ಕನ್ನಡಪ್ರಭ ವಾರ್ತೆ ಶಿವಮೊಗ್ಗ
ತುಂಗಾ-ಭದ್ರಾ ನದಿಯು ನಮ್ಮ ಮಲೆನಾಡಿನ ಜೀವನದಿಯಾಗಿದೆ. ದೈವದತ್ತವಾಗಿ ನಮಗೆ ದೊರಕಿರುವ ಎರಡು ಪ್ರಮುಖ ನದಿಗಳಾಗಿದೆ. ಆಧುನೀಕರಣ ಮತ್ತು ಕೈಗಾರಿಕರಣದಿಂದ ನದಿಯ ಪಾವಿತ್ರತೆ ಹದಗೆಡುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ದೆಹಲಿಯ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಹಾಗೂ ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ ಸಹಯೋಗದಲ್ಲಿ ‘ಶೃಂಗೇರಿಯಿಂದ-ಕಿಷ್ಕಿಂದೆವರೆಗೆ’ ನಡೆಯುತ್ತಿರುವ ‘ನಿರ್ಮಲ ತುಂಗಾ-ಭದ್ರಾ ಅಭಿಯಾನ-ಬೃಹತ್ ಜಲ ಜಾಗೃತಿ, ಬೃಹತ್ ಜನ ಜಾಗೃತಿ ಅಭಿಯಾನದ ಪಾದಯಾತ್ರೆ ನಗರಕ್ಕೆ ಆಗಮಿಸಿದ್ದು ಇದರ ಅಂಗವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಪ್ರಬುದ್ಧರ ಸಭೆ’ಯಲ್ಲಿ ಅವರು ಮಾತನಾಡಿದರು.
ಮನುಷ್ಯನ ತಪ್ಪಿನಿಂದಾಗಿ ನದಿಯು ಮಲಿನಗೊಳ್ಳುತ್ತಿದೆ. ಪವಿತ್ರ ಜಲವನ್ನು ಸಂರಕ್ಷಿಸಿ ಮಲಿನ ಮುಕ್ತ ನದಿಯನ್ನಾಗಿ ಮಾಡುವುದು ಈ ಮೂಲಕ ಭವಿಷ್ಯದ ಉತ್ತಮ ದಿನಗಳನ್ನು ರಕ್ಷಿಸುವುದು ಅಭಿಯಾನದ ಮೂಲ ಉದ್ದೇಶವಾಗಿದೆ. ನಮ್ಮ ರಾಜ್ಯದಲ್ಲಿ ಪಾದಯಾತ್ರೆಯ ಮಹತ್ವ ನೀಡಲಾಗಿದೆ. ಪಾದಯಾತ್ರೆಗಳ ಇತಿಹಾಸದಲ್ಲಿ ನಿರ್ಮಲ ತುಂಗಾ ಅಭಿಯಾನ ಸೇರಿಕೊಳ್ಳಲಿದೆ ಎಂದರು.ನಮ್ಮ ಕರ್ತವ್ಯವನ್ನು ನೆನಪಿಸುವ ಕೆಲಸವನ್ನು ಅಭಿಯಾನ ಮಾಡುತ್ತಿದೆ. ನಾವೆಲ್ಲ ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸಿ ಪರಿಸರ ಉಳಿಸಬೇಕಿದೆ. ಕೊಲ್ಲೂರಿನ ತ್ಯಾಜ್ಯವನ್ನು ಸೀತಾ ನದಿಗೆ ಬಿಡಲಾಗುತ್ತಿತ್ತು. 80 ಕೋಟಿ ವೆಚ್ಚದಲ್ಲಿ ಎಸ್‌ಟಿಪಿ ಘಟಕ ಸ್ಥಾಪಿಸಿ, ಪರಿಸರ ಉಳಿಸಿದ್ದೇನೆ. ಕಳೆದ ಹತ್ತು ವರ್ಷಗಳಲ್ಲಿ ಪರಿಸರದ ಮೇಲಿನ ದಬ್ಬಾಳಿಕೆ ತಡೆಯಲು ಯೋಜನೆ ರೂಪಿಸಿದ್ದೇವೆ. ಕೇಂದ್ರ, ರಾಜ್ಯದ ಸಹಯೋಗದಲ್ಲಿ ಸಂಪೂರ್ಣ ಯುಜಿಡಿ ಮಾಡಲು ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು.
ನಗರದಲ್ಲಿ ಯುಜಿಡಿ ಇದ್ದರೂ ಮನೆ ಸಂಪರ್ಕ ತೆಗೆದುಕೊಳ್ಳಲು ಯೋಚನೆ ಮಾಡಿದ ಹಲವರು ಇದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಇದಕ್ಕಾಗಿ ಸಹಾಯಧನವನ್ನು ನೀಡಲಾಗುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ನಿರ್ಮಲ ತುಂಗಾ ಭದ್ರಾ ಆಭಿಯಾನದಲ್ಲಿ ಭಾಗಿಯಾಗಲು ಆಗಮಿಸಿರುವುದು ನನ್ನ ಪುಣ್ಯ ಎಂದರು.ಕೆ.ಎನ್.ಗೋವಿಂದಚಾರ್ಯ ರಾಜಕೀಯದಿಂದ ಸನ್ಯಾಸ ಸ್ವೀಕರಿಸಿ ಸಮಾಜ ಸೇವೆಗೆ ಮುಡಿಪಿಟ್ಟರು. ಹರಿದ್ವಾರದಿಂದ ಗಂಗಾ ಸಾಗರವರೆಗೆ ಯಾತ್ರೆ ನಡೆಸಿದೆವು. ಆಗ ಗಂಗೆಯನ್ನು ಈಗಲೂ ಸ್ವಚ್ಛ ಮಾಡಬಹುದು ಎಂದು ಅನ್ನಿಸಿತು. ಈ ಬಗ್ಗೆ ಹೋರಾಟವಲ್ಲ ಸಂವಾದ ಮಾಡೋಣ ಎನ್ನಿಸಿತು. ಆಗ ಗೋವಿಂದಚಾರ್ಯರು ಪಾದಯಾತ್ರೆ ನಡೆಸಿದರು. ಇದರಲ್ಲಿ ಕರ್ನಾಟಕದ ಹಲವು ಯುವಕರು ಭಾಗವಹಿಸಿದ್ದರು. ಆಗ ಗಂಗಾ ಸ್ನಾನ, ತುಂಗಾ ಪಾನ ಎಂಬ ಘೋಷಣೆ ಕೂಗಿದವು. ಆಗ ಎಲ್ಲರಿಗೂ ತುಂಗೆಯ ಬಗ್ಗೆ ತಿಳಿಯಿತು ಎಂದು ಹೇಳಿದರು.
ಯಮುನಾ ದೆಹಲಿ ಪ್ರವೇಶಿಸುತ್ತಿದ್ದಂತೆ ಮಲಿನವಾಗುತ್ತದೆ. ಚರಂಡಿ ನೀರು ಸೇರುತ್ತದೆ. ಇದಕ್ಕೆ ಸರ್ಕಾರವನ್ನು ದೂಷಣೆ ಮಾಡಲು ಸಾಧ್ಯವಿಲ್ಲ. ಸಮಾಜದವರು ಈ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ನದಿ ಸ್ವಚ್ಛತೆ ವಿಷಯದಲ್ಲಿ ರಾಜಕೀಯ ತರಬಾರದು. ಆಡಳಿತ ಪಕ್ಷದ ಸದಸ್ಯರೂ ಇದರಲ್ಲಿ ಭಾಗವಹಿಸಬೇಕು ಎಂದು ಹೇಳಿದರು.