ್ತದ ಮೇವು ಸಂಗ್ರಹಕ್ಕೆ ಮುಂದಾಗಿದ್ದಾರೆ. ನೀರಾವರಿ ಪ್ರದೇಶದ ರೈತರ ಸಂಪರ್ಕಿಸಿ ಹುಲ್ಲು ಪಡೆಯುತ್ತಿದ್ದಾರೆ. ಟ್ರ್ಯಾಕ್ಟರ್ ಮೇವು ಖರೀದಿ ಹಾಗೂ ಸಾಗಾಣಿಕೆ ವೆಚ್ಚ 4-5 ಸಾವಿರ ಖರ್ಚಾಗುತ್ತಿದೆ. ನೀರಾವರಿ ಪ್ರದೇಶದ ಕೆಲ ರೈತರು ಮೇವನ್ನು ಉಚಿತವಾಗಿ ನೀಡಿದರೆ ಕೆಲವರು ಕನಿಷ್ಠ ಹಣ ಪಡೆದು ನೀಡುತ್ತಿದ್ದಾರೆ. ಮೇವಿನ ಸಂಗ್ರಹ ಭರದಿಂದ ಸಾಗಿದ್ದು ಹಗಲು-ರಾತ್ರಿ ಎನ್ನದೆ ತಿರುಗಾಡುತ್ತಿರುವ ಮೇವು ತುಂಬಿದ ಟ್ರ್ಯಾಕ್ಟರ್‌ಗಳನ್ನು ಗಮನಿಸಿದಾಗ ಮೇವಿನ ಅಗತ್ಯ ಎಷ್ಟು ಎನ್ನುವುದು ಅರಿವಿಗೆ ಬರುತ್ತಿದೆ.

Share this article