ವಿಭಿನ್ನ ಕ್ಷೇತ್ರದವರಿಂದ ಕನ್ನಡ ಸಾಹಿತ್ಯ ಸಮೃದ್ಧ: ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್‌

KannadaprabhaNewsNetwork | Published : Jul 8, 2024 12:32 AM

ಸಾರಾಂಶ

ಕನ್ನಡ ಸಾಹಿತ್ಯ ಸಮೃದ್ಧವಾಗುವುದು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಿಂದಷ್ಟೆ ಅಲ್ಲ. ಸಮಾಜದ ಬೇರೆ ಬೇರೆ ವೃತ್ತಿಯಲ್ಲಿ ಇರುವವರಿಂದ ಆ ಕೆಲಸ ಆಗುತ್ತಿದೆ. ವಿಭಿನ್ನ ಕ್ಷೇತ್ರದವರ ಅನುಭವ ದ್ರವ್ಯ ಕನ್ನಡ ಸಾಹಿತ್ಯಕ್ಕೆ ಕೋಡು ಮೂಡಿಸುತ್ತಿದೆ. ವಿಭಿನ್ನ ಕ್ಷೇತ್ರದವರು ಬರೆಯುತ್ತಿರುವುದರಿಂದ ಕನ್ನಡ ಸಾಹಿತ್ಯವು ಸಮೃದ್ಧಗೊಳ್ಳುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ವಿಭಿನ್ನ ಕ್ಷೇತ್ರದವರು ಬರೆಯುತ್ತಿರುವುದರಿಂದ ಕನ್ನಡ ಸಾಹಿತ್ಯವು ಸಮೃದ್ಧಗೊಳ್ಳುತ್ತಿದೆ ಎಂದು ಲೇಖಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್‌ತಿಳಿಸಿದರು.

ನಗರದ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ಕವಿತಾ ಪ್ರಕಾಶನವು ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಘುಪತಿ ತಾಮ್ಹನ್ ಕರ್ ಅವರ ‘ನೋಟಿನ ನಂಟು’ ಎಂಬ ಮೊದಲ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಸಮೃದ್ಧವಾಗುವುದು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಿಂದಷ್ಟೆ ಅಲ್ಲ. ಸಮಾಜದ ಬೇರೆ ಬೇರೆ ವೃತ್ತಿಯಲ್ಲಿ ಇರುವವರಿಂದ ಆ ಕೆಲಸ ಆಗುತ್ತಿದೆ. ವಿಭಿನ್ನ ಕ್ಷೇತ್ರದವರ ಅನುಭವ ದ್ರವ್ಯ ಕನ್ನಡ ಸಾಹಿತ್ಯಕ್ಕೆ ಕೋಡು ಮೂಡಿಸುತ್ತಿದೆ ಎಂದು ಹೇಳಿದರು.

ಪ್ರಾಧ್ಯಾಪಕರು, ಶಿಕ್ಷಣ ಕ್ಷೇತ್ರದಲ್ಲಿ ಇರುವವರು ಮಾತ್ರ ಸಾಹಿತ್ಯ ಬರೆಯುತ್ತಾರೆ ಎಂಬ ಪೂರ್ವಗ್ರಹ ನಮ್ಮ ಸಮಾಜದಲ್ಲಿದೆ. ವಿಸ್ತಾರವಾದ ಜೀವನಾನುಭವ ಹೊಂದಿರುವ ಬ್ಯಾಂಕ್, ಐಟಿ, ವಿಜ್ಞಾನಿಗಳು ಸೇರಿದಂತೆ ಬೇರೆ ಬೇರೆ ಕ್ಷೇತ್ರದಿಂದ ಬಂದವರೆ ಸಾಹಿತ್ಯವನ್ನು ಸಮೃದ್ಧಗೊಳಿಸುತ್ತಿದ್ದಾರೆ ಎಂದರು.

ಲೇಖಕಿ, ಬ್ಯಾಂಕ್ ಉದ್ಯೋಗಿ ಡಾ. ಶುಭಶ್ರೀ ಪ್ರಸಾದ್ ಮಾತನಾಡಿ, ಈ ಕೃತಿಯು ಬ್ಯಾಂಕಿನಲ್ಲಿ ಕೆಲಸ ಮಾಡುವವರು ಹಾಗೂ ಗ್ರಾಹಕರ ಜೊತೆಗಿನ ಸಂಬಂಧವನ್ನು ಸೂಕ್ಷ್ಮವಾಗಿ ನಿರೂಪಿಸಿದೆ. ಸಾಹಿತ್ಯ ಮತ್ತು ಬದುಕು ಅವಿನಾಭಾವ ಸಂಬಂಧ ಹೊಂದಿದೆ. ಸಾಹಿತ್ಯವು ಇಡೀ ಸಮಾಜಕ್ಕೆ ಬೆಳಕು ಕೊಡುತ್ತದೆ. ಯಾರಿಗೆ ಸಂಸ್ಕಾರ ಜಾಸ್ತಿ ಇರುತ್ತದೆಯೋ ಅವರು ಯಾವುದಾದರೊಂದು ಲಲಿತಕಲಾ ಪ್ರಕಾರದಲ್ಲಿ ಇರುತ್ತಾರೆ. ಸಾಹಿತ್ಯದ ಓದಿನಿಂದ ಸಂಸ್ಕಾರ ಪಡೆಯುತ್ತಾ ಹೋದರೆ ಸಮಾಜಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಹಿರಿಯ ಸಾಹಿತಿ ಡಾ. ಸಿಪಿಕೆ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಬ್ಯಾಂಕ್‌ಪ್ರಾದೇಶಿಕ ಕಚೇರಿಯ ವಿಭಾಗೀಯ ಪ್ರಬಂಧಕ ಕೆ. ಗೋಪಾಲ, ಕವಿತಾ ಪ್ರಕಾಶನದ ಪ್ರಕಾಶಕ ಗಣೇಶ ಅಮೀನಗಡ ಇದ್ದರು.

ಪ್ರಸ್ತುತ ಬ್ಯಾಂಕಿಂಗ್ ಸೇವೆಯಲ್ಲಿ ಬಹಳ ಬದಲಾವಣೆ ಆಗಿದೆ. ಬಹಳ ಸ್ಪರ್ಧಾತ್ಮಕ ವಾತಾವರಣ ಇದೆ. ಇದರಿಂದ ಬ್ಯಾಂಕ್‌ ಗಳಲ್ಲಿ ಖಾತೆ ತೆರೆಯುವುದು, ಗೃಹ ಸಾಲ, ಶಿಕ್ಷಣ ಸಾಲ ಮೊದಲಾದವನ್ನು ಪಡೆಯುವುದು ಹಿಂದಿನಷ್ಟು ಕಠಿಣವಿಲ್ಲ.

- ಕೆ. ಗೋಪಾಲ, ವಿಭಾಗೀಯ ಪ್ರಬಂಧಕ, ಕೆನರಾ ಬ್ಯಾಂಕ್‌ಪ್ರಾದೇಶಿಕ ಕಚೇರಿ

Share this article