- ತೆರೆದ ಚರಂಡಿ, ಕೀಟಗಳ ಬಾಧೆ, ದುರ್ವಾಸನೆ, ಅನೈರ್ಮಲ್ಯ ತಾಂಡವ
- ಪರಿಶೀಲನೆ ವೇಳೆ ದಿಗ್ಭ್ರಮೆ ವ್ಯಕ್ತಪಡಿಸಿದ ಅಧಿಕಾರಿಗಳ ತಂಡಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಹಾಲು ಒಕ್ಕೂಟದಲ್ಲಿ ಹಾಲಿನ ಪುಡಿ ಕಲಬೆರಕೆಯಾಗಿರುವುದು ಒಂದೇ ಅಲ್ಲ, ಅಲ್ಲಿ ಸಂಗ್ರಹಣೆಯಾಗುವ ಹಾಲು ಮತ್ತು ಹಾಲಿನ ಉತ್ಪನ್ನಗಳ ಸುರಕ್ಷತೆಯ ಬಗ್ಗೆಯೂ ಆತಂಕ ವ್ಯಕ್ತವಾಗಿದೆ. ಸುರಕ್ಷತೆಗೆ ಸಂಬಂಧಿಸಿದಂತೆ ಕೆಲವೊಂದು ಆಘಾತಕಾರಿ ಅಂಶಗಳನ್ನು ಜಿಲ್ಲಾ ಅಂಕಿತ ಅಧಿಕಾರಿಗಳ ತಂಡ ಒಕ್ಕೂಟದೊಳಗೆ ಪರಿಶೀಲನೆ ನಡೆಸುವ ವೇಳೆ ಪತ್ತೆ ಹಚ್ಚಿ ಅಪಾಯಕಾರಿ ಅಂಶಗಳನ್ನು ಕೇಂದ್ರ ಸುರಕ್ಷತಾ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.ಜಿಲ್ಲಾ ಅಂಕಿತ ಅಧಿಕಾರಿಗಳ ತಂಡ ನೀಡಿದ ವರದಿಯಲ್ಲಿ ಒಕ್ಕೂಟದ ಹಾಲು ಮತ್ತು ಕಚ್ಚಾ ಸಾಮಗ್ರಿ ಲೋಡ್ ಮಾಡುವ ಮತ್ತು ಅನ್‌ಲೋಡ್ ಪ್ರದೇಶದಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿರುವುದನ್ನು ಗುರುತಿಸಿದೆ. ನಿಂತ ಮಳೆ ನೀರು, ತ್ಯಾಜ್ಯ ವಸ್ತುಗಳು, ಪಕ್ಷಿಗಳ ಗರಿಗಳಿಂದ ತುಂಬಿರುವುದು. ಉತ್ಪಾದನಾ ಘಟದ ಸುತ್ತಲಿನ ಪ್ರದೇಶ ತೆರೆದ ಚರಂಡಿ, ಕೀಟಗಳ ಬಾಧೆ ಮತ್ತು ದುರ್ವಾಸನೆಯಿಂದ ಕೂಡಿದೆ. ಅಷ್ಟು ಮಾತ್ರವಲ್ಲದೆ, ಶೇಖರಣಾ ಟ್ಯಾಂಕ್, ಭರ್ತಿ ಮಾಡುವ ಪ್ರದೇಶ ಮತ್ತು ಮೂಲ ಸೌಕರ್ಯಗಳ ಕೆಳಭಾಗದಲ್ಲೂ ಸೋರಿಕೆ ಕಂಡುಬಂದಿದ್ದು ಆಹಾರ ಸುರಕ್ಷತೆಗೆ ಅಪಾಯ ತಂದೊಡ್ಡುವ ಅಪಾಯವನ್ನು ಗುರುತಿಸಲಾಗಿದೆ.
