ಶಿವಮೊಗ್ಗ: ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಸೆ.12ರಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶಿವಮೊಗ್ಗ ಜಿಲ್ಲಾ ಬಂಜಾರ ಸಂಘ, ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಗುರುವಾರ 7ನೇ ದಿನಕ್ಕೆ ಕಾಲಿಟ್ಟಿದ್ದು, ಶಿವಮೂರ್ತಿ ವೃತ್ತದಲ್ಲಿ ರಸ್ತೆತಡೆ ನಡೆಸಿ, ಸರ್ಕಾರದ ಶವವನ್ನು ಇಟ್ಟು ಪ್ರತಿಭಟಿಸಿದರು.
ಪ್ರತಿಭಟನಾಕಾರರು ಶಿವಮೂರ್ತಿ ವೃತ್ತದಲ್ಲಿ ಟ್ರಾಕ್ಟರ್‌ಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ರಸ್ತೆ ತಡೆ ನಡೆಸಿದರು. ಇದರಿಂದ ಸವಳಂಗ ರಸ್ತೆ, ಕುವೆಂಪು ರಸ್ತೆ ಮತ್ತು ಜಯನಗರ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ, ವಾಹನಗಳು ಸಾಲುಗಟ್ಟಿ ನಿಂತವು. ನಂತರ ಪ್ರತಿಭಟನಾಕಾರರು ಅಣಕು ಶವದೊಂದಿಗೆ ಜಿಲ್ಲಾಧಿಕಾರಿ ಕಚೇರಿಯತ್ತ ಶವಯಾತ್ರೆ ನಡೆಸಿದರು.ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಮಾಜಿ ಶಾಸಕ ಅಶೋಕ್ ನಾಯ್ಕ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಅವರು ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಈ ಒಳಮೀಸಲಾತಿಯಿಂದ ಮೀಸಲಾತಿಯ ಮೂಲ ಉದ್ದೇಶವೇ ಹಾಳಾಗಲಿದೆ. ಆದ್ದರಿಂದ ನಾವು ಮೀಸಲಾತಿಯ ಶವಯಾತ್ರೆ ನಡೆಸುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದಲ್ಲಿ ಬಂಜಾರ ಸಮುದಾಯಕ್ಕೆ 4.5 ಮೀಸಲಾತಿ ನೀಡಲಾಗಿತ್ತು. ಸುಪ್ರೀಂಕೋರ್ಟಿನ ಮಾನದಂಡಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಸಿದ್ಧಪಡಿಸಲಾಗಿರುವ ನಾಗಮೋಹನ್‌ದಾಸ್ ವರದಿಯು ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ಮುಂದುವರಿದ ಭಾಗದಂತ್ತಿದ್ದು, ಈ ವರದಿಯ ಸಾರಾಂಶಗಳು ವಾಸ್ತವಿಕ ಅಂಕಿಸಂಖ್ಯೆಗಳಿಂದ ದೂರವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಶಿಕ್ಷಣ, ಉದ್ಯೋಗ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಯ ಅಂಕಿಅಂಶಗಳು ದಮನಿತ ಸಮುದಾಯಗಳ ಅನುಮಾನಕ್ಕೆ ಕಾರಣವಾಗಿದೆ. ಈ ಅಂಕಿಅಂಶಗಳನ್ನು ಯಾವ ಮೂಲದಿಂದ ಪಡೆಯಲಾಗಿದೆ ಎಂಬುದನ್ನು ಆಯೋಗ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.ಪರಿಶಿಷ್ಟ ಜಾತಿಯ ನಿಖರ ಅಂಕಿ ಸಂಖ್ಯೆಗಳನ್ನು ಸರ್ಕಾರದ ಇಲಾಖೆಗಳು ನೀಡಿಲ್ಲ. ಸರ್ಕಾರ ಈ ಅಪೂರ್ಣ ವರದಿಯನ್ನೇ ಸಣ್ಣ-ಪುಟ್ಟ ಬದಲಾವಣೆಯೊಂದಿಗೆ ಜಾರಿಗೊಳಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು.
ಪ್ರತಿಭಟನಾ ಸಂದರ್ಭದಲ್ಲಿ ಬಂಜಾರ ಸಮುದಾಯದ ಗುರುಗಳಾದ ಸೈನಾ ಭಗತ್ ಮಹಾರಾಜ್, ಕೆ.ಜೆ.ನಾಗೇಶ್ ನಾಯ್ಕ್, ಬಸವರಾಜ್ ನಾಯ್ಕ್, ನಾನ್ಯಾನಾಯ್ಕ್, ಜಗದೀಶ್ ನಾಯ್ಕ್, ನಾಗರಾಜ್ ನಾಯ್ಕ್, ಗಂಗಾನಾಯ್ಕ್, ರಮೇಶ್ ನಾಯ್ಕ್, ಶಿವಾನಾಯ್ಕ್, ಗಿರೀಶ್ ನಾಯ್ಕ್, ಆನಂದ್ ನಾಯ್ಕ್ ಮೊದಲಾದವರು ಭಾಗವಹಿಸಿದ್ದರು.