ಸಾರಾಂಶ
ಭಾನುವಾರ ಪ್ರಧಾನಿ ಮೋದಿ ನಗರಕ್ಕೆ ಆಗಮನದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧೆಡೆ 35 ಕ್ಕೂ ಅಧಿಕ ಬೀದಿ ನಾಯಿಗಳನ್ನು ಬಿಬಿಎಂಪಿ ಸೆರೆ ಹಿಡಿದಿದೆ.
ಬೆಂಗಳೂರು : ನಮ್ಮ ಮೆಟ್ರೋ 3ನೇ ಹಂತದ ಯೋಜನೆ ಶಂಕುಸ್ಥಾಪನೆ, ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಹಾಗೂ ಮೂರು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ಕಾರ್ಯಕ್ರಮಕ್ಕೆ ಭಾನುವಾರ ಪ್ರಧಾನಿ ಮೋದಿ ನಗರಕ್ಕೆ ಆಗಮನದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧೆಡೆ 35 ಕ್ಕೂ ಅಧಿಕ ಬೀದಿ ನಾಯಿಗಳನ್ನು ಬಿಬಿಎಂಪಿ ಸೆರೆ ಹಿಡಿದಿದೆ.
ಭಾನುವಾರ ಈ ಮೂರು ಕಾರ್ಯಕ್ರಮ ನಡೆಯುವ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಬೀದಿ ನಾಯಿಗಳನ್ನು ಬಂಧಿಸುವ ಕಾರ್ಯ ಮಾಡಲಾಗಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಆವರಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ 20 ಬೀದಿ ನಾಯಿ, ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣದ ಸುತ್ತಮುತ್ತಲಿನ 5 ಬೀದಿ ನಾಯಿ, ಎಲೆಕ್ಟ್ರಾನಿಕ್ ಸಿಟಿಯ ಹೆಲಿಪ್ಯಾಡ್ ಬಳಿಯ 10 ಬೀದಿ ನಾಯಿಗಳನ್ನು ಪಾಲಿಕೆ ಪಶುಪಾಲನೆ ವಿಭಾಗದಿಂದ ಸೆರೆ ಹಿಡಿಯಲಾಗಿದೆ.
ಸೋಮವಾರ ಬಿಡುಗಡೆ
ಶುಕ್ರವಾರ ಮತ್ತು ಶನಿವಾರ ಬೀದಿ ನಾಯಿಗಳನ್ನು ಸೆರೆ ಹಿಡಿಯಲಾಗುತ್ತಿದೆ. ಸೆರೆ ಹಿಡಿದ ಬೀದಿ ನಾಯಿಗಳ ಪೈಕಿ ಸಂತಾನಹರಣ ಚಿಕಿತ್ಸೆ ಆಗದಿರುವ ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿ ಆ್ಯಂಟಿ ರೇಬಿಸ್ ಲಸಿಕೆ ಸೇರಿದಂತೆ ವಿವಿಧ ಲಸಿಕೆ ಹಾಕಲಾಗುವುದು. ಪ್ರಧಾನಿ ಸಮಾರಂಭ ಮುಕ್ತಾಯಗೊಂಡ ಬೀದಿ ನಾಯಿಗಳು ಆಯಾ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಬಿಡುವ ಕೆಲಸ ಮಾಡಲಾಗುವುದು. ಬಂಧಿಸಿದ ಅವಧಿಯಲ್ಲಿ ಬೀದಿ ನಾಯಿಗಳಿಗೆ ಆಹಾರ, ಅಗತ್ಯವಿರುವ ಚಿಕಿತ್ಸೆ ನೀಡುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ನಿಮ್ಮ ನಾಯಿ ಹಿಡಿದಿದ್ದರೆ ವಲಯ ಎಡಿ ಸಂಪರ್ಕಿಸಿ
ಪ್ರಧಾನಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಾಯಿ ಹಿಡಿಯಲಾಗುತ್ತಿದೆ. ಒಂದು ವೇಳೆ ನಿಮ್ಮ ನಾಯಿ ಹಿಡಿದಿದ್ದರೆ ಆ ಬಗ್ಗೆ ಪರಿಶೀಲನೆಗಾಗಿ ಆಯಾ ವಲಯ ಪಶುಪಾಲನೆ ವಿಭಾಗದ ಉಪ ನಿರ್ದೇಶಕರನ್ನು ಸಂಪರ್ಕಿಸುವಂತೆ ಬಿಬಿಎಂಪಿ ತಿಳಿಸಿದೆ.
ಸುಣ್ಣ, ಬಣ್ಣ, ರಸ್ತೆ ಡಾಂಬರ್
ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌ನ ಪುಟ್ಫಾತ್ ಮೇಲಿದ್ದ ವ್ಯಾಪಾರಿಗಳನ್ನು ತೆರವುಗೊಳಿಸಲಾಗಿದೆ. ಆನಂದ್‌ರಾವ್ ವೃತ್ತದ ಫ್ಲೈಓವರ್ ಮೇಲ್ಭಾಗದಲ್ಲಿ ಮಾತ್ರ ಬಣ್ಣ ಬಳಿಯಲಾಗಿದೆ. ಪ್ರಧಾನಿ ಸಾಗುವ ಮಾರ್ಗದಲ್ಲಿ ರಸ್ತೆ, ವೃತ್ತದಲ್ಲಿ ಗುಂಡಿ ಮುಚ್ಚಲಾಗಿದ್ದು, ಅಗತ್ಯವಿರುವ ಕಡೆ ಇಡೀ ರಸ್ತೆಗೆ ಡಾಂಬರೀಕರಣ ಮಾಡಲಾಗಿದೆ. ವಿಶೇಷವಾದ ಅನುದಾನ ಬಳಕೆ ಮಾಡಿ ಕಾಮಗಾರಿ ಮಾಡಿಲ್ಲ. ನಿಗದಿತ ವೆಚ್ಚದಲ್ಲಿ ಕಾಮಗಾರಿ ಮಾಡಲಾಗಿದೆ ಎಂದು ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ರಾಘವೇಂದ್ರ ಪ್ರಸಾದ್ ಮಾಹಿತಿ ನೀಡಿದ್ದಾರೆ.