ಮೂಲಭೂತ ಸೌಕರ್ಯಕ್ಕಾಗಿ ರಸ್ತೆ ತಡೆ

KannadaprabhaNewsNetwork |  
Published : Apr 10, 2026, 01:45 AM IST
ಮೂಲಭೂತ ಸೌಕರ್ಯಕ್ಕಾಗಿ ಲೋಹಿಯಾ ನಗರ ನಿವಾಸಿಗಳು ಗುರುವಾರ ಕಲಘಟಗಿ ರಸ್ತೆ ಬಂದ್‌ ಮಾಡಿ ಪ್ರತಿಭಟಿಸಿದರು. | Kannada Prabha

ಸಾರಾಂಶ

ಕಲಘಟಗಿ ರಸ್ತೆಯಲ್ಲಿ ಖಾಲಿ ಕೊಡ ಹಿಡಿದು ಕುಳಿತ ಮಹಿಳೆಯರು ಹಾಗೂ ರಸ್ತೆಗೆ ಅಡ್ಡಿಗಟ್ಟಿ ನಿಂತ ಪುರುಷರು ಸುಮಾರು ಹೊತ್ತು ರಸ್ತೆ ಬಂದ್‌ ಮಾಡಿ ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿದರು.

ಧಾರವಾಡ:

ಒಂದೂವರೆ ದಶಕದಿಂದ ಕುಡಿಯುವ ನೀರು, ರಸ್ತೆ, ಗಟಾರು ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯವಿಲ್ಲದೇ ಬೇಸತ್ತ ಇಲ್ಲಿಯ ವಾರ್ಡ್‌ ನಂಬರ್‌ 19ರ ಲೋಹಿಯಾ ನಗರದ ನಿವಾಸಿಗಳು ಗುರುವಾರ ನ್ಯಾಯಕ್ಕಾಗಿ ಬೀದಿಗೆ ಇಳಿದು ಪ್ರತಿಭಟಿಸಿದರು.

ಲೋಹಿಯಾ ನಗರ ನಿವಾಸಿಗಳ ಆಕ್ರೋಶದ ಫಲವಾಗಿ ಧಾರವಾಡ-ಕಲಘಟಗಿ ರಸ್ತೆ ಹಲವು ಗಂಟೆ ಬಂದ್ ಆಗಿ ಸಾರ್ವಜನಿಕರು ಪರದಾಡುವಂತಾಯಿತು. ಜೊತೆಗೆ ಈ ಪ್ರತಿಭಟನೆಯು ಮಹಾನಗರ ಪಾಲಿಕೆಗೂ ಬಿಸಿ ಮುಟ್ಟಿಸಿತು.

ಕಲಘಟಗಿ ರಸ್ತೆಯಲ್ಲಿ ಖಾಲಿ ಕೊಡ ಹಿಡಿದು ಕುಳಿತ ಮಹಿಳೆಯರು ಹಾಗೂ ರಸ್ತೆಗೆ ಅಡ್ಡಿಗಟ್ಟಿ ನಿಂತ ಪುರುಷರು ಸುಮಾರು ಹೊತ್ತು ರಸ್ತೆ ಬಂದ್‌ ಮಾಡಿ ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿದರು. ಲೋಹಿಯಾ ನಗರ ಧಾರವಾಡ-ಕಲಘಟಗಿ ರಸ್ತೆಯಿಂದ ಬರೀ ಒಂದು ಕಿ.ಮೀ. ಅಂತರದಲ್ಲಿದೆ. 15 ವರ್ಷಗಳ ಹಿಂದೆ ಹುಡಾ ನಿರ್ಮಿಸಿಕೊಟ್ಟ ಅಧಿಕೃತ ಬಡಾವಣೆ ಇದು. ಇಲ್ಲಿಯ ನಿವಾಸಿಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲ. ರಸ್ತೆ, ವಿದ್ಯುದೀಪ, ಕುಡಿಯುವ ನೀರು, ಚರಂಡಿ ಏನೂ ಇಲ್ಲ. ಈ ಬಗ್ಗೆ ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಸದಸ್ಯರು ಸೇರಿದಂತೆ ಹುಡಾ ಅಧಿಕಾರಿಗಳಿಗೂ ಮನವಿ ಸಲ್ಲಿಸಿ ಬೇಸತ್ತು ಪ್ರತಿಭಟಿಸುತ್ತಿದ್ದೇವೆ ಎಂದು ಸ್ಥಳೀಯರಾದ ಸಂದೀಪ ಭಜಂತ್ರಿ ತಮ್ಮ ಆಕ್ರೋಶ ಹೊರಹಾಕಿದರು.

ಸ್ಥಳಕ್ಕೆ ಹುಡಾ ಆಯುಕ್ತ ದೇವರಾಜ ಹಾಗೂ ಪಾಲಿಕೆ ವಲಯ ಆಯುಕ್ತ ಶಂಕರ ಪಾಟೀಲ್ ಆಗಮಿಸಿ, ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು. ಆದಷ್ಟು ಬೇಗನೇ ಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡಿದ ಬಳಿಕ ಹೋರಾಟಗಾರರು ಪ್ರತಿಭಟನೆ ಕೈ ಬಿಟ್ಟರು. ಬಡಾವಣೆ ನೂರಾರು ನಿವಾಸಿಗಳಿದ್ದರು. ಜನರ ಸಂಕಷ್ಟದ ಬಗ್ಗೆ ಕನ್ನಡಪ್ರಭ ವರದಿಹುಡಾ-ಪಾಲಿಕೆ ಮಧ್ಯೆ ಲೋಹಿಯಾ ನಗರ ಅತಂತ್ರ ಶೀರ್ಷಿಕೆಯಲ್ಲಿ ಏ. 6ರಂದು ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿ ಜನರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಸ್ವ-ವಿವರವಾಗಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಲ ಬಿಚ್ಚಿದರೆ ಹುಷಾರು!
ವಾಣಿಜ್ಯ ವಿಭಾಗಕ್ಕೆ ಮೂವರು ಫಸ್ಟ್‌ ರ್‍ಯಾಂಕ್‌