;Resize=(412,232))
ಬೆಂಗಳೂರು : ಮುಂಬೈ ಮಾದರಿಯಲ್ಲಿ ಪ್ರಮುಖ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ ಮಾಡುವವರಿಗೇ ಅದೇ ರಸ್ತೆಯ ತ್ಯಾಜ್ಯ ನಿರ್ವಹಣೆ ಹೊಣೆ ನೀಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಜನರು ತಮಗೆ ಇರುವ ಅವಕಾಶವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇನ್ನಾದರೂ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ನಿಲ್ಲಿಸಬೇಕು. ಜನರು ಸ್ವಚ್ಛ ಬೆಂಗಳೂರು ನಿರ್ಮಾಣಕ್ಕೆ ಸಹಕಾರ ನೀಡಬೇಕು. ಮುಂಬೈನಲ್ಲಿ ಪ್ರಮುಖ ರಸ್ತೆ ಕಾಮಗಾರಿ ಮತ್ತು ನಿರ್ವಹಣೆ ಮಾಡುವ ಗುತ್ತಿಗೆದಾರರಿಗೇ ಆ ರಸ್ತೆ ಬದಿ ಶೇಖರಣೆಯಾಗುವ ಕಸ ವಿಲೇವಾರಿ ಮಾಡುವ ಜವಾಬ್ದಾರಿ ನೀಡಲಾಗಿದೆ ಎಂಬ ಮಾಹಿತಿಯಿದೆ. ಅದನ್ನೇ ಬೆಂಗಳೂರಿನಲ್ಲಿ ಜಾರಿಗೊಳಿಸುವ ಕುರಿತು ಆಲೋಚನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಹೈದರಾಬಾದ್ ಸೇರಿದಂತೆ ಇತರ ಕಡೆಗಳಲ್ಲಿ 10 ವರ್ಷಗಳ ಕಾಲ ಬಾಳಿಕೆ ಬರುವ ಡಾಂಬರು ರಸ್ತೆ ತಂತ್ರಜ್ಞಾನ ಬಳಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿನ ರಸ್ತೆ ಗುಂಡಿ ಹಾಗೂ ನಿರ್ವಹಣೆ ಸಮಸ್ಯೆಯನ್ನು ನಿವಾರಿಸಲು ಆ ತಂತ್ರಜ್ಞಾನ ಬಳಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಕಾಮಗಾರಿಗೆ ಅಗತ್ಯವಿರುವ ಯಂತ್ರಗಳು ಸಾಕಷ್ಟು ದುಬಾರಿಯಾದ ಕಾರಣಕ್ಕೆ ಕನಿಷ್ಠ ಹತ್ತು ಕಿಲೋಮೀಟರ್ ಕಾಮಗಾರಿಗೆ ಅವಕಾಶ ನೀಡಬೇಕು ಎಂದು ಈ ತಂತ್ರಜ್ಞಾನ ಹೊಂದಿರುವವರು ತಿಳಿಸಿದ್ದಾರೆ. ಅದರ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.
ನಗರದಲ್ಲಿನ ಕಸದ ಸಮಸ್ಯೆ ನಿವಾರಣೆಗೆ ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ನಿಯಂತ್ರಿಸಲು ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಸಾಕಷ್ಟು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಗುರುತಿಸಿ ಅವರ ಮನೆ ಮುಂದೆಯೇ ಅದೇ ಕಸ ಸುರಿದು ಬುದ್ಧಿವಾದ ಹೇಳುವ ಕೆಲಸ ಮಾಡಲಾಗುತ್ತಿದೆ. ಕಸ ಎಸೆಯುವವರಿಗೆ ದಂಡ ವಿಧಿಸುವ ಕೆಲಸವೂ ನಡೆಯುತ್ತಿದೆ ಎಂದರು.
ಕಸದ ಸಮಸ್ಯೆ ಇದ್ದರೆ ಸೂಚಿತ ದೂರವಾಣಿ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಬಹುದು. ದೇಶದಲ್ಲಿಯೇ ಅತ್ಯುತ್ತಮ ವ್ಯವಸ್ಥೆ ರೂಪಿಸಿದ್ದೇವೆ. ಎಲ್ಲಾದರೂ ಕಸ, ರಸ್ತೆ ಗುಂಡಿ ಕಂಡರೆ ನಮಗೆ ಫೋಟೋ ಹಾಗೂ ಜಾಗ ಕಳುಹಿಸುವ ಅವಕಾಶ ನೀಡಿದ್ದೇವೆ. ಎಲ್ಲ ರೀತಿಯ ಸಮಸ್ಯೆ ನಿವಾರಣೆಗೆ ಪ್ರಯತ್ನ ಮಾಡಲಾಗುತ್ತಿದೆ ಎಂದು ವಿವರಿಸಿದರು.