ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಆದೇಶ ನೀಡಿ ಆರು ತಿಂಗಳಾದರೂ ಇನ್ನೂ ನಿರ್ಮಾಣವಾಗದ ರಸ್ತೆ!

KannadaprabhaNewsNetwork |  
Published : Sep 17, 2024, 12:48 AM ISTUpdated : Sep 17, 2024, 07:37 AM IST
NPKL 1 | Kannada Prabha

ಸಾರಾಂಶ

ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿ ಬ್ಲಾಕ್‌ 5, 6 ಮತ್ತು 7 ರ ಆಂತರಿಕ ರಸ್ತೆಗಳ ಕಾಮಗಾರಿ ಆರು ತಿಂಗಳು ಕಳೆದರೂ ಆರಂಭವಾಗಿಲ್ಲ. ಮಣ್ಣಿನ ಸ್ಥಿರೀಕರಣದ ತಂತ್ರಜ್ಞಾನ ಬಳಸಿ ರಸ್ತೆ ನಿರ್ಮಾಣ ಮಾಡಲು ಟೆಂಡರ್ ನೀಡಲಾಗಿದ್ದರೂ ಕಾಮಗಾರಿ ವಿಳಂಬವಾಗುತ್ತಿದೆ.

ಸಂಪತ್‌ ತರೀಕೆರೆ

 ಬೆಂಗಳೂರು :  ನಾಡಪ್ರಭು ಕೆಂಪೇಗೌಡ ಲೇಔಟ್‌(ಎನ್‌ಪಿಕೆಎಲ್‌) ಬ್ಲಾಕ್‌ 5, 6 ಮತ್ತು 7 ರವರೆಗಿನ ಆಂತರಿಕ 30, 40, 50 ಅಡಿ ರಸ್ತೆಗಳನ್ನು ಮಣ್ಣಿನ ಸ್ಥಿರೀಕರಣದ ತಂತ್ರಜ್ಞಾನದಲ್ಲಿ ನಿರ್ಮಾಣಕ್ಕೆ ಕಾರ್ಯಾದೇಶ ನೀಡಿ ಆರು ತಿಂಗಳು ಕಳೆದಿದ್ದರೂ ಈವರೆಗೂ ಬ್ಲಾಕ್‌ 5, 6 ಕಾಮಗಾರಿಯೇ ಆರಂಭಗೊಂಡಿಲ್ಲ!

ಕೆಂಪೇಗೌಡ ಬಡಾವಣೆಯ ಎಲ್ಲಾ 9 ಬ್ಲಾಕ್‌ಗಳ ಆಂತರಿಕ ರಸ್ತೆಯನ್ನು ಮಣ್ಣಿನ ಸ್ಥಿರೀಕರಣದ (ಮಣ್ಣು, ಸಣ್ಣ ಜೆಲ್ಲಿಕಲ್ಲು, ಸಿಮೆಂಟ್‌, ರಾಸಾಯನಿಕ ಮಿಶ್ರಣ) ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲು ಯೋಜಿಸಿತ್ತು. ಮೊದಲ ಹಂತದಲ್ಲಿ 5, 6 ಮತ್ತು 7 ಬ್ಲಾಕ್‌ಗಳಲ್ಲಿರುವ ಆಂತರಿಕ ರಸ್ತೆಗಳನ್ನು ನಿರ್ಮಾಣಕ್ಕೆ 2024 ಜನವರಿಯಲ್ಲಿ ಟೆಂಡರ್‌ ಕರೆಯಲಾಗಿತ್ತು.

