ಶಿವಕುಮಾರ ಕುಷ್ಟಗಿ ಗದಗ
ಜಿಲ್ಲೆಯಲ್ಲಿ ಗಾಳಿಯಂತ್ರ ಅಳವಡಿಕೆ ರೈತರ ಪಾಲಿಗೆ ಸಮಸ್ಯೆಯ ಆಗರವಾಗಿದೆ. ಅದರಲ್ಲಿಯೂ ಜಿಲ್ಲೆಯ ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿ ಹೊಸದಾಗಿ ಸ್ಥಾಪಿಸುತ್ತಿರುವ ಯಂತ್ರಗಳ ಸ್ಥಾಪನೆಗೆ ಬೇಕಾಗುವ ಸಾಮಗ್ರಿಗಳ ಸಾಗಾಟವೇ ರೈತರ ಬದುಕನ್ನು ಇನ್ನಿಲ್ಲದಂತೆ ಹಿಂಡುತ್ತಿದೆ.ಗ್ರಾಮಗಳ ಜೀವಾಳಗಳೇ ಗ್ರಾಮೀಣ ರಸ್ತೆಗಳು, ನಿತ್ಯವೂ ಪ್ರತಿಯೊಂದು ಗ್ರಾಮಗಳ ಸಾವಿರಾರು ರೈತರು ಇದೇ ರಸ್ತೆಗಳನ್ನೇ ಸಂಚಾರಕ್ಕೆ ಬಳಸುವುದು ಅನಿವಾರ್ಯ ಕೂಡಾ. ಇಷ್ಟೊಂದು ಪ್ರಾಮುಖ್ಯತೆ ಹೊಂದಿರುವ ರಸ್ತೆಗಳನ್ನು ಗಾಳಿಯಂತ್ರ ಅಳವಡಿಸುವ ಕಂಪನಿಗಳು ಕಳೆದ ನಾಲ್ಕೈದು ತಿಂಗಳಲ್ಲಿ ಸಂಪೂರ್ಣ ಹಾಳು ಮಾಡಿದೆ. ರಸ್ತೆಗಳಲ್ಲಿ ವಾಹನ ಸಂಚರಿಸಲು ಅಲ್ಲ, ಪಾದಚಾರಿಗಳೇ ಸಂಚರಿಸುವುದು ಕಷ್ಟವಾಗಿದೆ.
15 ಟನ್ ಸಾಮರ್ಥ್ಯ: ಜಿಪಂ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ರಸ್ತೆಗಳು ಕೇವಲ 15 ಟನ್ ಸಾಮರ್ಥ್ಯ ಹೊಂದಿರುತ್ತವೆ. ಜಿಪಂ ಇಲಾಖೆ ಜಿಲ್ಲಾ ರಸ್ತೆಗಳನ್ನು 15 ಟನ್ ಸಾಮರ್ಥ್ಯದ ಆಧಾರದಲ್ಲಿ ವಿನ್ಯಾಸ ಮಾಡುತ್ತದೆ. ಅದರ ಆಧಾರದಲ್ಲಿಯೇ ಗುತ್ತಿಗೆದಾರರು ರಸ್ತೆ ನಿರ್ಮಿಸುತ್ತಾರೆ. ಆದರೆ ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿ ಸದ್ಯ ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಗಳ ಭಾರೀ ಪ್ರಮಾಣದ ವಾಹನಗಳ ಸಂಚಾರದಿಂದ ಸಂಪೂರ್ಣ ಕಿತ್ತು ಹೋಗಿದೆ. ಈ ರಸ್ತೆಗಳು ನಿರ್ಮಾಣವಾಗಿ ಅದೆಷ್ಟು ವರ್ಷಗಳು ಕಳೆದಿವೆ ಎನ್ನುವಂತಾಗಿದೆ.ರಾಜ್ಯ ಹೆದ್ದಾರಿಯೂ 40 ಟನ್: ಜಿಲ್ಲಾ ರಸ್ತೆಗಳ ಸ್ಥಿತಿ ಈ ರೀತಿಯಾದರೆ ರಾಜ್ಯ ಹೆದ್ದಾರಿಗಳು 30ರಿಂದ 40 ಟನ್ ಸಾಮರ್ಥ್ಯಕ್ಕೆ ತಕ್ಕಂತೆ ನಿರ್ಮಿಸಲಾಗಿರುತ್ತದೆ. ಪ್ರಸ್ತುತ ಜಿಲ್ಲೆಗೆ ಪ್ರವೇಶ ಮಾಡುವ ಗಾಳಿಯಂತ್ರದ ವಾಹನಗಳ ಸಂಚಾರದಿಂದ ಕೇವಲ ಗ್ರಾಮೀಣ ರಸ್ತೆಗಳು ಮಾತ್ರವಲ್ಲ, ಗದಗನಿಂದ ನರೇಗಲ್ಲ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ, ಹುಬ್ಬಳ್ಳಿಯಿಂದ ರೋಣ ಮಾರ್ಗವಾಗಿ ನರೇಗಲ್ಲ ಕಲ್ಪಿಸುವ ರಾಜ್ಯ ಹೆದ್ದಾರಿ, ಗಜೇಂದ್ರಗಡದಿಂದ ನರೇಗಲ್ಲಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಗಳು ಕೆಟ್ಟು ಹೋಗಿವೆ.
