ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಸಾಲ ಮನ್ನಾಕ್ಕಾಗಿ ರೈತರು ಬರಗಾಲ ಬರಬೇಕೆಂದು ಆಶಿಸುತ್ತಾರೆ ಎಂದು ಹೇಳಿರುವುದನ್ನು ಖಂಡಿಸಿ, ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ, ನಗರದಲ್ಲಿ ಜಿಲ್ಲಾ ರೈತ ಸಂಘ ರಸ್ತೆತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.ನಗರದ ಜಾಲಹುಂಡಿ ಬಳಿಯ ೨೦೯ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಮಾಯಿಸಿದ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸಚಿವ ಶಿವಾನಂದ ಪಾಟೀಲ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಸಚಿವ ಸ್ಥಾನದಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಅನ್ನ ನೀಡುವ ರೈತರ ಬಗ್ಗೆ ರಾಜ್ಯ ಸರ್ಕಾರದ ಮಂತ್ರಿಯಾದ ಶಿವಾನಂದ ಪಾಟೀಲ್ ಅವಿವೇಕತನದಿಂದ ರೈತರು ಬರಗಾಲವನ್ನು ಬರಬೇಕೆಂದು ಆಶಿಸುತ್ತಾರೆ, ಸಾಲ ಮನ್ನಾವನ್ನು ಮಾಡಿ ಎಂದು ಸರ್ಕಾರವನ್ನು ಒತ್ತಾಯಿಸುತ್ತಾರೆ ಎಂದು ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ ಎಂದರು.ವಿದ್ಯುತ್ ಅನ್ನು ಉಚಿತವಾಗಿ ಕೊಡಲಾಗುತ್ತಿದೆ. ಗೊಬ್ಬರದ ಸಬ್ಸಿಡಿ ನೀಡಲಾಗುತ್ತಿದೆ ಎಂದಿರುವ ಅವರ ಹೇಳಿಕೆ ಅವಿವೇಕತನದಿಂದ ಕೂಡಿದ್ದು, ಯಾರ ದುಡ್ಡಲ್ಲಿ ಕೊಡುತ್ತಾರೆ, ರೈತರ ಮತ್ತು ನಾಗರಿಕರ ತೆರಿಗೆ ಹಣದಿಂದ ಎಂಬ ಪರಿಜ್ಞಾನವು ಇಲ್ಲದೇ ಮಾತನಾಡಿರುವುದು ಅವರ ಬೇಜವಾಬ್ದಾರಿತನವನ್ನು ತೋರುತ್ತದೆ ಎಂದರು.
ತಕ್ಷಣ ಶಿವಾನಂದ ಪಾಟೀಲ್ ರೈತರ ಕ್ಷಮೆಯನ್ನು ಕೇಳಬೇಕು, ಸಚಿವ ಸಂಪುಟದಿಂದ ಮುಖ್ಯಮಂತ್ರಿಗಳು ಇವರನ್ನು ವಜಾ ಮಾಡಬೇಕು ಇಲ್ಲವಾದರೆ ಶಿವಾನಂದ ಪಾಟೀಲ್ ಜಿಲ್ಲೆಗೆ ಬಂದರೆ ಕಪ್ಪು ಬಾವುಟ ಪ್ರದರ್ಶಿಸಿ, ಕೊಳೆತ ಹಣ್ಣಿನಿಂದ ಹೊಡೆದು ಪ್ರವಾಸ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಮಂಚಹಳ್ಳಿ ಮಹೇಶ್, ಶಿವಪ್ರಕಾಶ್, ನಂದೀಶ್, ಮಲ್ಲೇಶ್, ಬೆಳ್ಳಶೆಟ್ಟಿ, ರಾಜು ಇತರರು ಭಾಗವಹಿಸಿದ್ದರು.
ಕೊಳ್ಳೇಗಾಲದಲ್ಲೂ ಸಚಿವರ ವಿರುದ್ಧ ಪ್ರತಿಭಟನಾ ಮೆರವಣಿಗೆಕೊಳ್ಳೇಗಾಲ: ಸಕ್ಕರೆ ಮತ್ತು ಜವಳಿ ಸಚಿವ ಶಿವಾನಂದ ಪಾಟೀಲರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ಲ್ಲಿನ ರಾಜ್ಯ ರೈತ ಸಂಘದ(ಪುಟ್ಟಣಯ್ಯಬಣ) ರೈತ ಸಂಘದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಆರ್.ಎಂ.ಸಿ. ಆವರಣದಲ್ಲಿ ಜಮಾಯಿಸಿದ್ದ ರೈತರು ಸಭೆ ನಡೆಸಿ ಬಳಿಕ ಕುರಬನಕಟ್ಟೆ ರಸ್ತೆ, ಐಬಿ ರಸ್ತೆ, ತಾ.ಪಂ ವೃತ್ತ, ಎಂ.ಜಿ.ಎಸ್.ವಿ ರಸ್ತೆ, ಬಸ್ ನಿಲ್ದಾಣ ರಸ್ತೆ, ಡಾ.ವಿಷ್ಣು ರಸ್ತೆ, ಡಾ. ರಾಜ್ ರಸ್ತೆ, ಡಾ. ಅಂಬೇಡ್ಕರ್ ರಸ್ತೆ, ಎಡಿಬಿ ಸರ್ಕಲ್ ಮೂಲಕ ತಾಲೂಕು ಕಚೇರಿಗೆ ತಲುಪಿದರು.ಮೆರವಣಿಗೆ ವೇಳೆ ಡಾ.ಅಂಬೇಡ್ಕರ್ ಮುಂಭಾಗದ ಎನ್.ಹೆಚ್ ರಸ್ತೆಯನ್ನು ತಡೆದು ಧಿಕ್ಕಾರ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಸಕಾ೯ರ ಕೂಡಲೆ ಲಘುವಾಗಿ ಮಾತನ್ನಾಡಿರುವ ಸಚಿವರ ವಿರುದ್ಧ ಕ್ರಮಕ್ಕೆ ಆಗ್ರಹಿದರು
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಜಿಲ್ಲಾ ಕಾಯಂ ಸದಸ್ಯ ಬಸವರಾಜು, ರವಿನಾಯ್ಡು,ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಶಿವಮಲ್ಲು, ಪ್ರಧಾನ ಕಾರ್ಯದರ್ಶಿ ಪೆರಿಯಾನಾಯಗಂ, ಲೋಕೇಶ್ ಗೌಡ, ಶಿವರಾಮ್, ನಟೇಶ್, ಮಲ್ಲೇಶ್, ಗೋವಿಂದರಾಜು, ಮಹಿಳಾ ಘಟಕ ಜಿಲ್ಲಾಧ್ಯಕ್ಷ ಮಾದಮ್ಮ, ಚೆಲುವನಹಳ್ಳಿ ಮಲ್ಲಿಕಾರ್ಜುನಸ್ವಾಮಿ, ಹನೂರು ತಾಲೂಕು ಅಧ್ಯಕ್ಷ ಅಮ್ಜಾದ್ ಖಾನ್ ಇನ್ನಿತರರು ಇದ್ದರು.