ಬಿಡಿಎ ಕಡಿಮೆ ವೆಚ್ಚದಲ್ಲಿ ದೀರ್ಘ ಕಾಲ ಬಾಳಿಕೆ ಬರುವ ಮಣ್ಣಿನ ಸ್ಥಿರೀಕರಣದ ತಂತ್ರಜ್ಞಾನದ ರಸ್ತೆ ನಿರ್ಮಾಣಕ್ಕೆ ಕೊಲ್ಲೂರು ಗುರುನಾಥ್‌ ಕನ್ಟ್ರಕ್ಷನ್‌ ಇನ್‌ಫ್ರಾ ಪ್ರೈವೆಟ್‌ ಕಂಪನಿ(ಬ್ಲಾಕ್‌ 5), ಬಿ.ಜಿ.ಅರವಿಂದ್‌ (ಬ್ಲಾಕ್‌ 6- ₹44.30 ಕೋಟಿ) ಮತ್ತು ಎಸ್‌.ಶರಣ್‌ಬಂಡಿ (ಬ್ಲಾಕ್‌ 7- ₹44.36 ಕೋಟಿ) ಎಂಬ ಗುತ್ತಿಗೆದಾರರಿಗೆ ಗುತ್ತಿಗೆ ನೀಡಿ ಮಾರ್ಚ್‌ನಲ್ಲಿ ಕಾರ್ಯಾದೇಶ ಕೊಟ್ಟು 9 ತಿಂಗಳಲ್ಲಿ ಪೂರ್ಣಗೊಳಿಸುವಂತೆ ನಿಯಮ ವಿಧಿಸಲಾಗಿತ್ತು.

ಈ ಪೈಕಿ ಬ್ಲಾಕ್‌ 7ರ 30, 40 ಮತ್ತು 50 ಅಡಿಯ ಆಂತರಿಕ ರಸ್ತೆಗಳ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಉಳಿದ ಬ್ಲಾಕ್‌ 5 ಮತ್ತು 6ರ ಆಂತರಿಕ ರಸ್ತೆ ಕಾಮಗಾರಿಯೇ ಪ್ರಾರಂಭವಾಗಿಲ್ಲ. ಹೀಗಾಗಿ ಮೂರು ವಿಭಿನ್ನ ಕಂಪನಿಗಳ ಹೆಸರಿನಲ್ಲಿ ಒಬ್ಬರೇ ಗುತ್ತಿಗೆ ಪಡೆದಿರಬೇಕೆಂಬ ಸಂಶಯ ಸ್ಥಳೀಯ ನಿವಾಸಿಗಳದ್ದು. ಏಕೆಂದರೆ ಬ್ಲಾಕ್‌ 7ರಲ್ಲಿ ಕಾಮಗಾರಿ ಮುಗಿದ ನಂತರ ಅದೇ ಯಂತ್ರ ಮತ್ತು ಕೆಲಸಗಾರರನ್ನು ಬ್ಲಾಕ್‌ 5, 6ರ ರಸ್ತೆ ನಿರ್ಮಾಣಕ್ಕೆ ಸ್ಥಳಾಂತರಿಸಲಾಗುತ್ತಿದೆ. ಗುತ್ತಿಗೆಯಂತೆ ಎಲ್ಲಾ 3 ಬ್ಲಾಕ್‌ಗಳ ಕೆಲಸಗಳನ್ನು ಏಕಕಾಲದಲ್ಲಿ ಮಾಡಿದ್ದರೆ ಐದಾರು ತಿಂಗಳಲ್ಲಿ ರಸ್ತೆ ಕಾಮಗಾರಿ ಮುಗಿಯಬೇಕಿತ್ತು ಎಂಬ ಅಭಿಪ್ರಾಯ ಎನ್‌ಪಿಕೆಎಲ್‌ ಮುಕ್ತ ವೇದಿಕೆಯದ್ದು.

