ರಸ್ತೆ ಗುಂಡಿ ಮುಚ್ಚುವ ಕಾರ್ಯ ಆರಂಭ: ಇಸ್ಮಾಯಿಲ್

KannadaprabhaNewsNetwork | Published : Dec 19, 2024 12:33 AM

ಸಾರಾಂಶ

ಕೊಪ್ಪ, ₹ ೧೩ ಲಕ್ಷ ವಿಶೇಷ ಅನುದಾನದಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿ ಗುಂಡಿ ಮುಚ್ಚಲು ಟೆಂಡರ್ ಪ್ರಕ್ರಿಯೆ ನಡೆದಿದೆ. ಮಳೆ ಕಾರಣಕ್ಕೆ ಕಾಮಗಾರಿ ಆರಂಭಿಸುವುದು ತಡವಾಗಿತ್ತು, ಈ ವಾರದಲ್ಲಿ ರಸ್ತೆ ಗುಂಡಿ ಮುಚ್ಚಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್(ಇದಿನಬ್ಬ) ತಿಳಿಸಿದರು.

ಪ.ಪಂ. ಸಭಾಂಗಣದಲ್ಲಿ ಸ್ಥಾಯಿ ಸಮಿತಿ ಸಭೆ

ಕನ್ನಡಪ್ರಭ ವಾರ್ತೆ, ಕೊಪ್ಪ

₹ ೧೩ ಲಕ್ಷ ವಿಶೇಷ ಅನುದಾನದಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿ ಗುಂಡಿ ಮುಚ್ಚಲು ಟೆಂಡರ್ ಪ್ರಕ್ರಿಯೆ ನಡೆದಿದೆ. ಮಳೆ ಕಾರಣಕ್ಕೆ ಕಾಮಗಾರಿ ಆರಂಭಿಸುವುದು ತಡವಾಗಿತ್ತು, ಈ ವಾರದಲ್ಲಿ ರಸ್ತೆ ಗುಂಡಿ ಮುಚ್ಚಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್(ಇದಿನಬ್ಬ) ತಿಳಿಸಿದರು. ಪ.ಪಂ. ಸಭಾಂಗಣದಲ್ಲಿ ಮಂಗಳವಾರ ಸ್ಥಾಯಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನೆಲ ಬಾಡಿಗೆ ಆಧಾರದಲ್ಲಿ ಮಳಿಗೆ ಪಡೆದ ಮೂಲ ಖಾತೆದಾರರು, ಬೇರೆ ವ್ಯಕ್ತಿಗಳಿಂದ ದುಪ್ಪಟ್ಟು ಹಣ ಪಡೆದು ಮಳಿಗೆಯನ್ನು ಅವರಿಗೆ ನೀಡುತ್ತಿದ್ದಾರೆ. ಇದರಿಂದ ಪಪಂಗೆ ಆರ್ಥಿಕ ನಷ್ಟವಾಗಿ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದ ಅವರು ಪಪಂನಿಂದ ನೆಲ ಬಾಡಿಗೆಗೆ ನೀಡಿದ ಮಳಿಗೆಯನ್ನು ಕೆಲವರು ಒಳಬಾಡಿಗೆ ಆಧಾರದಲ್ಲಿ ಬೇರೆ ಯವರಿಗೆ ನೀಡಿದ್ದಾರೆ. ಸರ್ವೆ ನಡೆಸಿ, ಅವುಗಳನ್ನು ಪಪಂ ಸುಪರ್ದಿಗೆ ಪಡೆಯಬೇಕು. ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಪಂಚಾಯಿತಿ ಸಿಬ್ಬಂದಿ ಮಾತನಾಡಿ, ಪಂಚಾಯಿತಿ ಆಸ್ತಿಗೆ ಇನ್ನೊಬ್ಬರು ಅಗ್ರಿಮೆಂಟ್(ಕರಾರು) ಪತ್ರ ಮಾಡಿ ವ್ಯವಹಾರ ನಡೆಸುತ್ತಿದ್ದಾರೆ ಎಂದು ಸಭೆ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಇಸ್ಮಾಯಿಲ್, ಮಳಿಗೆ ಪಡೆದ ವ್ಯಕ್ತಿ ಮೃತಪಟ್ಟಿದ್ದರೆ, ಕುಟುಂಬದವರು ಪಂಚಾಯಿತಿಗೆ ಮರಣ ಪ್ರಮಾಣಪತ್ರ ನೀಡಿ ಅನುಮತಿ ಪಡೆಯಬೇಕು. ಇಲ್ಲವಾದರೆ ಪಂಚಾಯಿತಿ ಸುಪರ್ದಿಗೆ ಪಡೆದು, ಅದನ್ನು ಅರ್ಹರಿಗೆ ನೀಡುವ ಕೆಲಸ ಮಾಡೋಣ ಎಂದರು.ಮುಖ್ಯಾಧಿಕಾರಿ ಚಂದ್ರಕಾಂತ್ ಮಾತನಾಡಿ, ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷಿದ್ಧ ಸಂಪೂರ್ಣ ಜಾರಿಯಾಗಬೇಕು. ಈ ಹಿಂದೆ ಪಂಚಾಯಿತಿಯಲ್ಲಿ ಚುನಾಯಿತ ಸದಸ್ಯರು ಇಲ್ಲದಿದ್ದಾಗ ಅಂಗಡಿಗಳ ಮೇಲೆ ದಾಳಿ ನಡೆಸಿದ್ದೆವು. ಆಗ ಕೆಲವರಿಂದ ಒತ್ತಡ ಬಂದಿತ್ತು. ತಿಂಗಳಿಗೆ 2 ಬಾರಿ ಅನಿರೀಕ್ಷಿತ ವಾಗಿ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ, ದಂಡ ಹಾಕುವ ಕ್ರಮ ಕೈಗೊಳ್ಳೋಣ. ಅದಕ್ಕೂ ಮೊದಲು ಮೈಕ್ ಪ್ರಚಾರ ನಡೆಸಿ, ಒಂದು ಬಾರಿ ತಿಳುವಳಿಕೆ ನೀಡೋಣ ಎಂದರು.ಬೀದಿ ಬದಿ ವ್ಯಾಪಾರಿಗಳಿಗೆ ಸ್ಥಳ ನಿಗದಿಪಡಿಸುವ ಬಗ್ಗೆ, ಪಪಂ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಉದ್ದಿಮೆ ಪರವಾನಗಿಗಳಿಗೆ ಅದಾಲತ್ ಮೂಲಕ ವಿಲೇಪಡಿಸುವ ಬಗ್ಗೆ, ಪಂಚಾಯತಿ ವ್ಯಾಪ್ತಿಯಲ್ಲಿ ಖಾಲಿ ಇರುವ ನಿವೇಶನಗಳಲ್ಲಿ ಬೆಳೆದಿರುವ ಕಳೆ ಗಿಡಗಳನ್ನು ಸ್ವಚ್ಛಗೊಳಿಸದ ಸ್ವತ್ತಿನ ಮಾಲೀಕರಿಗೆ ದಂಡ ವಿಧಿಸುವ ಬಗ್ಗೆ, ವಾಟರ್‌ಟ್ಯಾಂಕ್ ಸರ್ಕಲ್‌ಗೆ ಡಾ.ಎಂ.ಆರ್.ಅಯ್ಯಂಗಾರ್ ಸ್ಮರಣಾರ್ಥ ಅವರ ಹೆಸರನ್ನು ಇಡುವ ಬಗ್ಗೆ, ಕೋರ್ಟ್ನಲ್ಲಿ ಇತ್ಯರ್ಥಗೊಂಡಿರುವ ಮಳಿಗೆಗಳನ್ನು ಖುಲ್ಲಾಪಡಿಸಿ, ಹರಾಜು ನಡೆಸುವ ವಿಚಾರ, ಮೀನು ಮಾರ್ಕೆಟ್, ಹೂವು, ಹಣ್ಣಿನ ಮಳಿಗೆಗಳ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡು ಖಾಲಿ ಮಾಡಿಸಲು ಸೂಚಿಸಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.ಪಂಚಾಯಿತಿ ಸದಸ್ಯರಾದ ಎಚ್.ಆರ್.ರೇಖಾ, ಸುಜಾತಾ, ಹೇಮಾವತಿ, ಎಂಜಿನಿಯರ್ ರಾಜೇಶ್ ಸಭೆಯಲ್ಲಿ ಇದ್ದರು.

Share this article