ಇಷ್ಟೆಲ್ಲಾ ಅವ್ಯವಸ್ಥೆಗಳ ನಡುವೆ ಹಾಲು, ಹಾಲಿನ ಉತ್ಪನ್ನಗಳು ತಯಾರಾಗುತ್ತಿದ್ದರೂ ಸುರಕ್ಷತೆಯ ಬಗ್ಗೆ ಒಕ್ಕೂಟದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಕಿಂಚಿತ್ತೂ ಗಮನ ಹರಿಸದಿರುವುದು ಕಳವಳಕಾರಿ ಸಂಗತಿಯಾಗಿದೆ. ಇದೀಗ ಹಾಲು ಮತ್ತು ಹಾಲಿನ ಉತ್ಪನ್ನಗಳ ಸುರಕ್ಷತೆಯನ್ನೇ ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ.
ಎಫ್‌ಎಸ್‌ಎಸ್‌ಎಐ ಪರವಾನಗಿ ಇಲ್ಲ:
ಜಿಲ್ಲಾ ಅಂಕಿತ ಅಧಿಕಾರಿಗಳು ಹಾಲು, ಹಾಲಿನ ಉತ್ಪನ್ನಗಳ ಘಟಕದೊಳಗಿನ ಅವ್ಯವಸ್ಥೆ, ಹಾಲಿನ ಪುಡಿ ಕಲಬೆರಕೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಕೇಂದ್ರ ಸುರಕ್ಷತಾ ಅಧಿಕಾರಿಗಳ ತಂಡ (ಎಫ್‌ಎಸ್‌ಎಸ್‌ಎಐ)ಕ್ಕೆ ನೀಡಿದ್ದಾರೆ. ಅದರಂತೆ ದಕ್ಷಿಣ ವಲಯ ವ್ಯಾಪ್ತಿಯ ಕೇಂದ್ರ ಆಹಾರ ಸುರಕ್ಷತಾ ಅಧಿಕಾರಿಗಳಾದ ಡಾ.ಸಿ.ಜಿ.ಹರ್ಷಿತಾ, ಡಾ.ವಾಂಗದರೆ ಸಚಿನ್ ಸುಭಾಷ್, ಡಾ.ಕೆ.ಜೆ.ಟೀನಾ ಅವರ ತಂಡ ಮನ್‌ಮುಲ್ ಕಚೇರಿಗೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿ ಮಾಹಿತಿ ಸಂಗ್ರಹಿಸಿದೆ.
ಹೈಕೋರ್ಟ್‌ನಿಂದ ಆಡಳಿತ ಮಂಡಳಿ ತಡೆಯಾಜ್ಞೆ:
ಆದರೆ, ಹಾಲು ಒಕ್ಕೂಟದ ವಿರುದ್ಧ ಮೊಕದ್ದಮೆ ದಾಖಲಿಸದಂತೆ ಮನ್‌ಮುಲ್ ಆಡಳಿತ ಮಂಡಳಿ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದೆ. ಇದರ ವಿಚಾರಣೆ ಅ.೧೨ರಂದು ನಿಗದಿಯಾಗಿದೆ. ಹಾಲು ಒಕ್ಕೂಟಗಳಿಗೆ ಕೇಂದ್ರ ಎಫ್‌ಎಸ್‌ಎಸ್‌ಎಐ ಪರವಾನಗಿ ನೀಡುವ ಕಾರಣ ಮೊಕದ್ದಮೆ ದಾಖಲಿಸುವ ಅಧಿಕಾರವನ್ನು ಹೊಂದಿದೆ. ಸೆಂಟ್ರಲ್ ಲೈಸೆನ್ಸಿಂಗ್ ಅಥಾರಿಟಿಯಿಂದ ಅನುಮತಿ ದೊರಕಿದ ಬಳಿಕ ಹೊಸದಾಗಿ ಮೊಕದ್ದಮೆ ದಾಖಲಿಸಲು ನಿರ್ಧರಿಸಲಾಗಿದೆ. ಹಾಲಿನಪುಡಿಯನ್ನು ದಾಸ್ತಾನು ಮಾಡಿದ್ದ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಮೆ.ಇನ್ಸುಲೇಷನ್ ಗೋದಾಮಿನ ವಿರುದ್ಧ ಮೊಕದ್ದಮೆ ದಾಖಲಿಸಲು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಮಂಡಳಿಲಾಖೆ ಉಪ ಆಯುಕ್ತರು ಮತ್ತೆ ಅನುಮತಿ ನೀಡಿದ್ದಾರೆ.