50 ಟನ್ ಮೇಲ್ಪಟ್ಟ ವಾಹನ ಸಂಚಾರ: ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿ ಸದ್ಯಕ್ಕೆ 500ಕ್ಕೂ ಹೆಚ್ಚಿನ ಗಾಳಿಯಂತ್ರ ಅಳವಡಿಕೆಯಾಗುತ್ತಿದೆ. ನಿತ್ಯವೂ ಗಾಳಿಯಂತ್ರ ಕಂಪನಿಗಳಿಗೆ ಬೇಕಾಗುವ ಅತಿ ಭಾರದ ವಸ್ತುಗಳನ್ನು ಸಾಗಿಸಲಾಗುತ್ತಿದೆ. ಗ್ರಾಮಸ್ಥರು ಜೀವನದಲ್ಲಿಯೇ ನೋಡಿರದೇ ಇರುವ ಬೃಹತ್ ಗಾತ್ರದ ಲಾರಿಗಳು ಅಲ್ಲಿ ಸಂಚರಿಸುತ್ತಿವೆ. ಈ ಲಾರಿಗಳು ಕನಿಷ್ಠ ಎಂದರೆ 50 ಟನ್ ಭಾರ ಹೊತ್ತು ಸಾಗುತ್ತಿವೆ. ಅಂತಹ ಭಾರ ತಡೆದುಕೊಳ್ಳುವ ಸಾಮರ್ಥ್ಯ ಈ ರಸ್ತೆಗಳಿಗಿಲ್ಲ. ಡಾಂಬರ್ ರಸ್ತೆ ಇತ್ತು ಎನ್ನುವುದು ಕೂಡಾ ಗೊತ್ತಾಗದಷ್ಟು ಹಾಳಾಗಿ ಹೋಗಿವೆ.ಗ್ರಾಮೀಣ ರಸ್ತೆಗಳ ಸ್ಥಿತಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಆದರೆ ತಮ್ಮ ಹೊಲಗಳಿಗೆ ತೆರಳುವ ರಸ್ತೆಗಳನ್ನು ನಿತ್ಯವೂ ವ್ಯಾಪಕವಾಗಿ ಬಳಸುತ್ತಿರುವ ಹಿನ್ನೆಲೆಯಲ್ಲಿ ರೈತರ ಎತ್ತು ಚಕ್ಕಡಿ ಹಾಗೂ ಟ್ರ್ಯಾಕ್ಟರ್‌ಗಳನ್ನು ತೆಗೆದುಕೊಂಡು ಹೊಲಕ್ಕೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿಯೂ ಪ್ರಸ್ತುತ ಹೊಲದಲ್ಲಿರುವ ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ಕಟಾವು ಮಾಡಿರುವ ಬೆಳೆ, ಹಿಂಗಾರು ಹಂಗಾಮಿನ ಬಿತ್ತನೆ ಮಾಡುವುದು ಕೂಡಾ ರೈತರಿಗೆ ಕಷ್ಟಸಾಧ್ಯವಾಗಿದೆ.
ಜಿಪಂ ರಸ್ತೆಗಳು ಕೇವಲ 15 ಟನ್ ಸಾರ್ಮಥ್ಯ ಹೊಂದಿರುತ್ತವೆ. ಅಂತಹ ರಸ್ತೆಗಳ ನಿರ್ಮಾಣಕ್ಕೆ ಗುತ್ತಿಗೆ ಪಡೆದ ಗುತ್ತಿಗೆದಾರರಿಗೆ ಅದರ ನಿರ್ವಹಣೆ ಕೂಡಾ ಇರುತ್ತದೆ. ಆದರೆ ರಸ್ತೆ ನಿರ್ಮಿಸಿದ ತಿಂಗಳಲ್ಲಿಯೇ ಗಾಳಿಯಂತ್ರದ ಭಾರೀ ಗಾತ್ರದ ವಾಹನಗಳು ಸಂಚರಿಸಿ ಆ ರಸ್ತೆಗಳೆಲ್ಲ ಸಂಪೂರ್ಣ ಹಾಳಾಗಿ ಹೋಗಿದ್ದು, ಅವುಗಳನ್ನು ಪುನರ್ ನಿರ್ಮಿಸುವಂತಾಗಿದೆ. ಈಗಾಗಲೇ ಪೂರ್ಣಗೊಂಡ ಕೆಲಸ ಕಾಮಗಾರಿಗಳ ಬಿಲ್ ಬಾಕಿ ಬರದೇ ಗುತ್ತಿಗೆದಾರರು ಕಳೆದ ಒಂದೂವರೆ ವರ್ಷದಿಂದ ತೀವ್ರ ತೊಂದರೆಯಲ್ಲಿದ್ದಾರೆ. ಈಗ ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಗಳಿಂದ ಮಾಡುತ್ತಿರುವ ತಪ್ಪಿನಿಂದ ಗುತ್ತಿಗೆದಾರರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿದ್ಧು ಪಾಟೀಲ ಹೇಳಿದ್ದಾರೆ.ಗ್ರಾಮೀಣ ರಸ್ತೆಗಳನ್ನು ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಗಳು ಸಂಪೂರ್ಣ ಹಾಳು ಮಾಡಿದ್ದು, ಇದರ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಅವರು ತಮಗೆ ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ. ಕೂಡಲೇ ಈ ಕುರಿತು ತಕ್ಷಣವೇ ಗಾಳಿ ವಿದ್ಯುತ್ ಉತ್ಪಾದನಾ ಕಂಪನಿ ಅಧಿಕಾರಿಗಳೊಂದಿಗೆ ಸಭೆ ಏರ್ಪಡಿಸಬೇಕು. ಅಂದಿನ ಸಭೆಯಲ್ಲಿ ರೈತರೂ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು. ಅಂದಾಗ ಮಾತ್ರ ರೈತರ ನೈಜ ಸಮಸ್ಯೆಗಳು ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಅರ್ಥವಾಗುತ್ತದೆ ಎಂದು ಕೋಟುಮಚಗಿ ರೈತ ಮುಖಂಡ ವಿದ್ಯಾಧರ ದೊಡ್ಡಮನಿ ತಿಳಿಸಿದ್ದಾರೆ.