ಕನ್ನಡಪ್ರಭ ವಾರ್ತೆ ಖಾನಾಪುರ
ಲೋಂಡಾ ಅರಣ್ಯದ ಸಾತನಾಳಿ-ಮಾಚಾಳಿ-ಮಾಂಜಪಪೈ ಗ್ರಾಮಗಳ ಮಧ್ಯೆ ಪಾಂಡರಿ ನದಿಯಲ್ಲಿ ಪ್ರವಾಹ ಸ್ಥಿತಿ ಉಂಟಾಗಿದ್ದು, ಈ ಗ್ರಾಮಗಳು ಮುಖ್ಯ ವಾಹಿನಿಯಿಂದ ಸಂಪರ್ಕ ಕಡಿದುಕೊಂಡಿವೆ. ಮಲಪ್ರಭಾ ನದಿಯ ಬ್ರಿಡ್ಜ್ ಕಂ ಬ್ಯಾರೇಜ್ ಗಳ ಮೇಲೆ ನೀರು ಹರಿಯುತ್ತಿರುವ ಕಾರಣ ಚಿಕ್ಕಹಟ್ಟಿಹೊಳಿ-ಚಿಕ್ಕಮುನವಳ್ಳಿ, ಕುಪ್ಪಟಗಿರಿ-ಕರಂಬಳ, ಅಸೋಗಾ-ಭೋಸಗಾಳಿ, ಮೋದೆಕೊಪ್ಪ-ಕೌಲಾಪುರವಾಡಾ ಚಿಕಲೆ ಮತ್ತು ಘೋಸೆ ಗ್ರಾಮಗಳ ಮಧ್ಯೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಭೀಮಗಡ ಅಭಯಾರಣ್ಯದ ದೇಗಾಂವ-ಹೆಮ್ಮಡಗಾ ಮತ್ತು ಪಾಲಿ-ಮೆಂಡಿಲ್, ನೇರಸಾ-ಗವ್ವಾಳಿ, ಅಮಗಾಂವ-ಚಿಕಲೆ ಗ್ರಾಮಗಳ ನಡುವಿನ ರಸ್ತೆ ಮತ್ತು ಸೇತುವೆಯ ಮೇಲೆ ಹಲವು ಅಡಿಗಳಷ್ಟು ನೀರು ಹರಿಯುತ್ತಿದೆ.ಸೋಮವಾರದವರೆಗೆ ಕಣಕುಂಬಿಯಲ್ಲಿ ೧೨.೨ ಸೆಂ.ಮೀ, ಖಾನಾಪುರ ಪಟ್ಟಣ, ಲೋಂಡಾ, ನಾಗರಗಾಳಿಯಲ್ಲಿ ೬.೫ ಸೆಂ.ಮೀ, ಜಾಂಬೋಟಿ, ಖಾನಾಪುರ, ಅಸೋಗಾಗಳಲ್ಲಿ ಸರಾಸರಿ ೫ ಸೆಂ.ಮೀ ಮತ್ತು ಸರಾಸರಿ ೨ ಸೆಂ.ಮೀ ಪ್ರಮಾಣದಲ್ಲಿ ಮಳೆಯಾಗಿದೆ.