ಇನ್ನೂ ಟೆಂಡರ್‌ ಆಗಿಲ್ಲ:

ಎನ್‌ಪಿಕೆಎಲ್‌ನಲ್ಲಿ ಇನ್ನೂ 1ರಿಂದ 4 ಮತ್ತು 8, 9 ಬ್ಲಾಕ್‌ಗಳ ಆಂತರಿಕ 30, 40, 50 ಅಡಿ ರಸ್ತೆ ಕಾಮಗಾರಿಗೆ ಟೆಂಡರ್ ಕರೆಯಬೇಕಿದೆ. ಈಗಾಗಲೇ ಟೆಂಡರ್‌ ಅಗಿರುವ 5 ಮತ್ತು 6ನೇ ಬ್ಲಾಕ್‌ ರಸ್ತೆಗಳ ಕಾಮಗಾರಿ ಆರಂಭಗೊಂಡಿಲ್ಲ. 2025ನೇ ಇಸವಿಯಲ್ಲಾದರೂ ಈ ಲೇಔಟ್‌ನಲ್ಲಿ ಮೂಲಸೌಕರ್ಯ ಕಾಮಗಾರಿ ಪೂರ್ಣಗೊಂಡು ಮನೆ ಕಟ್ಟಿಕೊಳ್ಳುವ ಕನಸು ಕಾಣುತ್ತಿರುವ ನಿವೇಶನಗಳ ಮಾಲೀಕರು, ಗುತ್ತಿಗೆದಾರರು ಮತ್ತು ಬಿಡಿಎ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಏನಿದು ಮಣ್ಣು ಸ್ಥಿರೀಕರಣ?

ಮಣ್ಣು ಸ್ಥಿರೀಕರಣ ತಂತ್ರಜ್ಞಾನದಲ್ಲಿ ಮಣ್ಣು, ಜಲ್ಲಿ, ರಾಸಾಯನಿಕ ಮತ್ತು ಸಿಮೆಂಟ್ ಅನ್ನು ಸಮತಟ್ಟಾದ ರಸ್ತೆಗಳ ಮೇಲೆ ಸುರಿಯಲಾಗುತ್ತದೆ ಮತ್ತು ರೋಲಿಂಗ್ ಮಾಡಲಾಗುತ್ತದೆ ಮತ್ತು ಡಾಂಬರೀಕರಣ ಪದರವನ್ನು ಮಾಡಿ ರಸ್ತೆ ನಿರ್ಮಿಸಲಾಗುತ್ತದೆ. ಒಬ್ಬನೇ ಗುತ್ತಿಗೆದಾರರ ಮೂರು ಟೆಂಡರ್ ಪಡೆದು ಕಾರ್ಯನಿರ್ವಹಿಸುತ್ತಿದ್ದಾನೆ ಎಂಬ ಅನುಮಾನವಿದೆ. ಕಾರ್ಯಾದೇಶವನ್ನು ಮೂರು ಕಂಪನಿಗಳಿಗೆ ಮಾರ್ಚ್‌ನಲ್ಲಿ ಕೊಟ್ಟಿದ್ದರೂ ಕೆಲಸ ಮಾತ್ರ ಬ್ಲಾಕ್‌ 7ರಲ್ಲಿ ಮಾತ್ರ ಮುಗಿಯುವ ಹಂತದಲ್ಲಿದೆ. ಉಳಿದೆರಡರಲ್ಲಿ ಯಾವುದೇ ಕೆಲಸವಾಗಿಲ್ಲ. 7ರಲ್ಲಿದ್ದ ಯಂತ್ರಗಳು ಮತ್ತು ಕೆಲಸಗಾರರು ಈಗ ಬ್ಲಾಕ್‌ 6ಕ್ಕೆ ನಿಯೋಜಿಸಲಾಗುತ್ತಿದೆ.

-ಸೂರ್ಯಕಿರಣ್‌, ಕಾರ್ಯದರ್ಶಿ, ಎನ್‌ಪಿಕೆಎಲ್‌ ಓಪನ್‌ ಫೋರಂ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಲೂರು ದೇವಸ್ಥಾನಕ್ಕೆ ಡಿಸಿ ಭೇಟಿ
ವಾಕ್, ಶ್ರವಣ ಸಮಸ್ಯೆ ಪರಿಹರಿಸುವ ಪ್ರಯಾಸ್ ಯೋಜನೆ ಮಾದರಿ