ರೈತರ ಜಮೀನುಗಳಿಗೆ ನುಗ್ಗಿದ ನದಿ ನೀರು

KannadaprabhaNewsNetwork |  
Published : Aug 03, 2024, 12:31 AM IST
(2ಎನ್.ಆರ್.ಡಿ4 ನದಿ ಹತ್ತಿರದ ಗ್ರಾಮದ ರೈತರ ಬೆಳೆಗಳಲ್ಲಿ ನದಿಯ ನೀರು ನುಗ್ಗಿ ಬೆಳೆ ಜಲಾವೃತವಾಗಿದ್ದಾವೆ.)  | Kannada Prabha

ಸಾರಾಂಶ

ಕೃಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ನದಿ ನೀರಿನ ಪ್ರಮಾಣ ಕಡಿಮೆಯಾದ ತಕ್ಷಣ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಹಾನಿಯಾದ ಬೆಳೆಗಳಿಗೆ ಸರ್ಕಾರದಿಂದ ಪರಿಹಾರ ಕೊಡಿಸಬೇಕು

ನರಗುಂದ: ಮಲಪ್ರಭಾ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ನದಿಗೆ ಬಿಟ್ಟ ಹಿನ್ನೆಲೆ ರೈತರ ಜಮೀನುಗಳಿಗೆ ನದಿ ನೀರು ನುಗ್ಗಿದ ಪರಿಣಾಮ ಹೆಚ್ಚಿನ ಬೆಳೆಗಳು ಜಲಾವೃತವಾಗಿವೆ.

ಕಳೆದ ವರ್ಷದ ಭೀಕರ ಬರಗಾಲದಿಂದ ರೈತರ ಸಮುದಾಯ ತೀವ್ರ ಸಂಕಷ್ಟದಲ್ಲಿದ್ದು, ಈ ವರ್ಷವಾದರೂ ಮುಂಗಾರು ಮಳೆ ಉತ್ತಮವಾಗಿದೆ ಎಂದು ಸಾಲ ಮಾಡಿ ಬಿತ್ತನೆ ಮಾಡಿ ಬಂಫರ್‌ ಬೆಳೆ ತೆಗೆಯಬೇಕು ಎನ್ನುವ ರೈತರ ಕನಸ್ಸಿಗೆ ಹೆಚ್ಚುವರಿ ನದಿ ನೀರು ಭಗ್ನಗೊಳಿಸಿದೆ.ಸದ್ಯ ಜಲಾಶಯ ಭರ್ತಿಯಾಗಿ 15 ಸಾವಿರ ಕ್ಯುಸೆಕ್‌ ಹೆಚ್ಚುವರಿ ನೀರನ್ನು ಮಲಪ್ರಭಾ ನದಿಗೆ ಬಿಟ್ಟಿದ್ದರಿಂದ ಅಕ್ಕಪಕ್ಕದ ಗ್ರಾಮಗಳಾದ ಲಖಮಾಪುರದಲ್ಲಿ 100, ಬೆಳ್ಳೇರಿಯಲ್ಲಿ 40, ವಾಸನದಲ್ಲಿ 150, ಕೊಣ್ಣೂರಿನಲ್ಲಿ 300, ಬೂದಿಹಾಳದಲ್ಲಿ 200, ಕಲ್ಲಾಪುರದಲ್ಲಿ 40, ಶಿರೋಳದಲ್ಲಿ 45, ಸೇರಿದಂತೆ ಒಟ್ಟು 900 ಎಕರೆ ಜಮೀನುಗಳ ಬೆಳೆಗಳು ಜಲಾವೃತವಾಗಿದೆ ಎಂದು ಕಂದಾಯ ನಿರೀಕ್ಷಕ ಜಿ.ವೈ. ಕಳಸನ್ನವರ ತಿಳಿಸಿದ್ದಾರೆ.

ಕಳೆದ ವರ್ಷದ ಬರಗಾಲದಿಂದ ರೈತರು ತೊಂದರೆಯಲ್ಲಿದ್ದು, ಕೃಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ನದಿ ನೀರಿನ ಪ್ರಮಾಣ ಕಡಿಮೆಯಾದ ತಕ್ಷಣ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಹಾನಿಯಾದ ಬೆಳೆಗಳಿಗೆ ಸರ್ಕಾರದಿಂದ ಪರಿಹಾರ ಕೊಡಿಸಬೇಕು ಎಂದು ಜಿಲ್ಲಾ ರೈತ ಸಂಘಟನೆ ಹಾಗೂ ಹಸಿರು ಸೇನೆ ಅಧ್ಯಕ್ಷ ಬಸವರಾಜ ಸಾಬಳೆ ಆಗ್ರಹಿಸಿದ್ದಾರೆ. ಜಲಾಶಯದಿಂದ ಬಿಟ್ಟ ಹೆಚ್ಚುವರಿ ನೀರು ಈಗ ಸ್ವಲ್ಪ ಪ್ರಮಾಣದಲ್ಲಿ ಬರುತ್ತಿದ್ದು, ಇನ್ನು ಹೆಚ್ಚಿನ ನೀರು ನದಿಗೆ ಬರುವ ಲಕ್ಷಣ ಕಂಡು ಬರುತ್ತದೆ, ಆದ್ದರಿಂದ ನದಿ ನೀರು ಹರಿಯುವ ಕಡಿಮೆಯಾದ ನಂತರ ರೈತರ ಜಮೀನುಗಳಿಗೆ ಭೇಟಿ ನೀಡಿ ಹಾನಿಯಾದ ಬೆಳೆ ಮಾಹಿತಿ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಹಸೀಲ್ದಾರ್‌ ಶ್ರೀಶೈಲ ತಳವಾರ ತಿಳಿಸಿದ್ದಾರೆ.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