ಕನ್ನಡಪ್ರಭ ವಾರ್ತೆ ಮಂಡ್ಯ
ನಾಗಮಂಗಲ ತಾಲೂಕಿನ ನೆಲ್ಕುಂದಿ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಕೈಯ್ಯಲ್ಲಿ ಬಾಂಡ್ಲಿ, ಗುದ್ದಲಿ ಹಿಡಿದು ಕಲ್ಲು-ಮರಳನ್ನು ಹೊತ್ತು ಹಾಕುವ ಕೆಲಸಕ್ಕೆ ಶಿಕ್ಷಕರು ಬಳಸಿಕೊಂಡಿರುವುದು ಕಂಡುಬಂದಿದೆ. ಈ ವಿಚಾರವಾಗಿ ಗ್ರಾಮಸ್ಥರು ಶಿಕ್ಷಕರನ್ನು ತರಾಟೆ ತೆಗೆದುಕೊಂಡಿದ್ದಾರೆ.
ಪರೀಕ್ಷೆಗಳು ಸಮೀಪಿಸುತ್ತಿರುವ ಸಮಯದಲ್ಲಿ ಮಕ್ಕಳನ್ನು ಓದುವ ಕಡೆ ಆಸಕ್ತಿ ಮೂಡಿಸುವಂತೆ ಮಾಡಬೇಕಾದ ಶಿಕ್ಷಕರು ಅವರ ಕೈಗೆ ಪುಸ್ತಕ-ಪೆನ್ನು ನೀಡುವ ಬದಲು ಬಾಂಡ್ಲಿ, ಗುದ್ದಲಿ ಕೊಟ್ಟು ಕಲ್ಲು-ಮರಳು ಹೊರುವುದಕ್ಕೆ, ಸಿಮೆಂಟ್ ಕಲಸುವ ಕೆಲಸಕ್ಕೆ ನಿಯೋಜಿಸಿರುವುದು ದುರ್ದೈವ. ಮಕ್ಕಳನ್ನು ಹೊರತುಪಡಿಸಿ ಬೇರೆ ಕೂಲಿ ಕೆಲಸದವರು ಶಿಕ್ಷಕರಿಗೆ ಸಿಗಲಿಲ್ಲವೇ ಅಥವಾ ಹಣ ಖರ್ಚಾಗುತ್ತೆ ಅಂತ ಮಕ್ಕಳನ್ನೇ ಕೂಲಿಯಾಳುಗಳನ್ನಾಗಿ ಮಾಡಿದರೇ ಎಂಬುದು ಪ್ರಶ್ನಾರ್ಹವಾಗಿದೆ.ಈ ಬಗ್ಗೆ ಸ್ಥಳೀಯರು ಪ್ರಶ್ನೆ ಮಾಡಿದರೆ ನಾವೂ ಈ ಕೆಲಸ ಮಾಡುತ್ತಿದ್ದೇವೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ನಿಮ್ಮ ಮಕ್ಕಳನ್ನು ಕರೆತಂದು ಈ ಕೆಲಸ ಮಾಡಿಸುವಿರಾ ಎಂಬ ಪ್ರಶ್ನೆಗೆ ಶಿಕ್ಷಕರಿಂದ ಉತ್ತರವಿಲ್ಲ. ಹಳ್ಳಿಯ ಜನರು ತಮ್ಮ ಮಕ್ಕಳು ವಿದ್ಯೆ ಕಲಿಯಲೆಂದು ಶಾಲೆಗೆ ಕಳುಹಿಸುವರೇ ಹೊರತು ಅವರಿಂದ ಗಾರೆ ಕೆಲಸ ಮಾಡಿಸುವುದಕ್ಕಲ್ಲ ಎಂದು ಸ್ಥಳೀಯರು ಶಿಕ್ಷಕರ ವಿರುದ್ಧ ಹರಿಹಾಯ್ದಿದ್ದಾರೆ.
ಶಾಲಾ ಮಕ್ಕಳಿಂದ ಗಾರೆ ಕೆಲಸ ಮಾಡಿಸುತ್ತಿರುವ ಬಗ್ಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಹಿಂದೆಯೇ ಕೆಲಸದಲ್ಲಿ ತೊಡಿಗಿದ್ದ ಎಲ್ಲಾ ಮಕ್ಕಳನ್ನು ಶಿಕ್ಷಕರು ಶಾಲೆಯೊಳಗೆ ಕಳುಹಿಸಿದರು. ಈ ವಿಚಾರವನ್ನು ಎಲ್ಲಿಯೂ ಬಹಿರಂಗಪಡಿಸದಂತೆ ಶಿಕ್ಷಕರು ಅಂಗಲಾಚುತ್ತಿದ್ದುದು ಕಂಡುಬಂದಿತು.ಉದ್ದೇಶಪೂರ್ವಕವಾಗಿ ತಪ್ಪಾಗಿದ್ದರೆ ಕ್ರಮ
- ಎನ್.ಚಲುವರಾಯಸ್ವಾಮಿ, ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು.